ಮಂಗಳೂರು,ಫೆ.24 : ಅಂಬೇಡ್ಕರ್ ವೃತ್ತದಿಂದ ಬಂಟ್ಸ್ ಹಾಸ್ಟೆಲ್‌ವರೆಗಿನ ಕಾಂಕ್ರೀಟಿಕೃತ ಚತುಷ್ಪಥ ರಸ್ತೆಯನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೋಮವಾರ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ನಗರದ ಪ್ರಮುಖ ರಸ್ತೆಯಾಗಿರುವ ಬಂಟ್ಸ್ ಹಾಸ್ಟೆಲ್- ಅಂಬೇಡ್ಕರ್ ವೃತ್ತವರೆಗಿನ ರಸ್ತೆ ಅಭಿವೃದ್ಧಿಯಿಂದಾಗಿ ಜನಸಾಮಾನ್ಯರಿಗೆ ಸುಗಮ ಸಂಚಾರಕ್ಕೆ ತುಂಬಾ ಅನುಕೂಲವಾಗಲಿದೆ ಎಂದರು.
ಶಾಸಕ ಜೆ.ಆರ್.ಲೋಬೋ ಮಾತನಾಡಿ, ಮುಖ್ಯಮಂತ್ರಿ ವಿಶೇಷ 100 ಕೋಟಿ ರೂ. ನಿಧಿಯಿಂದ ರಸ್ತೆ ಕಾಂಕ್ರಿಟೀಕರಣಗೊಂಡಿದ್ದು, ಮುಂದಿನ ಹಂತದಲ್ಲಿ ಇತರ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ನೆರವೇರಿಸಲಾಗುವುದು ಎಂದರು. ಮೇಯರ್ ಮಹಾಬಲ ಮಾರ್ಲ ಮಾತನಾಡಿ, ಜನರಿಗೆ ನೀಡಿದ ಭರವಸೆಯಂತೆ ಫೆಬ್ರವರಿಯಲ್ಲಿ ಕಾಮಗಾರಿ ಪೂರ್ತಿಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದರು.
ಒಟ್ಟು 1.96 ಕೋಟಿ ರೂ. ವೆಚ್ಚದಲ್ಲಿ ಒಟ್ಟು 424 ಮೀ. ಉದ್ದದ ರಸ್ತೆಯನ್ನು ಚತುಷ್ಪಥಗೊಳಿಸಿ ಕಾಂಕ್ರಿಟೀಕರಣ ಗೊಳಿಸಲಾಗಿದೆ. ಮುಂದಿನ ಹಂತದಲ್ಲಿ 1.86 ಕೋಟಿ ರೂ. ವೆಚ್ಚದಲ್ಲಿ ಚರಂಡಿ ಹಾಗೂ ಫುಟ್‌ಪಾತ್ ನಿರ್ಮಿಸಲಾಗುವುದು ಎಂದು ಕಾರ್ಪೊರೇಟರ್ ಎ.ಸಿ.ವಿನಯ್‌ರಾಜ್ ಹೇಳಿದ್ದಾರೆ.
ಕಳೆದ ನವೆಂಬರ್‌ನಿಂದ ರಸ್ತೆ ಕಾಮಗಾರಿ ಆರಂಭಗೊಂಡಿದ್ದು, ಫೆಬ್ರವರಿಗೆ ಮುಗಿಸಲಾಗಿದೆ. ಕಾಂಟ್ರಾಕ್ಟುದಾರರಾದ ಗೋಕುಲ್‌ದಾಸ್ ಭಂಡಾರ್ಕರ್ ಗುತ್ತಿಗೆ ವಹಿಸಿಕೊಂಡಿದ್ದು, ಗುತ್ತಿಗೆ ಅವಧಿ ಆರು ತಿಂಗಳ ಕಾಲಾವಕಾಶವಿತ್ತು. ಕೇವಲ ಮೂರೂವರೆ ತಿಂಗಳಿಗೆ ಕಾಮಗಾರಿ ಮುಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಉಪಮೇಯರ್ ಕವಿತಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಶೋಕ ಡಿ.ಕೆ., ಯಶವಂತ್ ಚಿತ್ರಾಪುರ, ಜೆಸಿಂತಾ ವಿಜಯ ಆಲ್ಫ್ರೆಡ್, ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಆಯುಕ್ತೆ ಹೆಫ್ಸಿಬಾ ರಾಣಿ, ಕಾರ್ಪೊರೇಟರ್‌ಗಳಾದ ದೀಪಕ್ ಪೂಜಾರಿ, ರಜನೀಶ್, ಪ್ರವೀಣ್‌ಚಂದ್ರ ಆಳ್ವ, ಸಬಿತಾ ಮಿಸ್ಕಿತ್, ರತಿಕಲಾ, ಅಖಿಲಾ ಆಳ್ವ, ಸುಧೀರ್ ಕಣ್ಣೂರು ಮೊದಲಾದವರು, ಅಧೀಕ್ಷಕ ಎಂಜಿನಿಯರ್ ಕಾಂತರಾಜ್ ಉಪಸ್ಥಿತರಿದ್ದರು.