ಕುಂದಾಪುರ: ಕೋಡಿ ಸಮೀಪದ ಹಳವಳ್ಳಿಯಲ್ಲಿ ಜ.೨೫ರಂದು ನಡೆದ ಗುಂಪು ಘರ್ಷಣೆಗೆ ಸಂಬಂಧಪಟ್ಟಂತೆ ಪೊಲೀಸ್ ಶಾಂತಿ ಸಭೆ ಕುಂದಾಪುರದ ತಾ.ಪಂ.ಸಭಾಂಗಣದಲ್ಲಿ ನಡೆಯಿತು.
ಕುಂದಾಪುರ ಉಪವಿಭಾಗದ ಡಿವೈಎಸ್‌ಪಿ ಮಂಜುನಾಥ್ ಶೆಟ್ಟಿ ಮಾತನಾಡಿ, ಘಟನೆಗೆ ಸಂಬಂಧಪಟ್ಟಂತೆ ಸತ್ಯಾಸತ್ಯತೆಯ ಮಾಹಿತಿಗೆ ಜನರು ಕೂಡಾ ಸಹಕಾರ ನೀಡಬೇಕು. ಇಲ್ಲಿ ಎರಡು ಕೋಮಿನವರ ಸಹಕಾರದಿಂದ ಮಾತ್ರ ನಿಜವಾದ ಅಪರಾಧಿಗಳನ್ನು ಕಂಡು ಹಿಡಿಯಲು ಸಾಧ್ಯವಿದ್ದು, ಪ್ರಚೋದನೆಗೆ ಅವಕಾಶ ಮಾಡಿಕೊಡುವ, ಉದ್ವಿಗ್ನತೆ ಸೃಷ್ಟಿಸುವ ವ್ಯಕ್ತಿಗಳ ವಿವರವನ್ನು ನೀಡಬೇಕು. ಯಾವುದೇ ವದಂತಿಗಳಿಗೂ ಜನರು ಕಿವಿಗೋಡಬಾರದು. ಘಟನೆ ನಡೆದ ಪ್ರದೇಶದಲ್ಲಿ ಪೊಲೀಸ್ ಬಿಗಿ ಭದ್ರತೆ ಇದ್ದು, ಇನ್ನೂ ಹೆಚ್ಚಿನ ರಕ್ಷಣೆಯನ್ನು ಬೇಕಿದ್ದರೆ ನೀಡಲಾಗುವುದು ಎಂದರು.
ಕೋಡಿಗೆ ೨೪ ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಹೆಲ್ಫ್‌ಲೈನ್ ವ್ಯವಸ್ಥೆ ಮಾಡಲಾಗುವುದು. ಚೆಕ್‌ಪೋಸ್ಟ್ ರಚನೆ ಹಾಗೂ ಅಚ್ಚುಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗುವುದು. ನೋಡೆಲ್ ಅಧಿಕಾರಿಯ ನಿಯೋಜನೆ ಮಾಡಲಾಗುವುದು. ರಸ್ತೆ ಬದಿಯಲ್ಲಿ ಅನಗತ್ಯವಾಗಿ ಕುಳಿತುಕೊಳ್ಳುವವರನ್ನು ನಿಯಂತ್ರಿಸುವುದರ ಜೊತೆಗೆ ಅವರ ಕ್ರಮ ಜರಗಿಸಲಾಗುವುದು ಎಂದರು.
ಯಾರೂ ಕೂಡಾ ಅಶಾಂತಿಯನ್ನು ಇಷ್ಟ ಪಡುವುದಿಲ್ಲ. ಗಲಾಟೆ ಸಂಭವಿಸಿದರೆ ಅದರಿಂದ ಎರಡು ಕೋಮಿಗೂ ನಷ್ಟ. ಹಾಗಾಗಿ ಇಂಥಹ ಘಟನೆಗಳು ಮರುಕಳಿಸದಂತೆ ಸಮುದಾಯದ ಹಿರಿಯರು ತಿಳುವಳಿಕೆ ನೀಡಬೇಕು. ನಿನ್ನೆ ನೆಡೆದ ಘಟನೆಗೆ ನಿಜವಾಗಿ ಯಾರು ಕಾರಣ ಎನ್ನುವುದನ್ನು ಗೊತ್ತಿದ್ದವರು ತಿಳಿಸಿ. ಮಪ್ತಿಯಲ್ಲಿ ತಪಾಸಣೆ ಮಾಡುತ್ತೇವೆ ಎಂದರು.
ಮಹಿಳೆಯರೇ ಹೆಚ್ಚಾಗಿದ್ದ ಸಭೆಯಲ್ಲಿ ಮಹಿಳೆಯರು ಮಾತನಾಡಿ, ಮತ್ತೆ ಮತ್ತೆ ಕೋಮು ಘರ್ಷಣೆಗಳು ನಡೆಯುತ್ತಲೇ ಇರುತ್ತದೆ. ಇಲ್ಲಿನವರಲ್ಲದ ವ್ಯಕ್ತಿಗಳು ಇಂಥಹ ಘಟನೆಗಳನ್ನು ಹುಟ್ಟು ಹಾಕುತ್ತಾರೆ. ಅಂಥಹ ಆರೋಪಿಗಳನ್ನು ಬಂಧಿಸಿ, ಸೂಕ್ತ ಶಿಕ್ಷೆ ವಿಧಿಸಬೇಕು. ಎರಡು ತಿಂಗಳಿಂದ ಇಲ್ಲಿ ಇಂಥಹ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಲೇ ಇದ್ದರೂ ನಿಜವಾದ ಆರೋಪಿಗಳ ಬಂಧವಾಗಿಲ್ಲ. ಬಸ್‌ಗಳಲ್ಲಿ ಹೆಣ್ಣೂ ಮಕ್ಕಳಿಗೆ ಚುಡಾಯಿಸುವುದು, ಮೊಬೈಲ್‌ನಲ್ಲಿ ಚಿತ್ರೀಕರಿಸುವುದು ಇಂಥಹ ವಿಕ್ಷಿಪ್ತ ಘಟನೆಗಳು ನಡೆಯುತ್ತಲೇ ಇದೆ ಎಂದು ಆರೋಪಿಸಿದರು.
ಮುಸ್ಲಿಂ ಸಮುದಾಯದ ಪ್ರಮುಖರು ಮಾತನಾಡಿ, ಕೋಡಿಯಲ್ಲಿ ಸಾಕಷ್ಟು ವರ್ಷಗಳಲ್ಲಿ ಹಿಂದೂ ಮುಸ್ಲಿಂ ಸಹಭಾಳ್ವೆಯಿಂದ ಜೀವನ ನಡೆಸುತಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ನೆಮ್ಮದಿಯನ್ನು ಕೆಡಿಸುವ ಕೃತ್ಯಗಳು ನಡೆಯುತ್ತಿದ್ದು, ನಿಜವಾದ ಅಪರಾಧಿ ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಆಗಬೇಕು ಎಂದರು.
ಕೋಡಿಯ ಕಿನಾರಾ ಬೀಚ್ ಸಮೀಪ ಜನ ಗುಂಪುಗೂಡುವುದು ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಹೀಗೆ ಗುಂಪುಗೂಡುವುದರಿಂದ ಘರ್ಷಣೆಗಳ ಸಾಧ್ಯತೆ ಜಾಸ್ತಿಯಾಗುತ್ತಿದೆ ಎನ್ನುವ ದೂರು ಕೇಳಿ ಬಂತು. ಕೋಡಿ ಬಸ್‌ನಲ್ಲಿ ಕೆಲವು ಯುವಕರು ಯುವತಿಯರಿಗೆ ಕಿರುಕುಳ ನೀಡುತ್ತಿರುವುದು ಕಂಡು ಬರುತ್ತಿದೆ ಎನ್ನುವುದು ಮಹಿಳೆಯರ ಇನ್ನೊಂದು ಆರೋಪ. ಕೋಡಿ ರಸ್ತೆಯ ಬದಿಯಲ್ಲಿ ಅನಗತ್ಯವಾಗಿ ಕುಳಿತುಕೊಳ್ಳುವರನ್ನು ನಿಯಂತ್ರಿಸಿ ಎನ್ನುವ ಸಲಹೆಯೂ ಸಭೆಯಲ್ಲಿ ಕೇಳಿ ಬಂತು.
ಕಿನಾರಬೀಚ್ ಬಳಿ ಸಮಯವಲ್ಲದ ಸಮಯದಲ್ಲಿ ಜನ ಒಟ್ಟುಗೂಡುವುದನ್ನು ನಿಯಂತ್ರಿಸುವುದು, ಅನಗತ್ಯವಾಗಿ ರಸ್ತೆ ಬದಿಯಲ್ಲಿ ಗುಂಪುಕಟ್ಟಿಕೊಂಡು ಕುಳಿತುಕೊಳ್ಳದಂತೆ ಎಚ್ಚರಿಸುವುದು, ಬಸ್‌ಗಳಲ್ಲಿ ಸುರಕ್ಷತೆ ಒದಗಿಸುವ ಬಗ್ಗೆ ಭರವಸೆ ನೀಡಿದ ಡಿವೈಎಸ್‌ಪಿ, ಮುಂದೆ ಮುಸ್ಲಿಂ ಸಮುದಾಯದವರನ್ನು ಕರೆಸಿ ಸಭೆ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಂ., ಕುಂದಾಪುರ ಪೊಲೀಸ್ ಉಪ ನಿರೀಕ್ಷಕ ನಾಸೀರ್ ಹುಸೇನ್, ತಾ.ಪಂ.ಅಧ್ಯಕ್ಷ ಭಾಸ್ಕರ ಬಿಲ್ಲವ, ಜಿ.ಪಂ.ಸದಸ್ಯ ಗಣಪತಿ ಟಿ.ಶ್ರೀಯಾನ್, ತಾ.ಪಂ.ಸದಸ್ಯ ಮಂಜು ಬಿಲ್ಲವ ಮೊದಲಾದವರು ಉಪಸ್ಥಿತರಿದ್ದರು.