ಮಂಗಳೂರು,ಫೆ.12 : ಕೇಂದ್ರ ಸರಕಾರದ ಭೂಸ್ವಾಧೀನತಾ ತಿದ್ದುಪಡಿ ಸುಗ್ರಿವಾಜ್ಞೆ ಅಧಿಕಾರದ ದುರುಪಯೋಗ ಮಾತ್ರವಲ್ಲದೆ ಕೃಷಿ ಅವಲಂಬಿತ ಶೇ.70 ಜನರ ಜೀವನದ ಮೇಲೆ ಮಾರಕ ಹೊಡೆತ ಎಂದು ತ್ರಿಪುರದ ಸಂಸದ ಜಿತೇಂದ್ರ ಚೌಧುರಿ ಹೇಳಿದ್ದಾರೆ.
ಕರ್ನಾಟಕ ಪ್ರಾಂತ ರೈತ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಭೂಸ್ವಾಧೀನತಾ ತಿದ್ದುಪಡಿ ಸುಗ್ರೀವಾಜ್ಞೆ ಪ್ರತಿಭಟಿಸಿ ಹಾಗೂ ಕಸ್ತೂರಿ ರಂಗನ್ ವರದಿ ಹಿಂದೆಗೆದುಕೊಳ್ಳಲು ಆಗ್ರಹಿಸಿ ನಗರದ ಎನ್‌ಜಿಓ ಸಭಾಂಗಣದಲ್ಲಿ ಬುಧವಾರ ನಡೆದ ಸಮಾವೇಶ ಮತ್ತು ಪ್ರತಿಭಟನೆಯಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು. ಭಾರತದಲ್ಲಿ ಕೃಷಿ ಉತ್ಪನ್ನ ಪ್ರಮಾಣ ಶೇ.25ಕ್ಕೆ ಇಳಿದಿದ್ದರೂ ಕೂಡಾ ದೇಶದ ಶೇ.70ರಷ್ಟು ಮಂದಿ ಜೀವನ ನಿರ್ವಹಣೆಗೆ ಕೃಷಿಯನ್ನೇ ಅವಲಂಬಿಸಿದ್ದಾರೆ ಎಂದು ಅವರು ತಿಳಿಸಿದರು.
ಕಾರ್ಪೊರೇಟ್ ಸಂಸ್ಥೆಗಳ ಹಿತ ಕಾಯಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಹೇಳಿದ ಅವರು, ಹಿಂದಿನ ಯುಪಿಎ ಸರಕಾರ 2013 ಭೂಸ್ವಾಧೀನ ಕಾಯಿದೆಯಲ್ಲಿ ತಿದ್ದುಪಡಿ ಮಾಡಲು ಹೊರಟಾಗ ಇದ್ದಂತಹ ಕೆಲವು ಜನಪರ ಕಾಳಜಿಯನ್ನು ಪ್ರಸ್ತುತ ತಿದ್ದುಪಡಿಯಲ್ಲಿ ಸಂಪೂರ್ಣ ತೆಗೆದುಹಾಕಲಾಗಿದೆ ಎಂದರು.
ಕಸ್ತೂರಿ ರಂಗನ್ ವರದಿಯಿಂದ ದೇಶದ ಆರು ರಾಜ್ಯಗಳ ಸುಮಾರು 4 ಸಾವಿರ ಹಳ್ಳಿಗಳ ಮೇಲೆ ಘೋರ ಪರಿಣಾಮ ಬೀರಲಿದೆ. ಶೇ.70ರಷ್ಟು ಹೆಚ್ಚು ಮಂದಿ ಈ ಪ್ರದೇಶದಲ್ಲಿ ಪಶ್ಚಿಮ ಘಟ್ಟವನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ವರದಿಗೆ ಮುನ್ನ ಸ್ಥಳೀಯ ಪಂಚಾಯಿತಿ, ಆದಿವಾಸಿ ಬುಡಕಟ್ಟು ಜನರೊಂದದಿಗೆ ಸಮಾಲೋಚನೆ ನಡೆಸಬೇಕಾಗಿದ್ದರೂ, ಕಸ್ತೂರಿ ರಂಗನ್ ಸಮಿತಿ ಜನಸಂಪರ್ಕ ಸಭೆ ನಡೆಸಿಲ್ಲ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಕೆ.ಆರ್.ಶ್ರೀಯಾನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ, ಸಿಪಿಎಂ ರಾಜ್ಯ ಸಮಿತಿ ಸದಸ್ಯ ಎಸ್.ವೈ.ಗುರುಶಾಂತ್, ಪದಾಧಿಕಾರಿಗಳಾದ ವಾಸುದೇವ ಉಚ್ಚಿಲ್, ಹರಿದಾಸ್, ಕೃಷ್ಣಪ್ಪ ಸಾಲ್ಯಾನ್ ಉಪಸ್ಥಿತರಿದ್ದರು.