ಬಂಟ್ವಾಳ, ಮಾರ್ಚ್.23 : ರಾಷ್ಟ್ರೀಯ ಹೆದ್ದಾರಿ 75 ರ ಕಲ್ಲಡ್ಕದಲ್ಲಿ ರವಿವಾರ ಸಂಜೆ ನಡೆದ ಸರಣಿ ರಸ್ತೆ ಅಪಘಾತದಲ್ಲಿ ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಓಮ್ನಿ ಕಾರು. ರಿಕ್ಷಾ ಹಾಗೂ ಬೈಕ್ ನಡುವೆ ಈ ಅವಘಡ ಸಂಭವಿಸಿದ್ದು, ಗಾಯಾಳುಗಳ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ಮಂಗಳೂರು ಶಕ್ತಿನಗರ ನಿವಾಸಿಯ ಕುಟುಂಬವೊಂದು ಪುತ್ತೂರು ಸಮೀಪ ಕಾರ್ಯಕ್ರಮ ಮುಗಿಸಿ ತನ್ನ ಓಮ್ನಿ ಕಾರಿನಲ್ಲಿ ವಾಪಾಸಾಗುತ್ತಿದ್ದ ವೇಳೆ ಎದುರಿನಿಂದ ಬಂದ ಬೋಳಂತೂರು ನಿವಾಸಿ ಅಶ್ರಫ್ ಎಂಬವರು ಚಲಾಯಿಸುತ್ತಿದ್ದ ರಿಕ್ಷಾ ಮುಖಾಮುಖಿ ಡಿಕ್ಕಿ ಹೊಡೆದಿದೆ. ಘಟನೆಯ ತೀವ್ರತೆಗೆ ರಿಕ್ಷಾದ ಮುಂಭಾಗ ಸಂಪೂರ್ಣ ಜಖಂಗೊಂಡು, ವಿರುದ್ದ ದಿಕ್ಕಿಗೆ ತಿರುಗಿನಿಂತರೆ, ಓಮ್ನಿ ಕಾರು ಪಲ್ಟಿಹೊಡೆದು ರಸ್ತೆ ಪಕ್ಕಕ್ಕೆ ಉರುಳಿಬಿದ್ದಿದೆ.ಇದೇ ವೇಳೆ ರಿಕ್ಷಾದ ಹಿಂದೆ ಬರುತ್ತಿದ್ದ ಬೈಕ್ ಗೆ ಓಮ್ನಿ ಕಾರು ಡಿಕ್ಕಿಯಾಗಿದ್ದು, ಬೈಕಿನಲ್ಲಿದ್ದ ಕಾಸರಗೋಡು ದಂಪತಿ ಮಗು ಗಾಯಗೊಂಡಿದ್ದಾರೆ.
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಶಕ್ತಿನಗರ ನಿವಾಸಿ ಒಂದೆ ಮನೆಯ ಮೂವರು ಗಾಯಗೊಂಡಿದ್ದಾರೆ. ಈ ಪೈಕಿ ಮಹಿಳೆಯೊಬ್ಬರ ಸ್ಥಿತಿ ಗಂಭೀರವಾಗಿದೆ, ಬೋಳಂತೀರು ಕಲ್ಪನೆ ನಿವಾಸಿ ಅಶ್ರಫ್ ಅವರ ಕಾಲಿಗೆ ತೀವ್ರತರದ ಗಾಯಗಳಾಗಿದೆ. ಬೈಕ್ ನಲ್ಲಿದ್ದ ಕಾಸರಗೋಡು ನಿವಾಸಿ ದಂಪತಿಯ ಐದು ವರ್ಷದ ಮಗು ರಸ್ತೆಗೆಸೆಯಲ್ಪಟ್ಟು ಚಿಂತಾಜನಕ ಸ್ಥಿತಿಯಲ್ಲಿದೆ ಎಂದು ತಿಳಿದು ಬಂದಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ, ಬಳಿಕ ಮಾಣಿ ಹಾಗೂ ವಿಟ್ಲದ 108 ಅಂಬ್ಯುಲೆನ್ಸ್ ವಾಹನದಲ್ಲಿ ಮಂಗಳೂರಿಗೆ ಸಾಗಿಸಲಾಗಿದೆ. ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳ ಹೆಸರು ವಿವರ ತಿಳಿದು ಬಂದಿಲ್ಲ.