ಕುಂದಾಪುರ: ಕುಂದಾಪುರ ತಾಲೂಕು ಆಡಳಿತ ಕರ್ನಾಟಕ ರಾಜ್ಯ ನೇಕಾರರ ಒಕ್ಕೂಟ ಇದರ ಕುಂದಾಪುರ ಶಾಖೆಯ ವತಿಯಿಂದ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ “ಶ್ರೀ ದೇವರ ದಾಸಿಮಯ್ಯ ಜನ್ಮದಿನಾಚರಣೆ’ ಕಾರ್ಯಕ್ರಮವು ಬುಧವಾರ ಸಂಜೆ ನಡೆಯಿತು.
ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಭಾಸ್ಕರ ಬಿಲ್ಲವ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇವಾಂಗ ಜನಾಂಗದಲ್ಲಿ ಮೊಟ್ಟ ಮೊದಲು ಪ್ರಸಿದ್ಧವಾದವರು ದೇವರ ದಾಸಿಮಯ್ಯ. ಸೀರೆ ನೇಯುವ ಕೆಲಸದಿಂದ ಜೀವನ ಸಾಗಿಸುತ್ತಿದ್ದ ಇವರು ರಾಮನಾಥ ಎನ್ನುವ ನಾಮಂಕಿತವನ್ನು ಕೊಟ್ಟು ಅನೇಕ ವಚನಗಳನ್ನು ರಚಿಸಿದ್ದಾರೆ. ತುಂಬಾ ಉಪಯುಕ್ತ ಮತ್ತು ತಮ್ಮ ದಿನನಿತ್ಯದ ಜೀವನಕ್ಕೆ ಸಂಭಂದಿಸಿದ ವಿಷಯಗಳ ಬಗ್ಗೆಯೆ ರಚಿಸಿದ ದೇವರ ದಾಸಿಮಯ್ಯ ಅವರ ವಚನಗಳು ತುಂಬಾ ಸರಳವಾಗಿ ಮನೆಸೂರೆಗೊಳ್ಳುತ್ತವೆ. ಅವರ ಆದರ್ಶಗಳು ಎಲ್ಲರಿಗೂ ಮಾದರಿಯಾಗಬೇಕಾಗಿದೆ ಎಂದರು.
ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ನೆರೆದವರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ರಾಜ್ಯ ನೇಕರರ ಒಕ್ಕೂಟದ ಕಾರ್ಯಾಧ್ಯಕ್ಷ ರಘು ಶೆಟ್ಟಿಗಾರ್, ಕುಂದಾಪುರ ತಾಲೂಕುಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶೇಶಪ್ಪ, ಕೈಮಗ್ಗ ಒಕ್ಕೂಟದ ದರಣೀಶ್ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕಿ ರೇಖಾ ಬನ್ನಾಡಿ ಅವರಿಂದ ದೇವರ ದಾಸಿಮಯ್ಯ ಅವರ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು..