ನವದೆಹಲಿ,ಮಾರ್ಚ್.21 : ವಿದೇಶಗಳಲ್ಲಿ ನಗದು ಆಸ್ತಿಪಾಸ್ತಿ ಮುಚ್ಚಿಡುವ ಭಾರತದ ನಿವಾಸಿಗಳಿಗೆ 10 ವರ್ಷ ಕಠಿಣ ಸೆರೆವಾಸ ವಿಧಿಸಲು ಅನುವು ಮಾಡಿಕೊಡುವ ಮಸೂದೆಗೆ ಲೋಕಸಭೆ ಶುಕ್ರವಾರ ಅನುಮೋದನೆ ನೀಡಿತು.
ವಿದೇಶಗಳಲ್ಲಿರುವ ಆಸ್ತಿಪಾಸ್ತಿಯನ್ನು ನಿಗದಿತ ಕಾಲಮಿತಿಯೊಳಗೆ ಘೋಷಿಸಿಕೊಂಡು ಅದನ್ನು ಕ್ರಮಬದ್ಧಗೊಳಿಸಿಕೊಳ್ಳಲು ಕೂಡ ಇದು ಅವಕಾಶ ಕಲ್ಪಿಸುತ್ತದೆ. ‘ಅಘೋಷಿತ ವಿದೇಶಿ ಆದಾಯ ಮತ್ತು ಆಸ್ತಿಪಾಸ್ತಿ (ತೆರಿಗೆ ವಿಧಿಸುವಿಕೆ– 2015) ಮಸೂದೆ’ ಎಂದು ಕರೆಯಲಾಗಿರುವ ಈ ಮಸೂದೆಯನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದರು. ಇದು 2016ರ ಏ.1ರಿಂದ ಜಾರಿಯಾಗಲಿದೆ.
ವಿದೇಶಿ ಆದಾಯ ಮಾಹಿತಿಯನ್ನು ಮುಚ್ಚಿಟ್ಟಿದ್ದರೆ (ಮೊದಲನೆಯ ಸಲದ ಅಪರಾಧಕ್ಕೆ) 3ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶ ಕಲ್ಪಿಸುತ್ತದೆ. ಇದೇ ಅಪರಾಧವನ್ನು ಮತ್ತೆ ಎಸಗಿದರೆ ಇಷ್ಟೇ ವರ್ಷಗಳ ಜೈಲು ಶಿಕ್ಷೆಯ ಜತೆಗೆ 25 ಲಕ್ಷರಿಂದ 1 ಕೋಟಿ ದಂಡ ವಿಧಿಸಬಹುದಾಗಿದೆ.
ಮಸೂದೆಯ ಮುಖ್ಯಾಂಶಗಳು :
* ವಿದೇಶಿ ಮೂಲದ ಆದಾಯ ಅಥವಾ ಆಸ್ತಿಗೆ ಶೇ 30ರಷ್ಟು ತೆರಿಗೆ.
* ವಿದೇಶಿ ಆದಾಯ ಅಥವಾ ಆಸ್ತಿ ಮಾಹಿತಿಯನ್ನು ಮುಚ್ಚಿಟ್ಟು ಸಿಕ್ಕಿಬಿದ್ದರೆ ಶೇ 30ರಷ್ಟು ತೆರಿಗೆ ಮೊತ್ತದ ಮೂರು ಪಟ್ಟು ದಂಡ.
* ವಿದೇಶಿ ಬ್ಯಾಂಕ್ ಖಾತೆಯಲ್ಲಿ ವಾರ್ಷಿಕವಾಗಿ ಗರಿಷ್ಠ 5 ಲಕ್ಷ ದ ಒಳಗೆ ಠೇವಣಿ ಹೊಂದಿದ್ದರೆ ದಂಡ ಅಥವಾ ವಿಚಾರಣೆ ಇಲ್ಲ.
* ವಿದೇಶದಲ್ಲಿರುವ ಆಸ್ತಿ ಹೊಂದಿದ್ದರೆ ಶೇ 30ರಷ್ಟು ತೆರಿಗೆ ಹಾಗೂ ಅಷ್ಟೇ ಮೊತ್ತದ ದಂಡ ಕಟ್ಟಿ ಅದನ್ನು ಘೋಷಿಸಿಕೊಳ್ಳಲು ಹಾಗೂ ವಿಚಾರಣೆಯಿಂದ ಪಾರಾಗಲು ಒಂದು ಬಾರಿ ಮಾತ್ರ ಕಾಲಮಿತಿಯ ಅವಕಾಶ.
* ವಿದೇಶಿ ಆದಾಯ ಅಥವಾ ಆಸ್ತಿಪಾಸ್ತಿ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಲೆಕ್ಕಪತ್ರ ವಿವರ ಸಲ್ಲಿಸದಿದ್ದರೆ 10 ಲಕ್ಷ ದಂಡ ವಿಧಿಸಲು ಅವಕಾಶ.
* ಉದ್ದೇಶಪೂವರ್ಕವಾಗಿ ತೆರಿಗೆ ವಂಚಿಸಿದರೆ ದಂಡದ ಜತೆಗೆ ಮೂರು ವರ್ಷಗಳಿಂದ 10 ವರ್ಷಗಳವರೆಗೆ ಕಠಿಣ ಜೈಲುಶಿಕ್ಷೆ ವಿಧಿಸಲು ಅವಕಾಶ.
* ವಿದೇಶಗಳಲ್ಲಿ ಅಕ್ರಮವಾಗಿ ಆಸ್ತಿ ಹೊಂದಿರುವ ಮಾಲೀಕರು ಮತ್ತು ಅದರ ಫಲಾನುಭವಿಗಳು, ಈ ಇಬ್ಬರಿಗೂ, ಮಸೂದೆಯ ನಿಬಂಧನೆಗಳು ಅನ್ವಯ.
* ತಪ್ಪು ಲೆಕ್ಕಪತ್ರ ಸಲ್ಲಿಕೆ, ಸುಳ್ಳು ಖಾತೆ ಸಂಖ್ಯೆ, ಸುಳ್ಳು ಹೇಳಿಕೆ ಅಥವಾ ಸುಳ್ಳು ಘೋಷಣೆ ಮಾಡಿದ್ದರೆ 6 ತಿಂಗಳಿನಿಂದ ಹಿಡಿದು 7 ವರ್ಷಗಳವರೆಗೆ ಕಠಿಣ ಸೆರೆವಾಸಕ್ಕೆ ಅವಕಾಶ.