ಮೂಲ್ಕಿ,ಮಾರ್ಚ್.23 : ಡಿ.ಕೆ.ರವಿಯಂತಹ ಪ್ರಾಮಾಣಿಕ ಅಧಿಕಾರಿಯ ಸಾವಿನಲ್ಲಿ ಕಾಣದ ರಾಜಕೀಯ ಕೈಗಳ ಕೈವಾಡವಿದೆ, ಒಬ್ಬ ದಕ್ಷ ಅಧಿಕಾರಿ ರಾಜಕೀಯ ಒತ್ತಡಕ್ಕೆ ಬಲಿಯಾಗಿದ್ದಾರೆ, ಜನರ ಭಾವನೆಗಳಿಗೆ ಧಕ್ಕೆಯಾಗಿ ಸ್ಪೋಟಗೊಳ್ಳುವ ಮೊದಲೇ ಸಿಬಿಐಗೆ ಒಪ್ಪಿಸಬೇಕು, ಸಿಐಡಿಯಿಂದ ಹತ್ತಾರು ಪ್ರಕರಣಗಳು ತನಿಖೆ ನಡೆಯದೇ ಬದಲಾಗಿ ಮುಚ್ಚಿಯೇ ಹೋಗಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು.
ಅವರು ಕಿನ್ನಿಗೋಳಿಯಲ್ಲಿ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದಾಗ ಮಾದ್ಯಮದವರೊಂದಿಗೆ ಮಾತನಾಡಿದರು. ತೋಕೂರು-ಪಾದೂರು ಪೈಪಲೈನ್ ಯೋಜನೆಯ ಸರಿಯಾದ ಸರ್ವೆ ಕಾರ್ಯ ನಡೆದಿಲ್ಲ, ಈ ಬಗ್ಗೆ ಸ್ಥಳೀಯರ ಮತ್ತು ಸಂಬಂದಪಟ್ಟವರ ಸಭೆಯನ್ನು ಜಿಲ್ಲಾಧಿಕಾರಿಯವರ ಸಮ್ಮುಖದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು. ಯಾವುದೇ ಕಾರಣಕ್ಕೂ ಎಂಸಿಎಫ್‌ನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಪುನರುಚ್ಚರಿಸಿದ ಸಂಸದರು, ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರದ ಬಗ್ಗೆ ರಾಜ್ಯ ಸರಕಾರದಿಂದ ಪ್ರಸ್ತಾವ ಹೋಗಿದೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್ ರಾಜ್ಯದಲ್ಲಿ ವಿದ್ಯುತ್ ಅಭಾವವಿರುವುದರಿಂದ ಉಷ್ಣ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲೇ ಬೇಕಾಗಿದೆ ಎಂದಿದ್ದಾರೆ. ಈ ಬಗ್ಗೆ ಅವರಲ್ಲಿ ಚರ್ಚಿಸಿದ್ದೇನೆ ನಿಡ್ದೋಡಿಯಲ್ಲಿ ಈ ಯೋಜನೆ ಬೇಡ ಯಾವುದಾದರೂ ರಾಜ್ಯದ ಇತರ ಬಂಜರು ಭೂಮಿಯಲ್ಲಿ ನಿರ್ಮಿಸಿ ಎಂದು ಸಲಹೆ ನೀಡಿದ್ದೇನೆ ಎಂದರು.
ಸುರತ್ಕಲ್ ಟೋಲ್ ಗೇಟ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸ್ಥಳೀಯರ ವಿರೋಧವಿದ್ದರೆ ಈ ಟೋಲ್ ಗೇಟ್ ನಿರ್ಮಾಣ ರದ್ದು ಪಡಿಸಲಾಗುವುದು. ಕೆಲವು ಸಮಯದ ಹಿಂದೆ ಸರ್ಕುಟ್ ಹೌಸ್‌ನಲ್ಲಿ ಇದರ ಬಗ್ಗೆ ಸಭೆ ಕರೆದು ಚರ್ಚಿಸಿ ಅಲ್ಲಿ ಪ್ರಾರಂಭಿಸುವುದನ್ನು ನಿಲ್ಲಿಸಿದ್ದೇನೆ, ಒಂದು ಕಿಲೋ ಮೀಟರ್ ಅಂತರದಲ್ಲಿ ಅನಿವಾರ್ಯವಾಗಿ ನಿರ್ಮಿಸಬೇಕಾಗುತ್ತದೆ, ಈ ಬಗ್ಗೆ ಸೋಮವಾರ ಜಿಲ್ಲಾಧಿಕಾರಿ ಮತ್ತು ಸ್ಥಳೀಯರ ಸಭೆ ಕರೆದು ಚರ್ಚಿಸಲಾಗುವುದು ಎಂದು ಹೇಳಿದರು.
ಸಂದರ್ಭ ಕ್ಷೇತ್ರದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಭುವನಾಭಿರಾಮ ಉಡುಪ, ಜಗದೀಶ ಅಥಿಕಾರಿ, ಈಶ್ವರ್ ಕಟೀಲ್ ಇನ್ನಿತರರು ಇದ್ದರು.
ನರೇಂದ್ರ ಕೆರೆಕಾಡು_