ಬಂಟ್ವಾಳ, ಜ. 27: ಸಾಲೆತ್ತೂರು ರಸ್ತೆ ಬದಿಯ ಪೊದೆಯಲ್ಲಿ ಜ.22ರಂದು ಮಗುವನ್ನು ತ್ಯಜಿಸಿ ಸುದ್ದಿಯಾಗಿದ್ದ ಮಗುವಿನ ತಾಯಿ ಮತ್ತು ತಂದೆಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಸ್ಥಳೀಯರ ಸಹಕಾರದಲ್ಲಿ ಜ.26ರಂದು ಬಿ.ಸಿ.ರೋಡ್‌ನಲ್ಲಿ ಅವರಿಗೆ ವಿವಾಹ ನೆರವೇರಿಸಲಾಗಿದೆ.
ವಿವಾಹ ಪೂರ್ವದಲ್ಲಿ ಆಕೆ ಗರ್ಭಿಣಿ ಆಗಿರುವುದು ಸಮಸ್ಯೆಗೆ ಕಾರಣ ಎನ್ನಲಾಗಿದೆ. ಮಗುವಿನ ತಾಯಿ ರಜನಿ ಮತ್ತು ತಂದೆ ಅಶೋಕ ನಾಯ್ಕ ಎಂದು ಗುರುತಿಸಲಾಗಿದ್ದು ಇಬ್ಬರು ಒಂದೇ ಸಮಾಜದವರು. ಆಕೆಗೆ ತಂದೆ ಇಲ್ಲ, ತಾಯಿ ಮತ್ತು ಸಹೋದರಿಯ ಜೊತೆಗೆ ಮಂಚಿ ಗ್ರಾಮದ ನೂಜಿಯಲ್ಲಿ ವಾಸ್ತವ್ಯವಿದ್ದು, ಕೂಲಿ ಕಾರ್ಮಿಕರಾಗಿದ್ದು ಕುಟುಂಬದಲ್ಲಿ ತೀವ್ರ ಬಡತನವಿದೆ ಎಂದು ತಿಳಿದುಬಂದಿದೆ. ಅವರಿಗೆ ಸಹಾಯ ಮಾಡುವ ಹಿನ್ನೆಲೆಯಲ್ಲಿ ಬಂದಿದ್ದ ಅಶೋಕ ಸ್ನೇಹದ ಗುರುತಾಗಿ ಆಕೆಯಲ್ಲಿ ಕುಡಿ ಅರಳಿಸಿದ್ದನ್ನು ಒಪ್ಪಿಕೊಂಡಿದ್ದಾಗಿ ಬಂಟ್ವಾಳ ವೃತ್ತ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪಹೇಳಿದ್ದಾರೆ.
ಘಟನೆಯ ಬಗ್ಗೆ ಸಾಮಾಜಿಕ ಸೇವಾಕರ್ತ, ಬಂಟ್ವಾಳ ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ನೇಮಿರಾಜ ರೈ ಅವರ ಗಮನಕ್ಕೆ ಬಂದಿದ್ದು, ಸ್ಥಳೀಯರಾದ ಮೋಹನದಾಸ ಶೆಟ್ಟಿ, ಪ್ರಮುಖರಾದ ರಾಮ್‌ದಾಸ್ ಬಂಟ್ವಾಳ ನೆರವಿನಲ್ಲಿ ಮನೆಮಂದಿಗೆ ತಿಳಿ ಹೇಳಿದ್ದು ಇಬ್ಬರ ಒಪ್ಪಿಗೆಯಲ್ಲಿ, ಪೋಷಕರು ಮತ್ತು ಪೊಲೀಸರ ಸಹಕಾರದಲ್ಲಿ ಪ್ರಕರಣ ವನ್ನು ಸುಖಾಂತ್ಯ ಮಾಡಿದ್ದಾರೆ.