ಕನ್ನಡ ವಾರ್ತೆಗಳು

ಕೇಂದ್ರ ಪ್ರಾಯೋಜಿತ ಯೋಜನೆಯ ಶೇ.50ರಷ್ಟು ಅನುದಾನ ರಾಜ್ಯದಲ್ಲಿ ಬಳಕೆಯಾಗಿಲ್ಲ: ಸಚಿವ ಅನಂತ್ ಕುಮಾರ್ ಆರೋಪ

Pinterest LinkedIn Tumblr

Ananth_kuma_Prsmt_1

ಮಂಗಳೂರು,ಮಾರ್ಚ್.28:  ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾರ ರಾಜ್ಯಕ್ಕೆ ನಾನಾ ಯೋಜನೆಗಳ ಮೂಲಕ ಬಿಡುಗಡೆಗೊಳಿಸಿದ್ದ ಅನುದಾನದಲ್ಲಿ ಶೇ.50ರಷ್ಟು ಹಣವನ್ನು ಬಳಕೆ ಮಾಡಿಲ್ಲ ಎಂದು ಕೇಂದ್ರ ರಸಗೊಬ್ಬರ, ರಾಸಾಯನಿಕ ಮತ್ತು ಔಷಧ ನಿರ್ವಹಣಾ ಸಚಿವ ಅನಂತ್ ಕುಮಾರ್ ಆರೋಪಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2014- 15ನೆ ಸಾಲಿಗೆ ಕರ್ನಾಟಕ ರಾಜ್ಯ ಸರಕಾರಕ್ಕೆ ಕೇಂದ್ರದಿಂದ 21 ಸಾವಿರ ಕೋಟಿ ರೂ. ಬಿಡುಗಡೆಯಾಗಿದ್ದು, ಅದರಲ್ಲಿ 10 ಸಾವಿರ ಕೋಟಿ ರೂ.ಗಳನ್ನು ಹಣ ಇನ್ನೂ ಬಳಕೆ ಮಾಡಿಲ್ಲ. ಕೇಂದ್ರ ಅನುದಾನ ನೀಡುತ್ತಿಲ್ಲ ಎಂದು ವೃತಾ ಆರೋಪ ಮಾಡುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೇಂದ್ರದ ಯೋಜನೆಗಳಾದ ಇಂದಿರಾ ಆವಾಜ್, ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ, ರಾಜೀವ ಗಾಂಧಿ ವಿದ್ಯುದ್ದೀಕರಣ ಸೇರಿದಂತೆ ಹಲವಾರು ಕೇಂದ್ರ ಪ್ರಾಯೋಜಿತ ಯೋಜನೆಗಳಿಗಾಗಿ ಬಿಡುಗಡೆಯಾದ ಹಣದಲ್ಲಿ ಶೇ.50 ರಷ್ಟು ಅನುದಾನ ಇನ್ನೂ ಬಳಕೆಯಾಗಿಲ್ಲ ಎಂದಾದರೆ ರಾಜ್ಯದಲ್ಲಿ ಯಾವ ರೀತಿಯ ಆಡಳಿತ ನಡೆಯುತ್ತಿದೆ ಎಂದು ಅನಂತ್ ಕುಮಾರ್ ಪ್ರಶ್ನಿಸಿದರು.

Ananth_kuma_Prsmt_2 Ananth_kuma_Prsmt_3

ರಾಜ್ಯದಲ್ಲಿ ರಸಗೊಬ್ಬರ ಕಾರ್ಖಾನೆಗೆ ಕೇಂದ್ರ ಸಿದ್ಧ: ರಾಜ್ಯದಲ್ಲಿ ರಸಗೊಬ್ಬರ ಕಾರ್ಖಾನೆ ಆರಂಭಿಸಲು ಕೇಂದ್ರ ಸಿದ್ಧವಿದೆ. ಈ ಬಗ್ಗೆ ಮುಖ್ಯಮಂತ್ರಿಯನ್ನು ಇತ್ತೀಚೆಗೆ ಭೇಟಿ ಮಾಡಿದ ಸಂದರ್ಭ ಮಾಹಿತಿ ನಿಡಲಾಗಿತ್ತು. ರಾಜ್ಯದಿಂದ 500 ಎಕರೆ ಭೂಮಿ ಹಾಗೂ ಶೇ.10 ಈಕ್ವಿಟಿ ಶೇರು ಪಾವತಿಸಲು ಸೂಚಿಸಲಾಗಿತ್ತು. ಆದರೆ ಈ ಬಗ್ಗೆ ರಾಜ್ಯ ಸರಕಾರ ಮುