ಮುಂಬಯಿ, ಫೆ.05 : ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ ವಲಯ) ಸಂಸ್ಥೆಯು ಇಂದಿಲ್ಲಿ ಬುಧವಾರ ದಹಿಸರ್ ಪೂರ್ವದ ಹೊಟೇಲ್ ಆದಿ ಆಶ್ರಯದಲ್ಲಿ ಸಭೆಯನ್ನು ನಡೆಸಿದ್ದು, ಸಭೆಯಲ್ಲಿ ಪಶ್ಚಿಮ ರೈಲ್ವೇ ಮೂಲಕ ಕೊಂಕಣ್ ರೈಲ್ವೇ ಹಳಿಯಲ್ಲಿ ಹೊಸ ರೈಲು ಸೇವೆ ಆರಂಭಿಸುವಲ್ಲಿ ಜನತಾ ಅದಾಲತ್ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.
ರೈಲ್ವೇ ಯಾತ್ರಿ ಸಂಘ ಬೊರಿವಲಿ ಇದರ ಸ್ಥಾಪಕ ಗೌರವಾಧ್ಯಕ್ಷ ವಿರಾರ್ ಶಂಕರ ಬಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಭೆಯಲ್ಲಿ ಪಶ್ಚಿಮ ವಲಯದಲ್ಲಿ ನೆಲೆಯಾಗಿರುವ ಮಹಾರಾಷ್ಟ್ರ-ಗೋವಾ-ಕರ್ನಾಟಕ ರಾಜ್ಯಗಳ ಕರಾವಳಿ ನಾಡಿನ ಲಕ್ಷಾಂತರ ಜನತೆಯ ರೈಲ್ವೇ ಪ್ರಯಾಣದ ಅನುಕೂಲಕ್ಕಾಗಿ ಬಾಂದ್ರಾ-ಬೋರಿವಿಲಿ-ವಸಾಯಿ ಮೂಲಕ ದಿವಾ-ಪನ್ವೇಲ್ ಮಾರ್ಗವಾಗಿ ಕೊಂಕಣ್ ರೈಲ್ವೇ ಹಳಿಯಲ್ಲಿ ನೂತನ ರೈಲು ಸೇವೆ ಆರಂಭಿಸುವ ನಿಟ್ಟಿನಲ್ಲಿ ಇದೇ ಫೆ.14 ರಂದು ಶಾಂತಿಧಾಮ್ ಪ್ರಾರ್ಥನಾಲಯ, ವಝೀರ್ ಶಿಂಪೋಲಿ ಕ್ರಾಸ್ ರೋಡ್, ಸಂಕಾ ಮಂದಿರದ ಸಮೀಪ, ಬೋರಿವಿಲಿ ಪಶ್ಚಿಮ, ಮುಂಬಯಿ ಇಲ್ಲಿ ಸಂಜೆ 5.00 ಗಂಟೆಗೆ ಬೋರಿವಿಲಿ ಲೋಕಸಭಾ ಕ್ಷೇತ್ರದ ಸಂದಸ ಗೋಪಾಲ ಸಿ.ಶೆಟ್ಟಿ ಅವರ ಸಾರಥ್ಯದಲ್ಲಿ ಬೃಹತ್ ಸಭೆ ಜರುಗಿಸಲು ನಿರ್ಣಾಯ ಕೈಗೊಳ್ಳಲಾಯಿತು.
