ಮೂಲ್ಕಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಲಯನ್ಸ್ ಕ್ಲಬ್‌ನ ಬಳಿ ಇರುವ ಎರಡು ಗೂಡಂಗಡಿಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಕೊಳಚಿಕಂಬಳದ ನಿವಾಸಿ ಶೇಖರ್ ಹಾಗೂ ಶೇಖರ ಎಂಬವರಿಗೆ ಸೇರಿದ ಈ ಗೂಡಂಗಡಿಗಳಿಗೆ ಬೆಂಕಿಯು ಹೇಗೆ ಅರಡಿದೆ ಎಂಬುದು ನಿಗೂಢವಾಗಿದೆ. ರಾತ್ರಿ ಸಮಯದಲ್ಲಿ ಹೆಚ್ಚು ಹೊತ್ತು ಈ ಗೂಡಂಗಡಿಗಳು ಕಾರ್ಯಾಚರಿಸುತ್ತಿದ್ದು ಬೆಳಿಗ್ಗೆ ತಡವಾಗಿ ತೆರೆಯುವ ಪರಿಪಾಠವಿದ್ದು ಆಗ್ನಿ ಆಕಸ್ಮಿಕಕ್ಕೆ ಬಲಿಯಾದ ಗೂಡಂಗಡಿಯಿಂದ ದಟ್ಟವಾದ ಹೊಗೆಯು ಬರುತ್ತಿದ್ದರಿಂದ ಸ್ಥಳೀಯರು ಸ್ಪಂದಿಸಿ ಬೆಂಕಿಯನ್ನು ನಂದಿಸಿದರು ಆದರೂ ಅದರಲ್ಲಿದ್ದು ಅಡುಗೆ ಹಾಗೂ ಇನ್ನಿತರ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗೂಡಂಗಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್‌ನ್ನು ಸಾರ್ವಜನಿಕರು ಮೊದಲು ಹೊರಗೆ ಇಟ್ಟಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಹೆದ್ದಾರಿ ವಿಸ್ತರಣೆ ಕಾಮಗಾರಿಯು ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ ಈ ಗೂಡಂಗಡಿಗಳು ಸ್ಥಳಾಂತರ ಗೊಳ್ಳಲಿದ್ದವು ಈ ಅಗ್ನಿ ಆಕಸ್ಮಿಕದಿಂದ ಎರಡು ವ್ಯಾಪಾರಸ್ಥರಿಗೆ ಬಹಳಷ್ಟು ನಷ್ಟ ಉಂಟಾಗಿದೆ.
ಗೂಡಂಗಡಿ ಮಾಲೀಕರು ಹೇಳುವಂತೆ ಯಾರೋ ಕಿಡಿಗೇಡಿಗಳು ಬೆಂಕಿ ಕೊಟ್ಟಿರಬೇಕು ಎಂದು ಸಂಶಯಿಸಿದ್ದಾರೆ. ಇದೇ ಗೂಡಂಗಡಿಗಳಿಂದ ಕಳೆದ ಎರಡು ತಿಂಗಳ ಹಿಂದೆ ಕಳ್ಳತನವೂ ನಡೆದಿದ್ದನ್ನು ಇಲ್ಲಿ ನೆನಪಿಸಬಹುದು.
ವರದಿ : ನರೇಂದ್ರ ಕೆರೆಕಾಡು