ಕನ್ನಡ ವಾರ್ತೆಗಳು

ಗ್ರಾಮಾಂತರ ರಿಕ್ಷಾಗಳಿಗೆ ನಗರ ಪ್ರವೇಶಕ್ಕೆ ಅನುಮತಿ ನೀಡಲು ನಿರ್ಧಾರ 

Pinterest LinkedIn Tumblr

utkadr_rto_meet_1

ಮಂಗಳೂರು, ಮಾರ್ಚ್,13:  ಮಂಗಳೂರು ತಾಲೂಕಿನ ಗ್ರಾಮಾಂತರ ಪ್ರದೇಶದ ರಿಕ್ಷಾಗಳಿಗೆ ಮಂಗಳೂರು ನಗರಕ್ಕೆ ಬಂದು ಹೋಗಲು ಅನುಮತಿ ನೀಡಲು ನಿರ್ಧರಿಸಲಾಗಿದೆ. ಈ ಸಂಬಂದ ಆರೋಗ್ಯ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ  ಜಿಲ್ಲಾಧಿಕಾರಿಗಳು, ಆರ್‌ಟಿ‌ಓ ಮತ್ತು ಪೋಲಿಸ್ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಗ್ರಾಮಾಂತರ ಪ್ರದೇಶದ ರಿಕ್ಷಾಗಳು ಅಲ್ಲಿಂದ ಬಾಡಿಗೆಗೆ ಜನರನ್ನು ನಗರಕ್ಕೆ ಕರೆದುಕೊಂಡು ಬಂದು ತಿರುಗಿ ಹೋಗಬೇಕು. ಆದರೆ ನಗರದೊಳಗೆ ಬೇರೆ ಜನರನ್ನು ಹತ್ತಿಸಿಕೊಂಡು ಬಾಡಿಗೆ ಮಾಡುವಂತಿಲ್ಲ. ಇದನ್ನು ಉಲ್ಲಂಘಿಸಿದರೆ ಪೋಲಿಸರು , ಆರ್ ಟಿ ಓ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವರು ಹೇಳಿದರು.

ಗ್ರಾಮಾಂತರ ಪ್ರದೇಶದ ರಿಕ್ಷಾಗಳನ್ನು ಗುರುತಿಸುವಂತಾಗಲು, ಅವುಗಳಿಗೆ ಹಳದಿ ಬಣ್ಣದ ಬದಲು ಹಸಿರು ಬಣ್ಣ ಬಳಿಯಲು ಸೂಚಿಸಲಾಗಿದೆ. ಇದರಿಂದ ನಗರ ಮತ್ತು ಗ್ರಾಮಾಂತರ ರಿಕ್ಷಾಗಳನ್ನು ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ಗ್ರಾಮಾಂತರ ರಿಕ್ಷಾಗಳು ನಗರಕ್ಕೆ ಬಂದು ಬಾಡಿಗೆ ಮಾಡಿ ಸಿಕ್ಕಿ ಬಿದ್ದರೆ,ಮೊದಲನೇ ಬಾರಿ ರಿಕ್ಷಾವನ್ನು ವಶ ಮಾಡಿ, ೩ ತಿಂಗಳ ಮಟ್ಟಿಗೆ ಲೈಸನ್ಸ್ ಅಮಾನತು ಗೊಳಿಸಲಾಗುವುದು. 2 ನೇ ಬಾರಿಗೆ ಸಿಕ್ಕಿಬಿದ್ದರೆ, ಶಾಶ್ವತವಾಗಿ ಲೈಸನ್ಸ್ ರದ್ದು ಪಡಿಸಲಾಗುವುದು. ಈ ನಿರ್ಧಾರಕ್ಕೆ ಮಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದ ರಿಕ್ಷಾ ಸಂಘಟನೆಗಳು ಒಪ್ಪಿಕೊಂಡಿವೆ ಎಂದು ಸಚಿವರು ಹೇಳಿದರು.

ಈ ಹೊಸ ಆದೇಶದ ಬಗ್ಗೆ ಪೋಲಿಸ್ ಇಲಾಖೆಯ ಎಲ್ಲಾ ತಳಹಂತದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಇದರಿಂದ ರಿಕ್ಷಾ ಚಾಲಕರಿಗೆ ಅನಗತ್ಯ ತೊಂದರೆಗಳಾಗುವುದು ತಪ್ಪಲಿದೆ ಎಂದು ಸಚಿವರು ತಿಳಿಸಿದರು.  ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಆರ್ ಟಿ ಓ ಅಫ್ಜಲ್ ಅಹಮ್ಮದ್ ಖಾನ್, ಸಂಚಾರ ವಿಭಾಗದ ಎಸಿಪಿ ಉದಯನಾಯಕ್, ವಿವಿಧ ರಿಕ್ಷಾ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Write A Comment