ಮಹಾರಾಷ್ಟ್ರ-ಗೋವಾ-ಕರ್ನಾಟಕ ರಾಜ್ಯಗಳ ಸಂಪರ್ಕ ಕೊಂಡಿ ಆಗಿರುವ 20 ವರ್ಷಗಳ ಕೊಂಕಣ ರೈಲ್ವೇ ಇದೀಗ ಪ್ರಯಾಣಿಕರ ದಟ್ಟಣೆಯಲ್ಲಿ ಪಯಣಿಸುತ್ತಿದೆ. ತ್ರಿವಳಿ ರಾಜ್ಯಗಳ ಸಾಮರಸ್ಯ-ಸ್ನೇಹಮಯಿ ಜೀವನನಾಡಿಯೂ ಹೌದು. ದಕ್ಷ ಸಾಧನೆಯನ್ನೇ ಜೀವನವಾಗಿಸಿ, ಪ್ರಾಮಾಣಿಕತೆಯನ್ನೇ ಮೇಲ್ಫಂಕ್ತಿಯಾಗಿರಿಸಿ, ಸಂಘಟನಾಶೀಲ ವ್ಯಕ್ತಿತ್ವವನ್ನು ಮೈಗೂಡಿಸಿ, ಕೋಟ್ಯಾಂತರ ಜನತೆಯ ಹೃನ್ಮನಗಳಲ್ಲಿ ನೆಲೆಯಾಗಿರುವ ಮಾಜಿ ಎನ್‌ಡಿಎ ಸಂಚಾಲಕ, ಕೊಂಕಣ ರೈಲ್ವೇಯ ರೂವಾರಿ ಜಾರ್ಜ್ ಫೆರ್ನಾಂಡಿಸ್ ಅವರ ಚಿಂತನಾಶೀಲಾ ಕೊಡುಗೆಗೆ ಅವರನ್ನು ನಾವು ಸದಾ ನೆನಪಿಸಲೇ ಬೇಕು. ಸದ್ಯ ಕೊಂಕಣ ರೈಲ್ವೇಯ ಯಾತ್ರಿಕರ ಸಂಂಖ್ಯೆ ಅತೀವವಾಗಿ ಬೆಳೆದಿದೆ. ಮುಂಬಯಿ ವಾಸಿಗಳಿಫ಼ೆ ತವರೂರನ್ನು ಸುಲಭವಾಗಿ ತಲುಪಲು ಈ ಕೊಂಕಣ ರೈಲ್ವೇ ಮಿತಹಿತದ ಪಯಣಕ್ಕೆ ನಾಂದಿಯಾಗಿದೆ. ಆದರೆ ನಮ್ಮಂತಹ ಮುಂಬಯಿ ಪಶ್ಚಿಮ ಪ್ರದೇಶದಲ್ಲಿನ ವಾಸಿಗಳಿಗೆ ದುಬಾರಿಯೂ, ಸಮಸ್ಯೆಗಳ ಆಗರವೂ ಆಗಿ ಪರಿಣಮಿಸಿದ್ದು ಈ ಪ್ರದೇಶದ ಜನತೆಯ ಅನುಕೂಲಕ್ಕಾಗಿ ನೂತನ ಬಾಂದ್ರಾ-ವಸಾಯಿ-ಮಂಗಳೂರು ರೈಲು ಸೇವೆಗಾಗಿ ಆಗ್ರಹಿಸುತ್ತಿದ್ದೇವೆ ಆದುದರಿಂದ ನಾವು ಆಯೋಜಿಸಿರುವ ಸಭೆಯಲ್ಲಿ ಕೊಂಕಣ ರೈಲ್ವೇ ಫಲಾನುಭವಿಗಳು ಸಹಸ್ರ ಸಂಖ್ಯೆಯಲ್ಲಿ ಮುಕ್ತವಾಗಿ ಪಾಲ್ಗೊಂಡು ನಮ್ಮ ಕನಸನ್ನು ನನಸಾಗಿಸುವಂತೆ ಮನವಿ ಮಾಡುತ್ತಿದ್ದೇನೆ ಎಂದರು.
ಮಹಾರಾಷ್ಟ್ರ-ಕರ್ನಾಟಕದ ಕನ್ನಡಿಗರ ದ್ವನಿ ಹಾಗೂ ಮುಂಬಯಿಯಿಂದ ಪ್ರಕಟಿತ ಏಕೈಕ ಸಮಗ್ರ ಕನ್ನಡ ದೈನಿಕದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ, ಓದುಗರೇ ರೂಪಿಸಿದ ಜನಮನದ ಜೀವನಾಡಿ ಉದಯವಾಣಿ ಕನ್ನಡ ದೈನಿಕದ ಮುಂಬಯಿ ಆವೃತ್ತಿಯ ಉಪ ಸಂಪಾದಕ ದಿನೇಶ್ ಶೆಟ್ಟಿ ರೇಂಜಾಳ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಸಹಯೋಗದೊಂದಿಗೆ ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ ವಲಯ) ಸಂಸ್ಥೆಯು ಆಯೋಜಿಸಿರುವ ಈ ಅತ್ಯವಶ್ಯ ಜನಾದೋಂಲನಾ ಸಭೆಯಲ್ಲಿ ಸಮಗ್ರ ಜನತೆ ಏಕತೆಯಿಂದ ಭಾಗವಹಿಸುವಂತೆ ಸಭೆಯು ಒಕ್ಕೊರಳ ಕರೆಯನ್ನೀಡಿದರು.
ಸಂಘದ ಅಧ್ಯಕ್ಷ ಶಿಮಂತೂರು ಉದಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕುಂದರ್, ರೈಲೇ ಹೋರಾಟಗಾರ ಸೈಮನ್ ಪಿ.ಡಿ’ಕೋಸ್ಟಾ ವೇದಿಕೆಯಲ್ಲಿ ಅಸೀನರಾಗಿದ್ದು ರೈಲ್ವೇಯ ಸುಖಕರ, ಆರಾಮದಾಯಕ ಪಯಣಕ್ಕಾಗಿ ತಮ್ಮ ಹತ್ತಾರು ವರ್ಷಗಳ ಹೋರಾಟ, ಅವಿರತ ಶ್ರಮದ ಸೇವೆಯನ್ನು ದಾಖಲೆ ಸಹಿತವಾಗಿ ಬಹಿರಂಗ ಪಡಿಸಿದರು.
ಶಿಮಂತೂರು ಉದಯ ಶೆಟ್ಟಿ ಮಾತನಾಡಿ ಕೊಂಕಣ್ ರೈಲ್ವೆಯ ಜನಕ ಮಾನ್ಯ ಜಾರ್ಜ್ ಫೆರ್ನಾಂಡಿಸ್ ಹಾಗೂ ಮಧು ದಂಡವತೆ, ಮತ್ತು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಅವರ ದೂರದೃಷ್ಠಿತ್ವದ ಚಿಂತನೆಯ ಮೂಲಕ ಪ್ರಾರಂಭಗೊಂಡು ಬಿ.ಜನಾರ್ಧನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್ ಅವರ ಸಹಕಾರದಿಂದ ಜಾರ್ಜ್ ಫೆರ್ನಾಂಡಿಸ್ ಅವರ ಅಭಯ ಹಸ್ತದಲ್ಲಿ ಕೊಂಕಣ ರೈಲ್ವೇ ಕಾರ್ಪೋರೇಶನ್ ಲಿಮಿಟೆಡ್ ಸಂಸ್ಥೆಯೊಂದಿಗೆ ಕೊಂಕಣ್ ರೈಲ್ವೆ ಸೇವಾರಂಭ ಗೊಂಡಿತು. ಸದ್ಯ ಮತ್ತೆ ನಮ್ಮವರೆ ಆದ ರೈಲ್ವೇ ಸಚಿವ ಸುರೇಶ ಪ್ರಭು ಅವರ ಕೈಯಲ್ಲಿ ಈ ಖಾತೆ ಇರುವುದು ನಮ್ಮ ಅದೃಷ್ಟ. ಈ ನೂತನ ರೈಲು ಸೇವಾರಂಭಿಸುವಲ್ಲಿ ನಮ್ಮ ಪಾರ್ಲಿಮೆಂಟ್ ಪ್ರತಿನಿಧಿ ಗೋಪಾಲ ಸಿ.ಶೆಟ್ಟಿ ಅವರ ದಿಟ್ಟ ಮಾರ್ಗದರ್ಶನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂದಸ ನಳೀನ್ ಕುಮಾರ್ ಕಟೀಲು, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ಸಹಯೋಗದೊಂದಿಗೆ ಈ ಯೋಜನೆ ಈ ಬಾರಿ ಖಂಡಿತವಾಗಿಯೂ ಪೂರ್ಣಗೊಳ್ಳುವ ಭರವಸೆ ನಮಗಿದೆ ಎಂದರು. ಅಲ್ಲದೆ ಬಾಂದ್ರಾ ಸೆಂಟ್ರಲ್‌ನಿಂದ ನಾಯ್ಗಾಂವ್-ದೀವಾ ಲಿಂಕ್ ಚಾಲನೆಗೊಳ್ಳಲು ಟ್ರೈನ್ ಬಾಂಡ್ ಇದೆ. ಪ್ರಸ್ತುತ ಮತ್ಸ್ಯಗಂಧ ರೈಲಿನ (ಮಳೆಗಾಲ ಹೊರತು) ಸ್ಪೀಡ್ ಹೆಚ್ಚಳ ಗೊಳ್ಳಬೇಕು, ಕೊಂಕಣ್ ರೈಲ್ವೇ ಕಾರ್ಪೋರೇಶನ್‌ನಲ್ಲಿ ಪ್ರಾಯೋಗಿಕವಾಗಿ ಪ್ರಯಾಣಿಕರಿಗೆ ಇನ್ಸೂರೆನ್ಸ್ ಪೂರೈಕೆ, ವೈದ್ಯಕೀಯ ಘಟಕ ಪ್ರಾರಂಭ ಇತ್ಯಾದಿ ವಿಷಯಗಳನ್ನು ಪ್ರಸ್ತಾಪಿಸಿದರು. ಸರಕಾರವು ತತ್‌ಕ್ಷಣ ನಮ್ಮಬೇಡಿಕೆಯನ್ನು ಮನವರಿಸದಿದ್ದಲ್ಲಿ ಇದೇ ಎಪ್ರಿಲ್ 1 ರಿಂದ ಮುಂಬಯಿ ಪಶ್ಚಿಮ ಭಾಗದ ಬಾಂಧವರಿಂದ ಲೋಕಸಭಾ ಸದಸ್ಯರ ನೇತೃತ್ವದಲ್ಲಿ ಸಾಕೇಂತಿಕ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದರು.
