ಮಂಗಳೂರು,ಮಾರ್ಚ್.10: ಕೊಣಾಜೆ ಸಮೀಪದ ದೇರಳಕಟ್ಟೆಯ ಚರ್ಚ್ ಒಂದರ ಮೇಲೆ ಕಲ್ಲು ತೂರಾಟ ಮಾಡಿ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಉಳ್ಳಾಲ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕಿನ್ಯಾ ಗ್ರಾಮದ ಉಕ್ಕುಡ ಮಸೀದಿ ಬಳಿಯ ನಿವಾಸಿ ಪೈಂಟರ್ ವೃತ್ತಿ ಮಾಡುತ್ತಿರುವ ಆನಂದ ಎಂಬಾತ ಬಂಧಿತ ಆರೋಪಿ.ಸಂಶಯದ ಮೇಲೆ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡಿದಾಗ ಚರ್ಚ್ ಮೇಲೆ ಕಲ್ಲು ತೂರಾಟ ಮಾಡಿರುವ ವಿಷಯವನ್ನು ಒಪ್ಪಿಕೊಂಡಿದ್ದಾನೆ ಎಂದು ಮಂಗಳವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದಾರೆ.
ವಿಚಾರಣೆ ವೇಳೆ ಚರ್ಚ್ ನವರ ಮೇಲೆ ಅಸಮಾಧನದಿಂದ ಈ ಕೃತ್ಯವನ್ನು ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಎರಡು ವಾರಗಳ ಹಿಂದೆ ಈತ ಇದೇ ಚರ್ಚನಲ್ಲಿ ಉದ್ಯೋಗಿಯಾಗಿದ್ದು, ಕೆಲಸ ಬಿಟ್ಟಿದ್ದ ಈತ ತನಗೆ ಕಡಿಮೆ ವೇತನ ಕೊಡುತ್ತಿದ್ದ ಸಿಟ್ಟನ್ನು ತೀರಿಸಿಕೊಳ್ಳಲು ಫೆ.24 ರಂದು ಪಾನಮತ್ತನಾಗಿ ಬಂದು ಚರ್ಚ್ ಗೆ ಕಲ್ಲು ತೂರಿ ಕೊಂಡಿದ್ದಾಗಿ ತಿಳಿಸಿದ್ದಾನೆ. ಈತ ಯಾವುದೇ ಸಂಘಟನೆಗೆ ಸೇರಿದ ವ್ಯಕ್ತಿಯಾಗಿರದೇ ಬರೀ ಸೇಡು ತೀರಿಸಿಕೊಳ್ಳುವ ಇಚ್ಚೆಯಿಂದ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಅಯುಕ್ತರು ತಿಳಿಸಿದರು.
ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಾವಿತ್ರು ತೇಜ್ ಅವರ ನೇತ್ರತ್ವದಲ್ಲಿ ಎಸ್.ಐ ಭಾರತಿ. ಜಿ, ರಾಜೇಂದ್ರ.ಬಿ, ಹಾಗೂ ಸಿಬ್ಬಂಧಿಗಳಾದ ಮೋಹನ್ , ಕಮಲಾಕ್ಷ, ಲಿಂಗ ರಾಜ್, ಪ್ರಶಾಂತ್, ರವಿಚಂದ್ರ ನಡೆಸಿದ ಕಾರ್ಯಾಚರಣೆಯಲ್ಲಿ ಅರೋಪಿಯನ್ನು ಬಂಧಿಸಲಾಗಿದೆ. ಇದೀಗ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಕಮಿಷನರ್ ವಿವರಿಸಿದರು.