ಮಂಗಳೂರು: ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ರಮ ಕುಂಠಿತಗೊಂಡಿದೆ. ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಯನ್ನೂ ಕೇಳುತ್ತಿಲ್ಲ, ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿಲ್ಲ. ಇದು ಅಭಿವೃದ್ಧಿಯ ಹಿನ್ನಡೆಯನ್ನು ಸೂಚಿಸುತ್ತದೆ ಎಂದು ಸಂಸದ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಸೋಮವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು, ಫೆ.2ರಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭಗೊಳ್ಳಲಿದ್ದು, ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಉತ್ತಮ ಬಜೆಟ್ ನೀಡಬೇಕಾಗಿದೆ ಎಂದರು.
ಡಿನೋಟಿಫೈ : ನಿಯಮ ರೂಪಿಸುವ ಅಗತ್ಯವಿದೆ
ರಾಜ್ಯದಲ್ಲಿ ಎಸ್.ಎಂ.ಕೃಷ್ಣ ಕಾಲದಿಂದ ಎಲ್ಲ ಸಿಎಂಗಳ ಅವಧಿಯಲ್ಲೂ, ರಾಜ್ಯಪಾಲರ ಆಡಳಿತದಲ್ಲೂ ಸ್ವಾಧೀನ ಮಾಡಿರುವ ಜಮೀನಿನ ಡಿನೋಟಿಫೈ ನಡೆದಿದೆ. ಯಾವ ಭೂಮಿ ಡಿನೋಟಿಫೈ ಮಾಡಬೇಕು ಅಥವಾ ಮಾಡಬಾರದು ಎಂಬ ಯಾವುದೇ ಸ್ಪಷ್ಟ ನಿರ್ದೇಶನ ಇಲ್ಲ. ಆದ್ದರಿಂದ ನಿಯಮ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.
ಭೂಸ್ವಾಧೀನ ಕಾಯಿದೆ ತಿದ್ದುಪಡಿಗೆ ತಂದಿರುವ ಸುಗ್ರೀವಾಜ್ಞೆಯ ಸಾಧಕ- ಬಾಧಕ ಕುರಿತು ಮುಂದಿನ ಲೋಕಸಭೆ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು. ಇದರಲ್ಲಿ ಒಣಭೂಮಿ ಸ್ವಾಧಿನಕ್ಕೆ ಅವಕಾಶವಿದ್ದು, ರೈತರಿಗೆ ಅನುಕೂಲವೂ ಇರಬಹುದು. ರೈತರ ಹಿತ ಕಾಪಾಡಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಯಡಿಯೂರಪ್ಪ ಹೇಳಿದರು.