ಮೂಲ್ಕಿ,ಮಾರ್ಚ್.23 :ಇಲ್ಲಿನ ಮೂಲ್ಕಿ ಪೊಲೀಸರು ನಾಲ್ವರು ಅಂತರಾಜ್ಯ ದ್ವಿಚಕ್ರ ವಾಹನ ಕಳ್ಳರನ್ನು ಅವರು ಕಳ್ಳತನ ನಡೆಸಿದ ವಾಹನ ಸಹಿತ ಬಂಧಿಸಲು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಹಾಸನ ಜಿಲ್ಲೆಯ ಚೆನ್ನರಾಯ ಪಟ್ಟಣ ನಿವಾಸಿ ಶಂಕರ(34), ದಾವಣಗೆರೆಯ ಹರಿಹರ ನಿವಾಸಿ ಪ್ರಕಾಶ(32), ಕೇರಳ ರಾಜ್ಯದ ಕಾಸರಗೋಡು ಅಣಂಗೂರು ನಿವಾಸಿ ಮಹಮದ್ ಫಝ್ನಿ ಸುಲ್ತಾನ್(23) ಮತ್ತು ಕೇರಳ ನೀಲೇಶ್ವರದ ನಿವಾಸಿ ಸಫೀಕ್ ಸಿ.ಎಚ್.(23) ಎಂದು ಗುರುತಿಸಲಾಗಿದ್ದು ಆರೋಪಿಗಳಿಂದ ಎರಡು ಬೈಕ್ ಹಾಗೂ ಒಂದು ಟಾಟಾ ಏಸ್ ವಾಹನವನ್ನು ವಶ ಪಡಿಸಿಕೊಳ್ಳಲಾಗಿದೆ.
ಮೂಲ್ಕಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮೂಲ್ಕಿ ಪೊಲೀಸರಿಗೆ ಅನುಮಾನಸ್ಪದವಾಗಿ ಬೈಕಿನಲ್ಲಿ ಬಂದ ಶಂಕರ ಹಾಗೂ ಪ್ರಕಾಶ ಎಂಬವರ ಮೇಲೆ ಸಂಶಯ ಉಂಟಾಗಿದ್ದು ವಾಹನವನ್ನು ತಪಾಸಣೆ ಮಾಡಿದಾಗ ವಾಹನದ ಯಾವುದೇ ದಾಖಲೆ ಪತ್ರಗಳು ದೊರೆಯದ ಹಿನ್ನಲೆಯಲ್ಲಿ ವಾಹನ ಸಹಿತ ಆರೋಪಿಗಳನ್ನು ದಸ್ತಗಿರಿ ಮಾಡಿದ ಪೊಲೀಸರು ತನಿಖೆ ನಡೆಸಿದಾಗ ದ್ವಿಚಕ್ರ ವಾಹನವನ್ನು ಮಂಗಳೂರಿನ ರೈಲ್ವೇ ನಿಲ್ದಾಣದ ಸಮೀಪವಿರುವ ಕೋರ್‍ದಬ್ಬು ದೈವಸ್ಥಾನದಿಂದ ಕಳವು ಮಾಡಿದ್ದಾಗಿ ಮಾಹಿತಿ ನೀಡಿದರು. ಇನ್ನಷ್ಟು ಹೆಚ್ಚು ವಿಚಾರಣೆಗೆ ಒಳಪಡಿಸಿದಾಗ ಮತ್ತೊಂದು ಬೈಕ್ ಹಾಗೂ ಟಾಟಾ ಏಸ್ ಟೆಂಪೋ ಕಳವು ಮಾಡಿದ್ದು ಇದಕ್ಕೆ ಕೇರಳದ ಇಬ್ಬರು ಆರೋಪಿಗಳು ಸಹಕರಿಸಿದ್ದರಿಂದ ಅವರನ್ನು ಸಹ ದಸ್ತಗಿರಿ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳದ ಇಬ್ಬರು ಆರೋಪಿಗಳು ಮಂಗಳೂರಿನ ಕೇಂದ್ರ ಮಾರುಕಟ್ಟೆಗೆ ತರಕಾರಿ ತರುವ ಕೆಲಸ ನಿರ್ವಹಿಸುತ್ತಿದ್ದು ಇದೇ ಸಂದರ್ಭದಲ್ಲಿ ಇವರು ಟೆಂಪೋವೊಂದನ್ನು ಕಳವು ಮಾಡಿದ ಬಗ್ಗೆ ಮಾಹಿತಿ ನೀಡಿದ್ದರು. ಎಲ್ಲಾ ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತನಿಖೆಯ ನೇತೃತ್ವ ವಹಿಸಿದ್ದ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ತಿಳಿಸಿದ್ದಾರೆ. ಪಿ.ಎಸ್.ಐ ಪರಮೇಶ್ವರ, ಎ.ಎಸ್.ಐ ವಾಮನ್ ಸಾಲಿಯಾನ್, ಸಿಬ್ಬಂದಿಗಳಾದ ಧರ್ಮೆಂದ್ರ, ರಾಜೇಶ್, ಶೇಖಪ್ಪ, ಲೋಹಿತ, ಸುಧೀರ್ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.
ನರೇಂದ್ರ ಕೆರೆಕಾಡು_