ಮೂಲ್ಕಿ,ಫೆ.೦.04 : ಇಲ್ಲಿನ ಪ್ರಮುಖ ಬಸ್ ನಿಲ್ದಾಣದಲ್ಲಿ ಖಾಸಗಿ ಎಕ್ಸ್‌ಪ್ರೆಸ್ ಬಸ್ ಚಾಲಕನ ಮೇಲೆ ಮೂರು ಮಂದಿ ರಿಕ್ಷಾ ಚಾಲಕರು ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಹಲ್ಲೆಗೊಳಗಾದ ಬಸ್ ಚಾಲಕನನ್ನು ಸುರತ್ಕಲ್ ಚೊಕ್ಕಬೆಟ್ಟು ನಿವಾಸಿ ಅಬ್ದುಲ್ ಶುಕ್ರು(32) ಎಂದು ಗುರುತಿಸಲಾಗಿದ್ದು ಹಲ್ಲೆ ನಡೆಸಿದ ಆರೋಪಿಗಳಾಗಿ ಹೆಜಮಾಡಿ ನಿವಾಸಿ ಸಂತೋಷ ಶೆಟ್ಟಿ(32 ), ಕವತ್ತಾರು ಕೊಲ್ಲೂರು ಬಳಿಯ ನಿವಾಸಿಗಳಾದ ವಿಲ್ಪ್ರೆಡ್ ಡಿಸೋಜ(28), ಕಿಶೋರ್ ಶೆಟ್ಟಿ (30)ಯನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.
ಮೂಲ್ಕಿಯಿಂದ ರೋಗಿಯೊಬ್ಬರನ್ನು ತುರ್ತಾಗಿ ಆಸ್ಪತ್ರೆಗೆ ರಿಕ್ಷಾದಲ್ಲಿ ಸಾಗಿಸುತ್ತಿದ್ದಾಗ ಎಕ್ಸ್‌ಪ್ರೆಸ್ ಬಸ್, ರಿಕ್ಷಾಗೆ ಡಿಕ್ಕಿ ಹೊಡೆಯುವಂತಾದಾಗ ರಿಕ್ಷಾ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಧರೆಗೆ ಆಧರಿಸಿ ನಿಂತಿತ್ತು ಇದರಿಂದ ಕುಪಿತರಾದ ಆರೋಪಿಗಳು ಮೂಲ್ಕಿ ಬಸ್ ನಿಲ್ದಾಣದಲ್ಲಿ ಚಾಲಕನ ಮೇಲೆ ಏಕಾಏಕಿ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದರು ಎಂದು ಪ್ರಕರಣ ದಾಖಲಾಗಿದೆ.
ಹಲ್ಲೆ ನಡೆಸುವಾಗ ನೂರಾರು ಜನರು ಬಸ್ ನಿಲ್ದಾಣದಲ್ಲಿ ಸೇರಿದ್ದರಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದರು. ಹಲ್ಲೆಗೊಳಗಾದ ಚಾಲಕ ಸುರತ್ಕಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಹಾಗೂ ಬಂಧಿತ ಆರೋಪಿಗಳನ್ನು ಮೂಡಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಪ್ರಕರಣವನ್ನು ದಾಖಲಿಸಿಕೊಂಡಿರುವ ಮೂಲ್ಕಿ ಪೊಲೀಸರು ತಿಳಿಸಿದ್ದಾರೆ.
ವರದಿ : ನರೇಂದ್ರ ಕೆರೆಕಾಡು.