ಮಂಗಳೂರು ಫೆ. 12: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ 57 ಬಾಲ್ಯ ವಿವಾಹ ಪ್ರಕರಣಗಳು ಪತ್ತೆಯಾಗಿ ಅಂತಹ ವಿವಾಹವನ್ನು ತಡೆಹಿಡಿಯಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ.
ಅವರು ಗುರುವಾರ ಬಾಲ್ಯ ವಿವಾಹ ತಡೆಗಟ್ಟುವ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 21 ವರ್ಷಕ್ಕಿಂತ ಕೆಳಗಿನ ಹುಡುಗ ಮತ್ತು 18 ವರ್ಷಕ್ಕಿಂತ ಕೆಳಗಿನ ಹುಡುಗಿಯರ ಮದುವೆಯನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ. ಇಂತಹ ಮದುವೆಗಳನ್ನು ತಡೆಗಟ್ಟಲು ಬಾಲ್ಯ ವಿವಾಹ ನಿಷೇಧಾಧಿಕಾರಿಗಳನ್ನು ಜಿಲ್ಲಾ ಮಟ್ಟ,ತಾಲೂಕು ಮಟ್ಟದಲ್ಲಿ ನೇಮಿಸಲಾಗಿದೆ.ಗ್ರಾಮ ಮಟ್ಟದಲ್ಲಿ ಪಿಡಿಓ,ಪೋಲೀಸ್‌ಎಸ್.ಐ.,ಶಾಲಾ ಮುಖ್ಯೋಪಾಧ್ಯಾಯರು,ಕಂದಾಯ ನಿರೀಕ್ಷಕರು,ಗ್ರಾಮ ಲೆಕ್ಕಿಗರನ್ನು ಬಾಲ್ಯ ವಿವಾಹ ನಿಷೇಧಾಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಅವರು ಹೇಳಿದರು.
ಪುತ್ತೂರು (18),ಬಂಟ್ವಾಳ(17),ಮಂಗಳೂರು(11),ಸುಳ್ಯ(10 )ಬೆಳ್ತಂಗಡಿ ತಾಲೂಕಿನಲ್ಲಿ 1 ಬಾಲ್ಯ ವಿವಾಹವನ್ನು ತಡೆ ಹಿಡಿಯಲಾಗಿದೆ. ಸಾರ್ವಜನಿಕರಲ್ಲಿ ಬಾಲ್ಯ ವಿವಾಹ ನಿಷೇಧದ ಬಗ್ಗೆ ಅರಿವು ಮೂಡಿಸಲು ಜಾಗೃತಿ ಕಾರ್‍ಯಕ್ರಮ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ವಿವಾಹ ಆಮಂತ್ರಣ ಪತ್ರಿಕೆ ಮುದ್ರಿಸುವ ಎಲ್ಲಾ ಪ್ರಿಂಟಿಂಗ್ ಪ್ರೆಸ್ ಮತ್ತು ಡಿಟಿಪಿ ಕೇಂದ್ರಗಳು ಆಮಂತ್ರಣ ಮುದ್ರಿಸುವ ಮೊದಲು ಕಡ್ಡಾಯವಾಗಿ ವಧೂವರರ ವಯಸ್ಸಿನ ಬಗ್ಗೆ ದಾಖಲೆಗಳನ್ನು ಪಡೆದ ಬಳಿಕವಷ್ಟೇ ಆಮಂತ್ರಣ ಪತ್ರಿಕೆ ಮುದ್ರಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಕಲ್ಯಾಣ ಮಂಟಪ ಮತ್ತು ಹಾಲ್‌ಗಳು ವಿವಾಹಕ್ಕೆ ಅನುಮತಿ ನೀಡುವ ಮುಂಚೆ ವಧೂವರರ ವಯಸ್ಸನ್ನು ಖಚಿತ ಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದ ಜಿಲ್ಲಾಧಿಕಾರಿಗಳು ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ತಾಲೂಕು ಮಟ್ಟದಲ್ಲಿ ಎಲ್ಲಾ ಧಾರ್ಮಿಕ ಮುಖಂಡರಿಗೆ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದರು.
ಸಾಮೂಹಿಕ ವಿವಾಹ ಏರ್ಪಡಿಸುವ ಸಂಘಟಕರು ತಹಶೀಲ್ದಾರ್‌ರಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಮತ್ತು ಅಂತಹ ವಿವಾಹದಲ್ಲಿ ವಧು ವರರ ವಯಸ್ಸಿನ ದಾಖಲೆಗಳನಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಬಾಲ್ಯ ವಿವಾಹಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ಕೂಡಲೇ ಸಂಬಂಧಪಟ್ಟವರಿಗೆ ತಿಳಿಸಬೇಕು.ಬಾಲ್ಯ ವಿವಾಹ ನಿಷೇಧದ ಅಧಿಕಾರಿಗಳು ಕರ್ತವ್ಯದಲ್ಲಿ ವಿಫಲವಾದರೆ ಅಥವಾ ನಿರ್ಲಕ್ಷತೆ ತೋರಿದಲ್ಲಿ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಗಟ್ರೂಡ್ ವೇಗಸ್.ಜಿಲ್ಲಾ ಆರೋಗ್ಯಾಧಿಕಾರಿ, ಡಾ. ರಾಮಕೃಷ್ಣ, ಡಿ.ಡಿ.ಪಿ.ಐ.ವಾಲ್ಟರ್ ಡಿ.ಮೆಲ್ಲೋ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಉಸ್ಮಾನ್,ಜನಶಿಕ್ಷಣ ಟ್ರಸ್ಟ್‌ನ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.