ಮಂಗಳೂರು,ಫೆ.16: ಪನಾ ಪ್ರಿ ಯೂನಿ ಕಾಲೇಜು ವತಿಯಿಂದ ‘ಪೋಷಕ ಕಲೆ’ಯ ಕುರಿತು ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮವನ್ನು ಬೆಂಗಳೂರಿನ ಅಕಾಡೆಮಿ ಆಫ್ ಕ್ರಿಯೇಟಿವ್ ಟೀಚಿಂಗ್‌ನ ಅಧ್ಯಕ್ಷ, ಡಾ. ಗುರುರಾಜ ಕರ್ಜಗಿ ಅವರು ಉದ್ಘಾಟಸಿ ತಂದೆ ತಾಯಂದಿರು ಪ್ರತಿದಿನ ಮಕ್ಕಳೊಂದಿಗೆ ಒಂದಿಷ್ಟು ಹೊತ್ತು ಸಮಯ ಕಳೆಯುವುದು ಅತ್ಯಂತ ಅಗತ್ಯ, ಪ್ರಸ್ತುತ ಜಗತ್ತಿನಲ್ಲಿ ಮಕ್ಕಳು ವೇಗವಾಗಿ ಎಲ್ಲವನ್ನೂ ಗ್ರಹಿಸುವ ಸಾಮರ್ಥ್ಯ ಹೊಂದಿದ್ದಾರೆ. ಜಗತ್ತಿನಲ್ಲಿ ಪ್ರತಿಯೊಬ್ಬ ಮಗುವೂ ವಿಭಿನ್ನವಾಗಿ ವಿಶೇಷವಾಗಿಯೇ ಇರುವುದರಿಂದ ಮಕ್ಕಳನ್ನು ಬೆಳೆಸುವುದಕ್ಕೆ ಒಂದು ಸಾಮಾನ್ಯ ನಿಯಮ ಎಂಬುದು ಇಲ್ಲ. ಆದ್ದರಿಂದ ತಂದೆ ತಾಯಿ ಮಕ್ಕಳೊಂದಿಗೆ ಹೆಚ್ಚು ಆಪ್ತವಾಗಿ ಸಂವಹನ ನಡೆಸುವ ಮೂಲಕ ಅವರ ಬದುಕನ್ನು ಒಳ್ಳೆಯ ಹಾದಿಯಲ್ಲಿ ರೂಪುಗೊಳಿಸಬಹುದು ಎಂದು ಹೇಳಿದರು.
ಪ್ರತಿ ಮಗುವನ್ನು ಬೆಳೆಸುವುದು ಪೋಷಕರಿಗೆ ಹೊಸ ಅನುಭವವೇ ಆಗಿರುತ್ತದೆ. ಪೋಷಕರು ಜೀವನದಲ್ಲಿ ನೂರಾರು ವಿಚಾರಗಳನ್ನು ಗಮನಿಸುತ್ತಾ ಜೊತೆಗೆ ಮಗುವನ್ನೂ ಗಮನಿಸುತ್ತಿರುತ್ತಾರೆ. ಮಗು ಮಾತ್ರ ತನ್ನ ಅಪ್ಪ ಅಮ್ಮನನ್ನು ಮಾತ್ರ ಗಮನಿಸುತ್ತಾ ಇರುತ್ತದೆ. ಆದ್ದರಿಂದ ಮಗುವಿಗೆ ಮೊದಲ ಮಾದರಿ ಅಪ್ಪ ಅಮ್ಮ ಆಗಿರುತ್ತಾರೆ ಎಂದು ಅವರು ಹೇಳಿದರು.
ಮಗುವನ್ನು ಅತಿಯಾಗಿ ಹಚ್ಚಿಕೊಂಡು ನಿಯಂತ್ರಿಸುವುದು ಅಥವಾ ಶಾಲೆಯಲ್ಲಿ ಮಗುವಿನ ಚಟುವಟಿಕೆಗಳ ಬಗ್ಗೆ ತೀರಾ ನಿರ್ಲಕ್ಷ್ಯ ವಹಿಸುವ ಸ್ವಭಾವದಿಂದ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮಗುವಿನ ದೃಷ್ಟಿಕೋನದಿಂದಲೇ ಯೋಚಿಸಿ ಹೆಜ್ಜೆ ಇಡುವ, ಮಗುವಿನ ಮುಂದೆ ಅಪ್ಪ ಅಮ್ಮಂದಿರು ತಮ್ಮ ಭಾವನೆಗಳನ್ನು ಆದಷ್ಟು ಸಮತೋಲನದಲ್ಲಿ ಇಡುವ ಪ್ರಕ್ರಿಯೆಯಿಂದ ಪುಟಾಣಿಗಳ ವ್ಯಕ್ತಿತ್ವ ಉತ್ತಮ ರೀತಿಯಲ್ಲಿ ಬೆಳೆಯುತ್ತದೆ ಎಂದು ಅವರು ವಿವರಿಸಿದರು.
ಮಗುವಿನ ಪರವಾಗಿ ಪೋಷಕರೇ ನಿರ್ಣಯವನ್ನು ತೆಗೆದುಕೊಳ್ಳುವುದನ್ನು ರೂಢಿ ಮಾಡಿಕೊಳ್ಳದೇ ಮಗುವಿಗೇ ಆಯ್ಕೆಗಳನ್ನು ಮಾಡಲು ಕಲಿಸಬೇಕು. ಶ್ರಮ ಪಡುವುದು, ಸಣ್ಣಪುಟ್ಟ ತಪ್ಪುಗಳನ್ನು ಮಾಡುವುದರ ಮೂಲಕವೇ ಮಗುವಿನ ವ್ಯಕ್ತಿತ್ವ ಗಟ್ಟಿಯಾಗುತ್ತಾ ಹೋಗುತ್ತದೆ. ಮಗು ಸದಾ ಬೇರೆಯವರ ಮೇಲೆ ಅವಲಂಬಿಸದೇ ಇರುವಂತೆ ನೋಡಿಕೊಳ್ಳುವುದು ಮುಖ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಶ್ವೇತಾ ಮೆಂಡನ್ ನಿರೂಪಿಸಿದರು.