ಕನ್ನಡ ವಾರ್ತೆಗಳು

ಮೂರು ದಿನಗಳ ಕ್ಯಾಂಪ್ಕೋ ಕೃಷಿ ಯಂತ್ರ ಮೇಳಕ್ಕೆ ತೆರೆ – ಮೇಳದ ಯಶಸ್ಸಿನಿಂದ ಅಡಿಕೆ ಬೆಳೆಗಾರರಲ್ಲಿ ಭರವಸೆ :ಕೊಂಕೋಡಿ ಪದ್ಮಾನಾಭ

Pinterest LinkedIn Tumblr

ಪುತ್ತೂರು : ಕ್ಯಾಂಪ್ಕೋ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಈ ಮೂರನೆಯ ಕೃಷಿ ಯಂತ್ರ ಮೇಳ ಈ ಹಿಂದಿನ ಮೇಳಗಳಿಗಿಂತ ಯಶಸ್ಸು ಕಂಡಿದೆ. ರೈತರಲ್ಲಿ ಹೊಸತೊಂದು ಚಿಂತನೆಯನ್ನು ಮೂಡಿಸಿದೆ. ಅಡಿಕೆ ಬೆಳೆಗಾರರಿಗೆ ಭರವಸೆ ಮೂಡಿಸಿದೆ. ಅಡಿಕೆ ನಿಷೇಧ ಅಗುವುದಿಲ್ಲ ಎಂಬುದನ್ನು ದೃಢ ಪಡಿಸಿದೆ. ಒಟ್ಟಿನಲ್ಲಿ ರೈತರ ಪಾಲಿಗೆ ತೃಪ್ತಿದಾಯಕವಾಗಿ ಕಂಡಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮಾನಾಭ ತಿಳಿಸಿದರು.

ಅವರು ಸೋಮವಾರ ಕ್ಯಾಂಪ್ಕೋ ವತಿಯಿಂದ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ವಿವೇಕಾನಂದ ಪಾಲಿಟೆಕ್ನಿಕ್ ಸಹಯೋಗದೊಂದಿಗೆ 3 ನೇ ಕೃಷಿಯಂತ್ರ ಮೇಳದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೃಷಿ ಕ್ಷೇತ್ರ ಇನ್ನಷ್ಟು ಆಧುನೀಕರಣ ವಾಗಬೇಕು, ಯಂತ್ರಗಳ ಬಳಕೆ ಹೆಚ್ಚಾಗಬೇಕು. ಯುವಕರು ಕೃಷಿ ಕ್ಷೇತ್ರದತ್ತ ಆಗಮಿಸುವಂತಾಗಬೇಕು ಎಂಬುದು ಕ್ಯಾಂಪ್ಕೋ ಉದ್ದೇಶ. ಈ ಹಿನ್ನೆಲೆಯಲ್ಲಿ ಕೃಷಿಯಂತ್ರ ಮೇಳ ಆಯೋಜನೆಯಾಗಿದೆ. ಈಗ ಯಂತ್ರಮೇಳ ಯಶಸ್ವಿಯಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಹೇಳಿದರು.

ಕೃಷಿ ಯಂತ್ರಮೇಳದಲ್ಲಿ ಈ ಬಾರಿ ವಿದ್ಯಾರ್ಥಿಗಳ ಕಾಳಜಿ ಹೆಚ್ಚಾಗಿದೆ. ಹೀಗಾಗಿ ಪ್ರೋತ್ಸಾಹ ನೀಡುವ ಕೆಲಸ ನಡೆಯುತ್ತಿದೆ. ಕೃಷಿ ಯಂತ್ರಗಳ ಸಂಶೋಧನೆ ಕಡೆಗೆ ವಿದ್ಯಾರ್ಥಿಗಳು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದರು. ಮುಂದೆ 2018 ಕ್ಕೆ ಮತ್ತೆ ಕೃಷಿ ಯಂತ್ರ ಮೇಳ ಕ್ಯಾಂಪ್ಕೋ ಆಡಳಿತ ಮಂಡಳಿ ನಡೆಸುತ್ತದೆ ಎಂಬ ವಿಶ್ವಾಸ ಇದೆ. ನಿಶ್ಚಿತವಾಗಿಯೂ ಈ ಬಗ್ಗೆ ಯೋಚನೆ ನಡೆಯಲಿದೆ ಎಂದು ಘೋಷಿಸಿದರು.

ವಾರಣಾಸಿ ಸುಬ್ರಾಯ ಭಟ್ ಪ್ರಶಸ್ತಿ ಪ್ರದಾನ:

ಕೃಷಿ ಯಂತ್ರ ಮೇಳದಲ್ಲಿ ಪ್ರದರ್ಶನಗೊಂಡ ವಿದ್ಯಾರ್ಥಿಗಳು ತಯಾರಿಸಿದ 43 ಯಂತ್ರೋಪಕರಣಗಳ ಪೈಕಿ ಅತ್ಯುತ್ತಮವಾದ 2 ಪ್ರಾಜೆಕ್ಟ್‌ಗಳಿಗೆ ಕ್ಯಾಂಪ್ಕೋ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ವಾರಣಾಸಿ ಸುಬ್ರಾಯ ಭಟ್ ಹೆಸರಿನಲ್ಲಿ ರೂ. 50 ಸಾವಿರ ಮೊತ್ತದ ಪ್ರಥಮ ಮತ್ತು ರೂ. 25 ಸಾವಿರ ವೌಲ್ಯದ ದ್ವಿತೀಯ ಪ್ರಶಸ್ತಿ ನೀಡಲಾಗಿದ್ದು, ಪುತ್ತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾರ್ಥಿ ತಂಡಕ್ಕೆ ಪ್ರಥಮ ಪ್ರಶಸ್ತಿ ಮತ್ತು ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾರ್ಥಿ ತಂಡಕ್ಕೆ ದ್ವಿತೀಯ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿ ವಿಜೇತ ತಂಡಕ್ಕೆ ಸಮಾರೋಪ ಸಮಾರಂಭದಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಪ್ರದರ್ಶನಲ್ಲಿ ಭಾಗವಹಿಸಿದ್ದ ಎಲ್ಲಾ ತಂಡದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕ್ಯಾಂಪ್ಕೋ ಉಪಾಧ್ಯಕ್ಷ ಕೆ.ಸತೀಶ್ಚಂದ್ರ ಭಂಡಾರಿ, ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಎಂ., ವಿವೇಕಾನಂದ ಪಾಲಿಟೆಕ್ನಿಕ್ ಅಧ್ಯಕ್ಷ ರಾಧಾಕೃಷ್ಣ ಭಕ್ತ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಿವಪ್ರಸಾದ್, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯನಿರ್ವಹಣಾಧಿಕಾರಿ ಕೇಶವ ಭಟ್, ಕ್ಯಾಂಪ್ಕೋ ನಿರ್ದೇಶಕರಾದ ಕುಡೂರು ರಾಮಚಂದ್ರ ಭಟ್ ಮತ್ತಿತರರು ಇದ್ದರು.

ವಿವೇಕಾನಂದ ಪಾಲಿಟೆಕ್ನಿಕ್ ಅಧ್ಯಕ್ಷ ಎ.ವಿ. ನಾರಾಯಣ ಸ್ವಾಗತಿಸಿದರು. ಕ್ಯಾಂಪ್ಕೋ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ ವಂದಿಸಿದರು. ಉಪನ್ಯಾಸಕ ಹರಿಪ್ರಸಾದ್ ಡಿ. ಕಾರ್ಯಕ್ರಮ ನಿರೂಪಿಸಿದರು.

Write A Comment