ಫೆ.14 ರ ಸಭೆಯಲ್ಲಿ ಜಾತಿ-ಧರ್ಮ-ಬೇಧ ಮರೆತು, ನಗರದಲ್ಲಿನ ಎಲ್ಲಾ ಸಮುದಾಯಗಳ ಪದಾಧಿಕಾರಿಗಳು, ಮುಖಂಡರು, ಸದಸ್ಯರು, ಕೊಂಕಣಿ-ಬ್ಯಾರಿ, ತುಳು-ಕನ್ನಡಿಗರ ಸಂಘ-ಸಂಸ್ಥೆಗಳು ನಮ್ಮ ಸಭೆಯಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ. ಇದು ಒಬ್ಬಿಬ್ಬರ ಕೆಲಸವಲ್ಲ. ಸರ್ವರೂ ಒಗ್ಗಟ್ಟಿನಿಂದ ಸರ್ಕಾರಕ್ಕೆ ಮನವಿ ಮಾಡಿದಲ್ಲಿ ಕೆಲಸ ಸರಳ ಸಾಧ್ಯವಾಗ ಬಲ್ಲದು ಎಂದು ಶಶಿಕುಮಾರ್ ಕುಂದರ್ ತಿಳಿಸಿದರು.
ಪದಾಧಿಕಾರಿಯಲ್ಲೋರ್ವರಾದ ಪ್ರೇಮನಾಥ ಕೋಟ್ಯಾನ್ ಮಾತನಾಡಿ ನಮ್ಮ ಸಂಘದ ಪದಾಧಿಕಾರಿಗಳು ಈ ವರೇಗೆ ಯಾರಿಂದಲೂ ಒಂದು ನಯಾಪೈಶೆ ಬೇಡದೆ ತಮ್ಮ ಆಗುಹೋಗುಗಳ ಎಲ್ಲಾ ಖರ್ಚನ್ನು ತಾವೇ ಭರಿಸಿಸಿರುವರು. ಯಾರಿಂದಲೂ ದೇಣಿಗೆ ಪಡೆದ ಪ್ರಸಂಗಗಳೇ ಇಲ್ಲ. ಮುಂದೆಯೂ ಇದಕ್ಕೆ ಅವಕಾಶ ಇರದು ಎಂದರು.
ಸಭೆಯಲ್ಲಿ ಸಂಘದ ಇತರೇ ಪದಾಧಿಕಾರಿಗಳಾದ ಓಲಿವೆರ್ ಡಿ’ಸೋಜಾ ವಸಾಯಿ, ರಜಿತ್ ಸುವರ್ಣ, ಟಿ.ಕೆ ಕೋಟ್ಯಾನ್, ರತ್ನಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಕಳೆದ ಅನೇಕ ವರ್ಷಗಳ ತಮ್ಮ ಹೋರಾಟ, ರೈಲು ಪ್ರಯಾಣಿಕರ ಸಮಸ್ಯೆಗಳ ಬಗೆಹರಿಸುವಿಕೆಗಾಗಿನ ಯೋಗದಾನವನ್ನು ಮನವರಿಸಿದರು. ಪ್ರೇಮನಾಥ ಕೋಟ್ಯಾನ್ ವಂದಿಸಿದರು.
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)