ಮಂಗಳೂರು,ಮಾರ್ಚ್.5: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಪಿ.ಐ.ಶ್ರೀವಿದ್ಯಾ ಅವರು ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ. 2010ನೇ ಸಾಲಿನ ಐಎಎಸ್ ಅಧಿಕಾರಿಯಾಗಿರುವ ಕೇರಳ ಮೂಲದ ಶ್ರೀವಿದ್ಯಾ, ಸಕಲೇಶಪುರ ವಿಭಾಗ ಅಧಿಕಾರಿ, ಕೊಡಗು ಸಿಇಒ ಆಗಿ ಕರ್ತವ್ಯ ನಿರ್ವಹಿಸಿದ್ದರು.
ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ಕೇಂದ್ರ ಸೇವೆಗೆ ನಿಯೋಜನೆಗೊಂಡ ಹಿನ್ನೆಲೆಯಲ್ಲಿ ಪಿ.ಐ.ಶ್ರೀವಿದ್ಯಾ ಅವರನ್ನು ದ.ಕ.ಜಿಲ್ಲೆಗೆ ನೇಮಕಗೊಳಿಸಿ ಸರಕಾರ ಅದೇಶ ಹೊರಡಿಸಿತ್ತು.
ಹೆರಿಗೆ ರಜೆಯಲ್ಲಿ ತೆರಳಿದ್ದ ಶ್ರೀವಿದ್ಯಾ ಅವರು ಇದೀಗ ಜಿಲ್ಲೆಗೆ ನಿಯುಕ್ತಿಗೊಂಡಿದ್ದಾರೆ. ಮಸ್ಸೂರಿಗೆ ಕೇಂದ್ರೀಯ ಕರ್ತವ್ಯಕ್ಕೆ ವರ್ಗಾವಣೆಗೊಂಡ ನಿರ್ಗಮನ ಸಿಇಒ ತುಳಸಿ ಮದ್ದಿನೇನಿ ಅವರು ನೂತನ ಅಧಿಕಾರಿಗೆ ಅಧಿಕಾರ ಹಸ್ತಾಂತರಿಸಿ, ಶುಭ ಹಾರೈಸಿದರು.
ತುಳಸಿ ಮದ್ದಿನೇನಿ ಕೇಂದ್ರ ಸೇವೆಗೆ ನಿಯೋಜನೆ : ಉತ್ತರಖಂಡದ ಮಸ್ಸೂರಿಯಲ್ಲಿರುವ ಲಾಲ್ ಬಹುದ್ದೂರ್ ಶಾಸ್ತ್ರಿ ರಾಷ್ಟ್ರೀಯ ಅಕಾಡೆಮಿ ಉಪನಿರ್ದೇಶಕರ ಹುದ್ದೆಗೆ ತುಳಸಿ ಮದ್ದಿನೇನಿ ಅವರನ್ನು ನೇಮಕ ಮಾಡಲಾಗಿದ್ದು, ಅವರ ಪತಿ ಕುಂದಾಪುರ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್. ರವಿಶಂಕರ್ ಅವರನ್ನು ಕೂಡ ಇದೇ ಹುದ್ದೆಗೆ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.