ಕನ್ನಡ ವಾರ್ತೆಗಳು

ದಿ. ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಸಂಸ್ಮರಣೆ – ಪ್ರಶಸ್ತಿ ಪ್ರದಾನ

Pinterest LinkedIn Tumblr

cennappa_shetty_photo_1

ಮಂಗಳೂರು,ಮಾರ್ಚ್.24 : ‘ವ್ಯಕ್ತಿಯಾಗಿ ಕಲಾವಿದನಾಗಿ ಯಕ್ಷರಂಗದಲ್ಲಿ ಅಸೀಮ ಎತ್ತರಕ್ಕೆ ಏರಿದವರು ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರು. ತಮ್ಮ ಅದ್ಭುತ ಪಾತ್ರ ನಿರ್ವಹಣೆಯಿಂದ, ಪಾಂಡಿತ್ಯ ಪ್ರಪೂರ್ಣತೆಯ ಅರ್ಥಗಾರಿಕೆಯಿಂದ ಯಕ್ಷಗಾನದ ಉಭಯ ತಿಟ್ಟುಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಅವರಿಗೆ ಸಾವಿಲ್ಲ, ಜನಮಾನಸದಲ್ಲಿ ಅವರು ಸದಾ ಅಮರರಾಗಿ ಉಳಿಯುತ್ತಾರೆ’ ಎಂದು ಕರ್ನಾಟಕ ಜಾನಪದ ಯಕ್ಷಗಾನ ಮತ್ತು ತುಳು ಅಕಾಡೆಮಿ ಮಾಜಿ ಸದಸ್ಯ ಹಾಗೂ ‘ಯಕ್ಷರ ಚೆನ್ನ’ ಗ್ರಂಥ ಸಂಪಾದಕ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ವರ್ಷದ ಹಿಂದೆ ಅಗಲಿ ಹೋದ ಪ್ರಸಿದ್ಧ ಯಕ್ಷಗಾನ ಕಲಾವಿದ ದಿ| ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರ ನೆನಪಿಗಾಗಿ ಇತ್ತೀಚೆಗೆ ಮಾವಿನಕಟ್ಟೆಯಲ್ಲಿ ಜರಗಿದ ‘ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಸಂಸ್ಮರಣಾ ಭಾಷಣ ಮಾಡಿದರು. ‘ತಮ್ಮ ನಡೆ-ನುಡಿ ಹಾಗೂ ವೃತ್ತಿ ನಿಷ್ಠೆಯಿಂದ ಚೆನ್ನಪ್ಪ ಶೆಟ್ಟರು ಕಲಾವಿದರಿಗೆಲ್ಲ ಮಾದರಿಯಾಗಿದ್ದರು. ಅವರ ಕುಟುಂಬಕ್ಕೆ ಮಾನಸಿಕ ಸ್ಥೈರ್ಯ ತುಂಬುವುದು ಕಲಾಭಿಮಾನಿಗಳ ಕರ್ತವ್ಯ’ ಎಂದವರು ನುಡಿದರು. ಪಾರ್ಥಿಸುಬ್ಬ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಛಾಂದಸ ಡಾ| ಎನ್. ನಾರಾಯಣ ಶೆಟ್ಟಿ ಶಿಮಂತೂರು ಸಂಸ್ಮರಣಾ ಜ್ಯೋತಿ ಬೆಳಗಿದರು. ಹಿರಿಯ ಅರ್ಥಧಾರಿ ವಾಸು ಶೆಟ್ಟಿ ಕುತ್ಲೋಡಿ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ೯೧ ವರ್ಷದ ಹಿರಿಯ ಯಕ್ಷಗಾನ ಹಾಸ್ಯಗಾರ ಮಿಜಾರು ಅಣ್ಣಪ್ಪ ಅವರಿಗೆ ರೂಪಾ ಹತ್ತು ಸಾವಿರ ನಗದಿನೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ, ಪಂಚಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಮತ್ತು ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ರಮೇಶ್ ಭಟ್ ಮಾದೇರಿ ಮುಖ್ಯ ಅತಿಥಿಗಳಾಗಿದ್ದರು. ಕಲಾವಿದ ಸುಬ್ರಹ್ಮಣ್ಯ ಹೆಗ್ಡೆ ಯಲಗುಪ್ಪ ಪ್ರಶಸ್ತಿ ಫಲಕ ಓದಿದರು.

ಸಿದ್ದಕಟ್ಟೆ ಗಂಗಾಧರ ಶೆಟ್ಟಿ ಸ್ವಾಗತಿಸಿದರು. ಹಿರಿಯ ಯಕ್ಷಗಾನ ಕಲಾವಿದ, ಪ್ರಸಂಗಕರ್ತ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಹೇಮಲತಾ ಚೆನ್ನಪ್ಪ ಶೆಟ್ಟಿ, ಭುವನ್ ಪ್ರಸಾದ್ ಮತ್ತು ಭೂಷಣ್ ಶೆಟ್ಟಿ ಉಪಸ್ಥಿತರಿದ್ದರು.

ಸಮಾರಂಭದ ಅಂಗವಾಗಿ ಹೊಸನಗರ ಶ್ರೀ ರಾಮಚಂದ್ರಾಪುರ ಮೇಳದವರಿಂದ ‘ಹಿರಣ್ಯಾಕ್ಷ- ಹಿರಣ್ಯಕಶ್ಯಪ-ವಿರೋಚನ’ ಯಕ್ಷಗಾನ ಬಯಲಾಟ ಜರಗಿತು,

Write A Comment