ಕನ್ನಡ ವಾರ್ತೆಗಳು

‘ಭಗತ್‌ಸಿಂಗ್ ಆಶಯ ಪ್ರಸಕ್ತ ರಾಜಕಾರಣ’ ವಿಚಾರ ಸಂಕಿರಣ

Pinterest LinkedIn Tumblr

shyodya_bagat_sing_1

ಮಂಗಳೂರು, ಮಾರ್ಚ್ .24 : ಜಾತಿ,ಧರ್ಮದ ಹೆಸರಿನಲ್ಲಿ ಅಧಿಕಾರ ಹಿಡಿಯುವ ರಾಜಕಾರಣ ಈ ದೇಶಕ್ಕೆ ಅತ್ಯಂತ ಅಪಾಯಕಾರಿಯಾಗಿದೆ ಎಂದು ಖ್ಯಾತ ಲೇಖಕ ಜಿ.ಪಿ.ಬಸವರಾಜು ತಿಳಿಸಿದ್ದಾರೆ. ಅವರು ಕ್ರಾಂತಿಕಾರಿ ಭಗತ್ ಸಿಂಗ್ ಮತ್ತು ಸಂಗಾತಿಗಳ ಹುತಾತ್ಮ ದಿನಾಚರಣೆ ನೆನಪಿನಲ್ಲಿ ದ.ಕ ಜಿಲ್ಲಾ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ವತಿಯಿಂದ ನಗರದ ಸಹೋದಯ ಸಭಾಂಗಣದಲ್ಲಿ ಹಮ್ಮಿಕೊಂಡ ‘ಭಗತ್‌ಸಿಂಗ್ ಆಶಯ ಪ್ರಸಕ್ತ ರಾಜಕಾರಣ’ ಎಂಬ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದರು.

