ಮಂಗಳೂರು,ಜ.23 : ಇಡೀ ರಾಜ್ಯವನ್ನೇ ಸ್ವಚ್ಚ ರಾಜ್ಯವನ್ನಾಗಿಸುವ ದಿಸೆಯಲ್ಲಿ ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ಪ್ರಮುಖ ನಗರಗಳನ್ನು ನಿರ್ಮಲ ನಗರ ಯೋಜನೆಯಡಿಯಲ್ಲಿ ತರಲು ಉದ್ದೇಶಿಸಿದೆ ಎಂದು ನಗರಾಭಿವೃದ್ಧಿ ಖಾತೆ ಸಚಿವ ವಿನಯಕುಮಾರ್ ಸೊರಕೆ ತಿಳಿಸಿದ್ದಾರೆ ಅವರು ಶುಕ್ರವಾರ ಮಂಗಳೂರು ನಗರದ ಜೆಪ್ಪಿನಮೊಗರು ಎಣ್ಣೆಮಾರ್ ನಲ್ಲಿ ಕುಡ್ಸೆಂಪ್ ಯೋಜನೆಯಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಒಳಚರಂಡಿ ಯೋಜನೆಯ 20 ಎಂಎಲ್‌ಡಿ ಸಾಮರ್ಥ್ಯದ ಜಲತ್ಯಾಜ್ಯ ಸಂಸ್ಕರಣಾ ಘಟಕ ಉದ್ಘಾಟಿಸಿ ಮಾತನಾಡಿದರು..
ಘನತ್ಯಾಜ್ಯದಿಂದ ಗೊಬ್ಬರ, ಇಂಧನ ಸೇರಿದಂತೆ ಇನ್ನೂ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದ್ದು, ರಾಜ್ಯದ ಪ್ರಮುಖ ನಗರಗಳಲ್ಲಿ ಪ್ರತಿ ನಿತ್ಯ ಸಂಗ್ರಹವಾಗುವ ಸಾವಿರಾರು ಟನ್‌ಗಳಷ್ಟು ತ್ಯಾಜ್ಯ ಸಮರ್ಪಕ ಬಳಕೆಗಾಗಿ ಪ್ರತ್ಯೇಕ “ಘನತ್ಯಾಜ್ಯ ಪ್ರಾಧಿಕಾರವನ್ನು” ರಚಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಅವರು ತಿಳಿಸಿದರು. ಉದ್ಘಾಟನೆಯಾಗಿರುವ ಈ ಜಲತ್ಯಾಜ್ಯ ಸಂಸ್ಕರಣಾ ಘಟಕವು ಮೂರನೆಯದಾಗಿದ್ದು, ಮತ್ತೊಂದು ಘಟಕವನ್ನು ಮುಂದಿನ ವಾರ ಸುರತ್ಕಲ್ ಪ್ರದೇಶದಲ್ಲಿ ಉದ್ಘಾಟಿಸಲಾಗುವುದೆಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಜೆ.ಆರ್.ಲೊಬೊ ಅವರು ಮಾತನಾಡಿ, ಮಂಗಳೂರು ನಗರ ರಾಜ್ಯದಲ್ಲಿ ಮಲೇರಿಯಾದಲ್ಲಿ ನಂ.1 ಆಗಿದೆ ಇದರಿಂದ ಜನರಲ್ಲಿ ಅನಾರೋಗ್ಯ ಹೆಚ್ಚಾಗಿದೆ, ಇದು ಕೇವಲ ಆರೋಗ್ಯ ಸಮಸ್ಯೆಯಾಗಿರದೆ ಮಂಗಳೂರಿನಲ್ಲಿ ವಿವಿಧ ವ್ಯಾಪಾರ ವಹಿವಾಟಿನಲ್ಲಿ ಬಂಡವಾಳ ಹೂಡಿಕೆದಾರರು ಹಿಂಜರಿಯುವಂತೆ ಮಾಡಿದೆ, ಇದು ನಮ್ಮಲ್ಲಿ ನಿರುದ್ಯೋಗಕ್ಕೂ ಹಾಗೂ ಆರ್ಥಿಕ ತೊಂದರೆಗೂ ಕಾರಣವಾಗುತ್ತಿದೆ ಆದ್ದರಿಂದ ನಾವು ಮೂದಲು ದೊಡ್ಡ ದೊಡ್ಡ ಮೋರಿಗಳಿಗೆ ಕಸ ಇನ್ನಿತರ ತ್ಯಾಜ್ಯಗಳನ್ನು ಹಾಕದೆ ನಗರವನ್ನು ನಿರ್ಮಲ ನಗರವನ್ನಾಗಿಸಲು ಎಲ್ಲರೂ ಒಂದಾಗಬೇಕೆಂದು ಹಾಗೂ ಮಂಗಳೂರು ನಗರವನ್ನು ಮಲೇರಿಯಾ ಮುಕ್ತ ನಗರವನ್ನಾಗಿಸಲು ಸಹಕರಿಸಬೇಕೆಂದು ಕರೆ ನೀಡಿದರು.
ಮಂಗಳೂರು ಮಹಾನಗರಪಾಲಿಕೆ ಉಪ ಅಯುಕ್ತರಾದ ಗೊಕುಲದಾಸ್ ನಾಯಕ್ ಅವರು ಮಾತನಾಡಿ ಜೆಪ್ಪಿನಮೊಗರು ಜಲತ್ಯಾಜ್ಯ ಘಟಕ 13 ಎಕರೆ ಪ್ರದೇಶದಲ್ಲಿ ರೂ.11 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು ಮಂಗಳೂರು ನಗರದ ಶೇ.25-30 ಭಾಗಕ್ಕೆ ಇದರಿಂದ ಪ್ರಯೋಜನವಾಗಲಿದೆ ಎಂದು ಪ್ರಾಸ್ತಾವಿಕವಾಗಿ ತಿಳಿಸಿ ಎಲ್ಲರನ್ನೂ ಸಭೆಗೆ ಸ್ವಾಗತಿಸಿದರು.
ಸಮಾರಂಭದ ಅದ್ಯಕ್ಷತೆಯನ್ನು ಮೇಯರ್ ಮಹಾಬಲಮಾರ್ಲ ವಹಿಸಿದ್ದರು. ಉಪಮೇಯರ್ ಕವಿತ, ವಿರೋದ ಪಕ್ಷದ ನಾಯಕ ಪ್ರೇಮಾನಂದ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು