ಮಂಗಳೂರು,ಫೆ.05 : ವಿಶ್ವಹಿಂದೂ ಪರಿಷತ್ಗೆ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಹಿಂದೂ ಸಮಾಜೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು. ಈ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ವಿಶ್ವಹಿಂದೂ ಪರಿಷತ್ನ ಅಂತರಾಷ್ಟ್ರೀಯ ಮುಖಂಡ ಪ್ರವೀಣ್ ತೊಗಾಡಿಯಾ ಮೇಲೆ ಸರ್ಕಾರವು ಹಾಕಿರುವ ನಿರ್ಬಂಧವನ್ನು ಲಜ್ಜೆಗೆಟ್ಟ ಸರ್ಕಾರ ಕೂಡಲೇ ಹಿಂದಕ್ಕೆ ಪಡೆಯಬೇಕು ಇಲ್ಲವಾದಲ್ಲಿ ಹಿಂದೂಪರ ಸಂಘಟನೆಗಳಿಂದ ಉಗ್ರ ಹೋರಾಟವನ್ನು ಎದುರಿಸಬೇಕಾದೀತು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸ್ವಾಮೀಜಿ, ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ಛೂ ಬಿಟ್ಟು ಪ್ರವೀಣ್ ತೊಗಾಡಿಯಾ ಅವರ ಮೇಲೆ ನಿರ್ಬಂಧ ವಿಧಿಸಿದೆ ಎಂದು ಆರೋಪಿಸಿದರು. ಈ ವಿಚಾರ ಕರ್ನಾಟಕ ಉಚ್ಚನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯ ನಿಷೇಧವನ್ನು ತೆರವುಗೊಳಿಸಿ ಆದೇಶ ಹೊರಡಿಸಿತ್ತು. ಇದು ನಮಗೆ ಸಿಕ್ಕ ಜಯ ಎಂದು ಹೇಳಿದರು. ಇತರ ಧರ್ಮದ ಮುಖಂಡರುಗಳಿಗೆ ಇಲ್ಲದ ನಿರ್ಬಂಧ ನಮಗೆ ಮಾತ್ರ ಯಾಕೆ ಎಂದು ಪ್ರಶ್ನಿಸಿದರು. ಬೆಂಗಳೂರು ನಗರ ಆಯುಕ್ತ ಎಂ.ಎನ್ ರೆಡ್ಡಿ ಕೂಡಲೇ ತೊಗಾಡಿಯಾ ಅವರ ಮೇಲೆ ಹಾಕಿರುವ ನಿರ್ಬಂಧವನ್ನು ವಾಪಾಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಈಗಾಗಲೇ ತೊಗಾಡಿಯಾ ಅವರ ಮೇಲೆ ಹಾಕಿರುವ ನಿರ್ಬಂಧದ ಬಗ್ಗೆ ಕಾನೂನು ಹೋರಾಟ ಆರಂಭಗೊಂಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಹಿಂಪ ಮುಖಂಡ ಜಗದೀಶ್ ಶೇಣವ, ಭಜರಂಗದಳ ಮುಖಂಡ ಶರಣ್ ಪಂಪ್ವೆಲ್, ಭುಜಂಗ ಕುಲಾಲ್ ಉಪಸ್ಥಿತರಿದ್ದರು.