shyodya_bagat_sing_2

ಸ್ವಾತಂತ್ರ, ಸಮಾನತೆ, ಸಹೋದರತೆಯ ಆಧಾರದಲ್ಲಿ ದೇಶದ ಆಡಳಿತ ನಡೆಯಬೇಕು ಎಂದು ಸ್ವಾತಂತ್ರ ಪೂರ್ವದಲ್ಲಿ ಯೋಚಿಸಿದ ಕ್ರಾಂತಿಕಾರಿ ಭಗತ್ ಸಿಂಗ್ ಕೋಮುವಾದಿ ರಾಜಕೀಯ ಚಿಂತನೆಯನ್ನು ವಿರೋಧಿಸಿದವರು. ಆದರೆ ಸ್ವಾತಂತ್ರ ಹೋರಾಟದ ಕ್ರಾಂತಿಕಾರಿಗಳು ಎಂದರೆ ಬುಡಮೇಲು ಕೃತ್ಯದಲ್ಲಿ ತೊಡಗಿರುವವರು, ರಕ್ತಪಿಪಾಸುಗಳು ಎಂಬ ತಪ್ಪು ಕಲ್ಪನೆ ಮೂಡಿಸಲಾಗುತ್ತಿದೆ. ಕ್ರಾಂತಿಕಾರಿಗಳು ಮಾನವೀಯ ವೌಲ್ಯಗಳ ಬಗ್ಗೆ ನಂಬಿಕೆ ಇರಿಸಿಕೊಂಡಿದ್ದ ವ್ಯಕ್ತಿಗಳು. ಜೀವಹಾನಿ ಮಾಡುವವರಲ್ಲ. ಕ್ರಾಂತಿಕಾರಿಗಳು ಜನರ ಸಮಸ್ಯೆಗಳ ಬಗ್ಗೆ ಗಮನಸೆಳೆಯುತ್ತ ಬಂದಿದ್ದಾರೆ. ಬಾಲ್ಯದಲ್ಲಿ ದೇವರ ಬಗ್ಗೆ ಆಳವಾದ ಭಕ್ತಿಯನ್ನು ಹೊಂದಿದ್ದ ಕುಟುಂಬದಲ್ಲಿ ಬೆಳೆದು ಬಂದ ಭಗತ್‌ಸಿಂಗ್ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಯನ್ನು ಮನಗಂಡು ನಿರೀಶ್ವರವಾದಿಯಾಗಿ ಅಪ್ಪಟ ಕ್ರಾಂತಿಕಾರಿಯಾಗಿ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಲಾಲ ಲಜಪತ್‌ರಾಯ್ ಅವರ ಮೇಲೆ ಬ್ರಿಟಿಷರು ಮಾರಣಾಂತಿಕ ಹಲ್ಲೆ ನಡೆಸಿರುವುದರ ವಿರುದ್ಧ ಸೇಡು ತೀರಿಸಿಕೊಳ್ಳುವ ಸಂದರ್ಭದಲ್ಲಿ ಬ್ರಿಟಿಷರ ಕೈಗೆ ಸಿಕ್ಕಿ ಗಲ್ಲಿಗೇರಿದ ಭಗತ್‌ಸಿಂಗ್, ಸುಖ್‌ದೇವ್, ರಾಜಗುರು ಗುಲಾಮಗಿರಿಯನ್ನು ವಿರೋಧಿಸುತ್ತಲೆ ಜೀವತೆತ್ತರು ಇಂತಹ ಹುತಾತ್ಮರ ಜೀವನ ಯುವಕರಿಗೆ ಆದರ್ಶವಾಗಬೇಕಾಗಿದೆ ಎಂದು ಬಸವರಾಜ ತಿಳಿಸಿದರು. ಕರಾವಳಿಯ ಬಹು ಸಂಸ್ಕೃತಿಯ ವೈವಿಧ್ಯತೆಯ ಪ್ರದೇಶದಲ್ಲಿ ಯುವಕ -ಯುವತಿಯರನ್ನು ಗುರಿಯಾಗಿಸಿ ನಡೆಯುತ್ತಿರುವ ಕೋಮುದ್ವೇಷದ ರಾಜಕಾರಣ ಅತ್ಯಂತ ಹೀನ ಸ್ಥಿತಿಗೆ ಜನರನ್ನು ತಳ್ಳುತ್ತಿದೆ. ಮೋದಿಯ ಆಧುನೀಕರಣ ಅಜೆಂಡ ಗಾಂಧೀಜಿಯ ಗ್ರಾಮ ಸ್ವರಾಜ್ಯಕ್ಕೆ ವಿರುದ್ಧವಾದುದು ಎಂದು ಬಸವರಾಜು ತಿಳಿಸಿದರು.

shyodya_bagat_sing_3

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಚಿಂತಕ ಫಣಿರಾಜ್, ಭಾರತದಲ್ಲಿ ಪ್ರಥಮ ಬಾರಿಗೆ ಎಡ ಚಿಂತನೆಯನ್ನು ಬಿತ್ತಿದ ಭಗತ್‌ಸಿಂಗ್ ಸಮಾಜವಾದಿ ಚಳವಳಿಗೆ ತಳಹದಿಯನ್ನು ರೂಪಿಸಿದ ವ್ಯಕ್ತಿ. ಭಾರತದಲ್ಲಿ ಸ್ವಾತಂತ್ರ, ಸಮಾನತೆ, ಸಹೋದರತೆ ಆಧಾರದಲ್ಲಿ ದೇಶದ ಆಡಳಿತ ನಡೆಯಬೇಕು ಎಂದು ಪ್ರತಿಪಾದಿಸುತ್ತ ಜಾತಿ, ಧರ್ಮ ಆಧಾರದ ಕೋಮುವಾದಿ ರಾಜಕಾರಣದ ವಿರುದ್ಧ ದಿಟ್ಟವಾದ ನಿಲುವನ್ನು ಹೊಂದಿದ್ದ ಮಹಾನ್ ಕ್ರಾಂತಿಕಾರಿಯಾಗಿದ್ದರು ಎಂದು ಫಣಿರಾಜ್ ತಿಳಿಸಿದರು.

ಸಮಾರಂಭದಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ, ಕಾರ್ಯದರ್ಶಿ ಸಂತೋಷ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.

Write A Comment