ಮಂಗಳೂರು, ಮಾ. 05 : ಮನೆಗೆ ಬೆಂಕಿ ಹತ್ತಿ ಮಹಿಳೆಯೋರ್ವರು ಸುಟ್ಟಗಾಯಗಳೊಂದಿಗೆ ಮೃತಪಟ್ಟ ಘಟನೆ ಬುಧವಾರ ಸಂಜೆ ಮೇರಿಹಿಲ್‌ನಲ್ಲಿ ನಡೆದಿದೆ.ಮೃತ ಮಹಿಳೆಯನ್ನು ದೇವದಾಸ್ ಎಂಬವರ ಪುತ್ರಿ ವಾಣಿ(36) ಎಂದು ಗುರುತಿಸಲಾಗಿದೆ.
ಸಂಜೆ ದೇವದಾಸ್ ಮತ್ತು ಅವರ ಪತ್ನಿ ವಾಕಿಂಗ್‌ಗೆಂದು ಮನೆಯಿಂದ ಹೊರ ಹೋದ ಸಂದರ್ಭದಲ್ಲಿ ಮನೆಯೊಳಗಿನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಇದೇ ಸಂದರ್ಭದಲ್ಲಿ ಮನೆಯೊಳಗಿನಿಂದ ಮಹಿಳೆಯ ಕಿರುಚಾಡುವ ಧ್ವನಿಯೂ ಕೇಳಿಬಂದಿದ್ದು, ಹತ್ತಿರದಲ್ಲೇ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಕಾರ್ಮಿಕರು ಸ್ಥಳಕ್ಕೆ ಧಾವಿಸಿ ಒಳಹೋಗಲು ಪ್ರಯತ್ನಿಸಿದ್ದರಾದರೂ ಮನೆಯ ಎರಡೂ ಕಡೆಯಿಂದ ಬಾಗಿಲು ಮುಚ್ಚಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಕಾರ್ಮಿಕರು ಬಾಗಿಲು ಒಡೆದು ಒಳಪ್ರವೇಶಿಸಿದ್ದು, ಅದಾಗಲೇ ವಾಣಿ ಸುಟ್ಟು ಕರಕಲಾಗಿ ಮೃತಪಟ್ಟಿದ್ದ್ರು ಎನ್ನಲಾಗಿದೆ.
ವಾಣಿ ಅವಿವಾಹಿತರಾಗಿದ್ದು, ತಂದೆ-ತಾಯಿಯೊಂದಿಗೆ ಮೇರಿಹಿಲ್‌ನ ಮನೆಯಲ್ಲಿ ವಾಸವಾಗಿದ್ದರು. ವಾಣಿ ಮನೆಯ ಬಾಗಿಲುಗಳನ್ನು ಮುಚ್ಚಿ ತಮ್ಮ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿ ಕೊಂಡಿರಬೇಕೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.