ಕುಂದಾಪುರ: ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಟಾನದಿಂದ ಪರಿಣಾಮವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ ಎಂದು ಮಾಜೀ ಮುಖ್ಯಮಂತ್ರಿ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸೋಮವಾರ ತಲ್ಲೂರಿನ ಶ್ರೀ ಮಹಾಂಕಾಳಿ ದೇವಸ್ಥಾನ ಮತ್ತು ಶ್ರೀ ಕೋಟಿ ಚೆನ್ನಯ್ಯರ ಗರಡಿ ನೂತನ ಶಿಲಾ ದೇಗುಲ ಸಮರ್ಪಣೆಯ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಆಗಮಿಸುವ ಮುನ್ನ ಸಮೀಪದ ಬಟ್ರಹಿತ್ಲು ಪಂಚಮುಖಿ ನಿಲಯದ ಸಾಕು ಗಣಪ ಮೊಗವೀರ ಅವರ ಮನೆಯಲ್ಲಿ ನಡೆದ ಭಾರತಮಾತಾ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ತಾಲೂಕಿನ ಗಂಗೊಳ್ಳಿ ಮತ್ತು ಕೋಡಿಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ಗಮನಕ್ಕೆ ತಂದಾಗ ಪ್ರತಿಕ್ರಿಯಿಸಿದ ಅವರು, ಮುಂದಿನ ದಿನಗಳಲ್ಲಿ ಇಂತಹಾ ಘಟನೆಗಳು ನಡೆಯದಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಎಂದರು.
ದೇಶದಾದ್ಯಂತ ಅಭಿವೃದ್ಧಿ ಸಾಧಿಸಲಾಗುತ್ತಿದ್ದು, ಜ.೨೬ರಂದು ಎಲ್ಲೆಡೆ ಮನೆ ಮನೆಗಳಲ್ಲಿ ಭಾರತ ಮಾತಾ ಪೂಜಾ ವಿಧಿ ವಿಧಾನಗಳು ನಡೆಯುತ್ತಿವೆ. ಗಣರಾಜ್ಯದ ದಿನ ಇಂತಹಾ ಕಾರ್ಯಕ್ರಮ ನಡೆಯುತ್ತಿರುವುದು ಅಭಿವೃದ್ಧಿಯ ಸಂಕೇತವಾಗಿದೆ. ಪ್ರತಿಯೊಬ್ಬನೂ ದೇಶಭಕ್ತಿ ಹೊಂದಿದಾಗ ಅಭಿವೃದ್ಧಿ ಸಾಧ್ಯ ಎಂದವರು ಅಭಿಪ್ರಾಯಪಟ್ಟರು.
ಕೆರಾಡಿ ಗ್ರಾಮವನ್ನು ದತ್ತು ಸ್ವೀಕರಿಸಿದ್ದ ಯಡಿಯೂರಪ್ಪನವರನ್ನು ಪತ್ರಕರ್ತರು ಕಸ್ತೂರಿ ರಂಗನ್ ವರದಿಯಿಂದ ಅಭಿವೃದ್ಧಿ ಕುಂಠಿತವಾಗದೇ ಎಂದು ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ವರದಿಯ ಪೂರ್ಣ ಪಾಠದಲ್ಲಿ ಮೂಲನಿವಾಸಿಗಳು ಹಾಗೂ ಕೃಷಿಕರಿಗೆ ತೊಂದರೆಯಾಗದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕ್ರಮಕೈಗೊಳ್ಳಬೇಕಾಗುತ್ತದೆ ಎನ್ನಲಾಗಿದ್ದು, ಕಸ್ತೂರಿ ರಂಗನ್ ವರದಿಯ ಸಾಧಕ ಬಾಧಕಗಳ ಚರ್ಚೆ ನಡೆಸಿ ನಿವಾಸಿಗಳಿಗೆ ತೊಂದರೆಯಾಗದಂತೆ ವರದಿ ಅನುಷ್ಟಾನಕ್ಕೆ ಒತ್ತಡ ತರಲಾಗುತ್ತದೆ. ಕೆಲವು ಗ್ರಾಮಗಳನ್ನು ಈ ವರದಿಯಿಂದ ಕೈಬಿಡುವ ಬಗ್ಗೆಯೂ ಚರ್ಚಿಸಲಾಗುತ್ತಿದೆ ಎಂದವರು ಹೇಳಿದರು.
ಈ ಸಂದರ್ಭ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಮಾಜೀ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬೈಂದೂರು ಬಿಜೆಪಿ ಅಧ್ಯಕ್ಷ ಬಿ.ಎಂ.ಸುಕುಮಾರ ಶೆಟ್ಟಿ, ಕಾಯದರ್ಶಿ ಸದಾನಂದ ಉಪ್ಪಿನಕುದ್ರು ಮೊದಲಾದವರು ಇದ್ದರು.
