ಕುಂದಾಪುರ: ಇತಿಹಾಸ ಪ್ರಸಿದ್ಧ ಮೆಕ್ಕೆಕಟ್ಟು ಶ್ರೀನಂದಿಕೇಶ್ವರ ದೇವಸ್ಥಾನದ ವಾರ್ಷಿಕ ಗೆಂಡಸೇವೆ, ಶೆಡಿ ಉತ್ಸವ ಮುಂತಾದ ಕಾರ್ಯಕ್ರಮಗಳು ಜರುಗಿತು.
ರವಿವಾರ ನಡೆದ ಗೆಂಡಸೇವೆಯಲ್ಲಿ ಸಾವಿರಾರು ಮಂದಿ ಭಕ್ತರು ಹರಿಕೆ ತೀರಿಸಿದರು. ಈ ಸಂದರ್ಭ ನಾಗದೇವರಿಗೆ ಹಾಲಿಟ್ಟು ಸೇವೆ, ಮಹಾಪೂಜೆ, ಡಮರು ಸೇವೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಜಾತ್ರೆಯ ವಿಶೇಷ ಆಕರ್ಷಣೆ ಶೆಡಿ ಉತ್ಸವ : ಇಲ್ಲಿನ ಜಾತ್ರೆಯ ವಿಶೇಷ ಆಕರ್ಷಣೆಗಳಲ್ಲಿ ಒಂದು ಶೆಡಿ ಉತ್ಸವ. ದೇವಾಲಯದ ಎದುರು ಭಾಗದಲ್ಲಿ ಸುಮಾರು 25 ಅಡಿ ಎತ್ತರದ ಕಂಬಿನದ ಮೂರು ಕಂಬಗಳಿದ್ದು, ಅದಕ್ಕೆ ಉದ್ದದ ತೊಲೆಗಳನ್ನು ಬಳಸಿ ಒಂದು ಭಾಗಕ್ಕೆ ಕಬ್ಬಿನದ ತೊಟ್ಟಿಲನ್ನು ಕಟ್ಟಿ ಆ ತೊಟ್ಟಿಲಿನಲ್ಲಿ ಸೇವಾಕರ್ತರನ್ನು ಕುಳ್ಳಿರಿಸಿ, ತೊಲೆಯ ಇನ್ನೊಂದು ಭಾಗವನ್ನು ಭಕ್ತಾಧಿಗಳು ಎಳೆಯುವ ಮೂಲಕ ಶೆಡಿ ಕಂಬಕ್ಕೆ ಮೂರು ಸುತ್ತು ವೃತ್ತಕಾರದಲ್ಲಿ ಪ್ರದಕ್ಷಿಣೆ ಹಾಕಲಾಗುತ್ತದೆ. ಈ ಸಂದರ್ಭ ತೊಟ್ಟಿಲಲ್ಲಿ ಕುಳಿತ ಸೇವಾಕರ್ತರು ದೇವರ ಪ್ರಸಾಧವಾದ ಹೂ,ಬಾಳೆ ಹಣ್ಣುಗಳನ್ನು ಭಕ್ತರತ್ತ ಎಸೆಯುತ್ತಾರೆ. ಕಷ್ಟ ಕಾಲದಲ್ಲಿ ಶೆಡಿ ಸೇವೆ ನೀಡುವುದಾಗಿ ಹರಿಕೆ ಹೊತ್ತವರು ಈ ಮೂಲಕ ಹರಿಕೆ ತೀರಿಸವುದು ವಾಡಿಕೆ. ಸೋಮವಾರ ನಡೆದ ಶೆಡಿ ಉತ್ಸವದಲ್ಲಿ ಸಾವಿರಾರು ಮಂದಿ ಭಕ್ತಾಧಿಗಳು ಭಾಗವಹಿಸಿದರು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಮಣ್ಣ ಹೆಗ್ಡೆ , ಸಮಿತಿಯ ಸದಸ್ಯ ಗರಿಕೆಮಠ ಆನಂತ ಪದ್ಮನಾಭ ಅಡಿಗ, ಕಾಳು ಶಿರಿಯಾರ, ಸುಜಾತ ಪೂಜಾರ್‍ತಿ ಶಿರಿಯಾರ, ಭಾರತಿ ಎಸ್.ಹೆಗ್ಡೆ, ಕೊಳ್ಕೆಬಲು, ಕೆ.ಗೋಪಾಲ ಶೆಟ್ಟಿ ಕೊಳ್ಕೆಬಲು, ಎ.ದಿವಾಕರ ಶೆಟ್ಟಿ ಜಂಬೂರು, ಕೊಳ್ಕೆಬಲು ಹೊಸಮನೆ, ಪ್ರಸಾಧ ಶೆಟ್ಟಿ, ಕೊಳ್ಕೆಬಲು ನಡುಮನೆ, ನರಸಿಂಹ ಪೂಜಾರಿ ಶಿರಿಯಾರ ಮುಂತಾದವರು ಜಾತ್ರೆಯ ನೇತೃತ್ವ ವಹಿಸಿದ್ದರು.