ಕುಂದಾಪುರ: ಮಂಗಳೂರು ತಾಲೂಕಿನ ಕರ್ನಾಡು ಗ್ರಾಮದ ಅಮೃತಾನಂದಮುಯಿ ನಗರದ ಮನೆಯೊಂದರಲ್ಲಿ 2011 ಅಕ್ಟೋಬರ್ 17 ಹಾಗೂ 18 ರಂದು ಯುವತಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ ಆರೋಪಗಳನ್ನು ಎದುರಿಸುತ್ತಿದ್ದ ಆರೋಪಿ ರಾಜೇಶ್ ಆಚಾರ್ಯನನ್ನು ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ದೋಷಮುಕ್ತಿಗೊಳಿಸಿದೆ. ಉಡುಪಿ ತಾಲೂಕಿನ ಹರಿಖಂಡಿಗೆಯವನಾಗಿರುವ ಆರೋಪಿಯು ಘಟನೆಯ ನಂತರ ಯುವತಿಯನ್ನು ಮದುವೆಯಾಗುವ ಭರವಸೆ ನೀಡಿ ಮುಲ್ಕಿ ವಿವಾಹಾಧಿಕಾರಿ ಕಚೇರಿಗೆ ಕರೆದುಕೊಂಡು ಹೋಗಿ ಮದುವೆಯಾಗದೇ ಅಲ್ಲಿಂದ ಇನೋವಾ ಕಾರೊಂದರಲ್ಲಿ ಪರಾರಿಯಾಗಿದ್ದನು.
ಯುವತಿಯು ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 276 ಹಾಗೂ 417ಪ್ರಕರಣ ದಾಖಲಾಗಿತ್ತು. ಮುಲ್ಕಿ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ನಂತರ ನ್ಯಾಯಾಲಯ ಆರೋಪಿಗೆ ಶರ್ತಬದ್ಧ ಜಾಮೀನು ನೀಡಿತ್ತು. ಆರೋಪಿ ಹಾಗೂ ಯುವತಿಯನ್ನು ದೈಹಿಕವಾಗಿ ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು, ಬಟ್ಟೆಬರೆ ಇತ್ಯಾದಿ ವಸ್ತುಗಳನ್ನು ಮಂಗಳೂರು ಪ್ರಾದೇಶಿಕ ಪ್ರಯೋಗಾಲಯದ ವಿಧಿವಿಜ್ಞಾನ ತಜ್ಞರಿಗೆ ಕಳುಹಿಸಲಾಗಿತ್ತು. ಮುಲ್ಕಿಯ ಅಂದಿನ ಪೊಲೀಸ್ ವೃತ್ತ ನಿರೀಕ್ಷಕ ಬಷೀರ್ ಅಹಮ್ಮದ್ ಆರೋಪಿಯ ವಿರುದ್ಧ ಚಾರ್ಜಶೀಟ್‌ನ್ನು ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ 15 ಸಾಕ್ಷಿದಾರರ ವಿಚಾರಣೆ ನಡೆಸಲಾಗಿತ್ತು. ಪ್ರಕರಣದ ಕೂಲಂಕುಶ ವಿಚಾರಣೆ ಮಾಡಿದ ಮಂಗಳೂರಿನ 6 ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಎಸ್.ಎಚ್.ಪುಷ್ಪಾಂಜಲಿ ದೇವಿ ಪ್ರಕರಣವು ಸಾಕ್ಷಾದಾರಗಳಂದ ರುಜುವಾತತಾಗಿಲ್ಲ ಎಂದು ತೀರ್ಪು ನೀಡಿ ಆರೋಪಿಯನ್ನು ಬಿಡುಗಡೆ ಮಾಡಿದ್ದಾರೆ.
ಅತ್ಯಾಚಾರ ಪ್ರಕರಣಗಳಲ್ಲಿ ವಿಚಾರಣೆಗೆ0ದು ನಿಯುಕ್ತವಾದ ಮಂಗಳೂರು ನ್ಯಾಯಾಲಯದಲ್ಲಿ ಇತ್ತಿಚೆಗೆ ಸತತವಾಗಿ ಆರೋಪಿಗಳಿಗೆ ಶಿಕ್ಷೆಯಾಗಿರುವುದು ಉಲ್ಲೇಖಿಸಬಹುದಾಗಿದೆ. ಆರೋಪಿ ರಾಜೇಶ್ ಆಚಾರ್ಯನನ್ನು ದೋಷಮುಕ್ತಿ ಕೋರಿ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.