ಬೆಳ್ತಂಗಡಿ,ಜ.27: ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಸುಮಾರು 50 ಮನೆಗಳಿರುವ ಕೆಲ್ಲಕರೆ ದಲಿತ ಕಾಲೊನಿಯಲ್ಲಿ ಸೋಮವಾರ ಅತ್ಯಂತ ವಿಶಿಷ್ಟ ಸಹಪಂಕ್ತಿ ಭೋಜನ ಮತ್ತು ವಿಚಾರ ಸಂಕಿರಣ ನಡೆಯಿತು. ಗಣರಾಜ್ಯೋತ್ಸವ ನಿಡುಮಾಮಿಡಿ ಸಂಸ್ಥಾನ ಮಠ, ಮಾನವಧರ್ಮ ಪೀಠದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಸೇರಿದಂತೆ ಹಲವಾರು ಮಠಾಧೀಶರು, ಸಮಾಜ ಗಣ್ಯರು, ಸಂಘಟನೆಗಳ ಮುಖಂಡರು, ಮಾಧ್ಯಮದ ಮಂದಿ ಸಹಪಂಕ್ತಿ ಭೋಜನದಲ್ಲಿ ಪಾಲ್ಗೊಂಡರು.
ಅನ್ನಕ್ಕೆ ಬೇಧವಿಲ್ಲ: ನಿಡುಮಾಮಿಡಿ ಶ್ರೀ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ನಿಡುಮಾಮಿಡಿ ಸಂಸ್ಥಾನ ಮಠ, ಮಾನವಧರ್ಮ ಪೀಠದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಅವರು, ಅನ್ನದ ಸಂಸ್ಕೃತಿ ಎಂದೂ ಬೇಧವನ್ನು ಒಪ್ಪುವುದಿಲ್ಲ. ಅದು ಮನುಷ್ಯ ಸಂಬಂಧಗಳನ್ನು ಬೆಸೆಯುವ ಸಂಸ್ಕೃತಿ ಎಂದರು.
ಜಾತಿ, ಪಂಥ, ಬೇಧವಿಲ್ಲದೆ ಎಲ್ಲರನ್ನೂ ಒಳಗೊಂಡ ಸಂಸ್ಕೃತಿ ನಮ್ಮದಾಗಿತ್ತು. ಆದರೆ, ಅದನ್ನು ವರ್ಣಬೇಧ ಛಿದ್ರಗೊಳಿಸಿತ್ತು. ಅದರ ಮುಂದುವರಿದ ಭಾಗವಾಗವೇ ಅಸ್ಪೃಶತೆ. ನಮ್ಮ ಹಳ್ಳಿಗಳಲ್ಲಿ ಒಂದಿಷ್ಟಾದರೂ ಅನ್ನ ಸಂಸ್ಕೃತಿಯನ್ನು ಕಾಣಬಹುದಾಗಿದೆ. ಜಗತ್ತಿನ ಎಲ್ಲಾ ಮಾನವತಾವಾದಿಗಳು ಹುಟ್ಟಿನಿಂದ ಹೇರಲ್ಪಡುವ ಅಸ್ಪಶತೆಯನ್ನು ವಿರೋಧಿಸಿದೆ. ದರ್ಶನ, ಧರ್ಮ ಯಾವುದೇ ಇರಲಿ ಮಾನವಿಯತೆಯನ್ನು ಬೆಳೆಸಿಕೊಳ್ಳದ ಹೊರತು ಅದಕ್ಕೆ ಅರ್ಥ ಬರಲು ಸಾಧ್ಯವಿಲ್ಲ. ಗಾಂಧೀ ಹಾಗೂ ಅಂಬೇಡ್ಕರ್ ತಮ್ಮ ಈ ಚಿಂತನೆಗಳಿಂದ ಸದಾ ಪ್ರಸ್ತುತರಾಗುತ್ತಾರೆ ಎಂದರು.
ಬದಲಾಗದ ಪರಿಸ್ಥಿತಿ: ದಲಿತ ಸಮುದಾಯದ ಹಕ್ಕುಗಳನ್ನು ನಿರಾಕರಿಸಿ ತಿರಸ್ಕಾರದಿಂದ ನೋಡುವ ಪ್ರವತ್ತಿ ಬದಲಾಗಿಲ್ಲ. ಅವರು ಅದೇ ಸ್ಥಿತಿಯಲ್ಲಿ ಇರಬೇಕು ಎಂದು ಬಯಸುವ ಶಕ್ತಿಗಳು ಪ್ರಬಲರಾಗಿದ್ದಾರೆ. ಶಿಕ್ಷಣದ ಮೂಲಕ ಸ್ವಾಭಿಮಾನದ ಬದುಕನ್ನು ನಡೆಸುತ್ತಿದ್ದರೂ ಅವರನ್ನು ನೋಡುವ ದಷ್ಟಿಕೋನ ಬದಲಾಗುತ್ತಿಲ್ಲ. ತಮ್ಮ ಸಾಮಾಜಿಕ ಉನ್ನತಿಯನ್ನು ಉಳಿಸಲು ದಲಿತರು ತುಳಿತಕ್ಕೆ ಒಳಗಾಗಲೇ ಬೇಕು ಎಂಬ ನಿಲುವನ್ನು ಮೇಲ್ವರ್ಗದ ಜನ ಅನುಸರಿಸುತ್ತಿದ್ದಾರೆ. ಇಂಥ ಸಾವಿರಾರು ವರ್ಷಗಳ ಇತಿಹಾಸವನ್ನು ಬದಲಿಸಲು ನಿರಂತರ ಪ್ರಯತ್ನ ಆಗಬೇಕಾಗಿದೆ ಎಂದರು.
ಕೀಳರಿಮೆಯಿಂದ ಮುಕ್ತರಾಗಿ: ವಿಚಾರ ಮಂಡನೆ ಮಾಡಿದ ಸಾಹಿತಿ ಅತ್ರಾಡಿ ಅಮತಾ ಶೆಟ್ಟಿ ಶೋಷಿತ ಸಮುದಾಯಗಳು ಮಾನಸಿಕ ಗುಲಾಮಗಿರಿಯಿಂದ ಬಳಲುತ್ತಿವೆ. ಅಧಿಕಾರ ಹೀನತೆಯೇ ಶೋಷಣೆಯ ಮುಖ್ಯ ಕಾರಣವಾಗಿ ಮಾರ್ಪಟ್ಟಿದೆ. ಕೈಗಳಿಗೆ ಹಾಕಿರುವ ಬಂಧನವನ್ನು ಬಿಡಿಸಿದರೆ ಸಾಲದು, ಮನಸ್ಸನ್ನು ಆವರಿಸಿರುವ ಕೀಳರಿಮೆಯ ಮುಕ್ತರಾಗಿ ಸ್ವಾಭಿಮಾನದಿಂದ ಬದುಕಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಮೈಸೂರು ಗಾಂಧೀನಗರದ ಶಿವಯೋಗೀಶ್ವರ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಅವರು ಅಸಲಿ ಭಾರತವನ್ನು ಮರೆಗೆ ಸರಿಸಿ ನಕಲಿ ಭಾರತ ವಿಜೃಂಭಿಸುತ್ತಿದೆ. ಸಾಮಾಜಿಕ ಬದಲಾವಣೆಯಾಗದೆ ಹೊರತು ರಾಜಕೀಯ ಆರ್ಥಿಕ ಬದಲಾವಣೆಗಳು ಸಾಧ್ಯವಾಗುವುದಿಲ್ಲ ಎಂದರು.
ಅಧ್ಯಕ್ಷತೆಯನ್ನು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹಸಂಚಾಲಕ ಎಸ್.ವೈ.ಗುರುಶಾಂತ್ ವಹಿಸಿದ್ದರು. ಚಿತ್ರದುರ್ಗ ಚಲವಾದಿ ಮಹಾಸಂಸ್ಥಾನದ ಶ್ರೀ ಬಸವನಾಗೀದೇವ ಶರಣರು, ಮೈಸೂರಿನ ಬಸವಲಿಂಗ ಮೂರ್ತಿ ಶರಣ ಸ್ವಾಮೀಜಿ, ತುಮಕೂರು ಹುಲಿಯೂರು ದುರ್ಗ ವಿಶ್ವಮಾನವ ಮಂಟಪದ ಶ್ರೀ ಒಕ್ಕಲಿಗ ಮುದ್ದಣ್ಣ ಸ್ವಾಮೀಜಿ, ಬಂಟ್ವಾಳ ಎಎಸ್‌ಪಿ ರಾಹುಲ್ ಕುಮಾರ್, ಸಾಹಿತಿಗಳಾದ ಅದಮಾರು ಶ್ರೀಪತಿ ಆಚಾರ್ಯ, ಸಿಪಿಎಂ ಮುಖಂಡ ವಸಂತ ಆಚಾರಿ, ದಲಿತ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಕಷ್ಣಪ್ಪ ಕೊಂಚಾಡಿ, ಮಾಹೆ ವಿಶ್ವ ವಿವಿಯ ಉಪನ್ಯಾಸಕಿ ವನಿತಾ ಶೆಟ್ಟಿ ಉಪಸ್ಥಿತರಿದ್ದರು.
ದಲಿತ ಹಕ್ಕುಗಳ ಹೋರಾಟ ಸಮಿತಿ ತಾಲೂಕು ಸಂಚಾಲಕ ಶೇಖರ ಎಲ್. ಸ್ವಾಗತಿಸಿದರು. ಶ್ಯಾಮರಾಜ್ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿ ಕಾರ್ಯದರ್ಶಿ ಈಶ್ವರೀ ವಂದಿಸಿದರು.
ಸಹಪಂಕ್ತಿ ಭೋಜನದ ಈ ಚಿಕ್ಕ ಕಾರ್ಯಕ್ರಮದಿಂದ ಅಸ್ಪಶತೆಯೇನೂ ಅಳಿಯದು. ಸದ್ಭಾವನೆಗಳನ್ನು ವಿನಿಮಯ ಮಾಡಿಕೊಂಡು ಸಾಮಾಜಿಕ ಬದಲಾವಣೆಗೆ ಒಂದು ಸಣ್ಣ ಪ್ರೇರಣೆ ನೀಡುವ ಪ್ರಯತ್ನ ಇದು ಎಂದು ನಿಡುಮಾಮಿಡಿ ಶ್ರೀಗಳು ಹೇಳಿದರು.
ಸಭಾ ಕಾರ್ಯಕ್ರಮದ ಬಳಿಕ ಕೆಲ್ಲಕೆರೆಯ ಗುರುವಪ್ಪ ಅವರ ಮನೆಯಲ್ಲಿ ಸ್ವಾಮೀಜಿ ಪೂಜೆಯನ್ನು ನೆರವೇರಿಸಿದರು. ಸನಿಹದಲ್ಲಿರುವ ರವಿ ಹಾಗೂ ಸುಶೀಲಾ ಅವರ ಮನೆಯಲ್ಲಿ ದಲಿತರೇ ಅಡುಗೆಯನ್ನು ತಯಾರಿಸಿದ್ದರು. ಅದನ್ನು ಅವರೇ ಬಡಿಸಿದರು. ಸಹಪಂಕ್ತಿಯಲ್ಲಿ ಕುಳಿತು ಸ್ವಾಮೀಜಿಯವರು ಭೋಜನ ಸ್ವೀಕರಿಸಿದರು. ಎಎಸ್‌ಪಿ, ವಿವಿಧ ಸಂಘಟನೆಗಳ ಮುಖಂಡರು, ಮಾಧ್ಯಮದವರು ಸಹಭೋಜನದಲ್ಲಿ ಪಾಲ್ಗೊಂಡರು.
ಗಣರಾಜ್ಯೋತ್ಸವದ ಅಂಗವಾಗಿ ದಲಿತ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಸಹಪಂಕ್ತಿ ಭೋಜನ ಮತ್ತು ವಿಚಾರ ಸಂಕಿರಣದ ಉದ್ಘಾಟನೆಗೆ ಆಗಮಿಸುವ ಸ್ವಾಮೀಜಿಗಳನ್ನು ಹಾಗೂ ಗಣ್ಯರನ್ನು ಎದುರುಗೊಳ್ಳಲು ಇಡಿ ಕಾಲೊನಿಯೇ ಸಿದ್ಧಗೊಂಡಿತ್ತು. ಕಾಲೊನಿಯ ರಸ್ತೆಗಳು ತೋರಣಗಳಿಂದ ಅಲಂಕಾರಗೊಂಡಿತ್ತು. ಎಲ್ಲೆಡೆ ಸ್ವಚ್ಛತೆಯ ಓರಣವಿತ್ತು.
ನಮಗೆ ಸಂಭ್ರಮದ ದಿನ. ಜಾತಿ ಕಾರಣದಿಂದ ನಮ್ಮ ಮನೆಗೆ ಇತರರು ಯಾರೂ ಬರುವುದೇ ಇಲ್ಲ. ಸ್ವಾಮೀಜಿಗಳಂತೂ ಇಲ್ಲವೇ ಇಲ್ಲ. ಅದರೆ ಇಂದು 5 ಸ್ವಾಮೀಜಿಗಳು ಬಂದು ನಾವು ತಯಾರಿಸಿದ ಭೋಜನವನ್ನು ಸ್ವೀಕರಿಸಿದ್ದಾರೆ. ಅವರೊಂದಿಗೆ ಎಲ್ಲಾ ವರ್ಗದ ಜನರೂ ಬಂದಿದ್ದರು. ಇದು ನನಗೆ ಮರೆಯಲಾರದ ಘಟನೆಯಾಗಿದೆ. -ಶುಭಾ, ಸಹಪಂಕ್ತಿ ಭೋಜನ ಏರ್ಪಡಿಸಿದ ಮನೆಯ ಯಜಮಾನಿ