ಧರ್ಮ ಮಾರ್ಗದಿಂದ ಶಾಂತಿ, ನೆಮ್ಮದಿಯ ಬದುಕು ಸಾಧ್ಯ : ಯಡಿಯೂರಪ್ಪ
ಪ್ರತಿಯೊಬ್ಬ ವ್ಯಕ್ತಿಯು ಧರ್ಮ ಮಾರ್ಗದಲ್ಲಿ ನಡೆದಾಗ ಬದುಕು ನೆಮ್ಮದಿಯ ತಾಣವಾಗುತ್ತದೆ. ದೈವ ದೇವರ ಮೇಲಿನ ನಂಬಿಕೆ, ಶ್ರದ್ಧೆಯಿಂದ ಆತ್ಮ ವಿಶ್ವಾಸ ವೃದ್ಧಿಸುತ್ತದೆ ಆದುದರಿಂದ ಶ್ರೀ ಮಹಾಕಾಳಿ ತಾಯಿ ನಂಬಿದ ಭಕ್ತರ ಪಾಲಿಗೆ ಶುಭ ತರಲಿ, ಎಲ್ಲರೂ ಧರ್ಮ ಮಾರ್ಗದಲ್ಲಿ ಶಾಂತಿಯಿಂದ ಬಾಳುವಂತಾಗಲಿ ಎಂದ ಅವರು ತಲ್ಲೂರಿನ ಸರ್ವಾಂಗೀಣ ಅಭಿವೃದ್ಧಿಗೆ ಹಿಂದೆಯು ಸಹಕಾರ ನೀಡಿದ್ದು, ಮುಂದಿನ ದಿನಗಳಲ್ಲೂ ಇಲ್ಲಿನ ಜನ ನೆಮ್ಮದಿಯಿಂದ ಬದುಕಲು ಬೇಕಾಗುವ ಅಭಿವೃದ್ಧಿ ಕಾರ್ಯವನ್ನು ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ರಾಜ್ಯದ ಮಾಜಿ ಮುಖ್ಯಮಂತ್ರಿ, ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅವರು ಜ.೨೬ರಂದು ಕುಂದಾಪುರ ಸಮೀಪದ ತಲ್ಲೂರಿನ ಶ್ರೀ ಮಹಾಕಾಳಿ ದೇವಸ್ಥಾನ ಮತ್ತು ಶ್ರೀ ಕೋಟಿ ಚೆನ್ನಯ್ಯರ ಗರಡಿಯ ನೂತನ ಶಿಲಾದೇಗುಲ ಸಮರ್ಪಣೆ, ಪುನಃ ಪ್ರತಿಷ್ಠಾ ಮಹೋತ್ಸವ, ಬ್ರಹ್ಮಕಲಶಾಭಿಷೇಕ, ಚಂಡಿಕ ಹೋಮ, ವಾರ್ಷಿಕ ಕೆಂಡ ಸೇವೆಯ ಧಾರ್ಮಿಕ ಕಾರ್ಯಗಳ ಶುಭವಸರದಲ್ಲಿ ಭೇಟಿ ನೀಡಿ ಶ್ರೀ ದೇವರ, ದೈವಗಳ ದರ್ಶನ ಪಡೆದು ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ವಹಿಸಿ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ದೇವಳದ ಅಭಿವೃದ್ಧಿ ಕಾರ್ಯಕ್ಕೆ ಮಹತ್ತರ ಕೊಡುಗೆ ನೀಡಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದೇವಳದ ಶಿಲ್ಪಿ ಮಂಜುನಾಥ ಕಾರ್ಕಳ, ದೈವದ ಪಾತ್ರಿ ರಾಜು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಉಡುಪಿ ಚಿಕ್ಕಮಗಳೂರು ಲೋಕಸಭೆ ಸದಸ್ಯೆ ಶೋಭಾ ಕರಂದ್ಲಾಜೆ, , ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಬಿ. ಎಂ. ಸುಕುಮಾರ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಗೀತಾಂಜಲಿ ಸುವರ್ಣ, ನಿವೃತ್ತ ಅಧ್ಯಾಪಕ ಗಣಪಯ್ಯ ಶೆಟ್ಟಿ ಮಾರ್ಕೋಡು, ರವೀಂದ್ರ ವಿ. ಶೆಟ್ಟಿ ತಲ್ಲೂರು ದೊಡ್ಮನೆ, ಸರ್ವೋತ್ತಮ ಶೆಟ್ಟಿ ತಲ್ಲೂರು ದೊಡ್ಮನೆ, ಹೆಮ್ಮಾಡಿಯ ಪಂಚಗಂಗಾ ರೈತರ ಸೇವಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಕೋಟಿ ಪೂಜಾರಿ, ಉದ್ಯಮಿ ಸದಾನಂದ ಶೇರುಗಾರ್, ತಲ್ಲೂರಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಟಿ. ಕೆ. ಕೋಟ್ಯಾನ್, ದೇವಳದ ಆಡಳಿತ ಸಮಿತಿ ಅಧ್ಯಕ್ಷ ವಸಂತ ಆರ್. ಹೆಗ್ಡೆ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಟಿ.ಬಿ.ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೇವರಾಜ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.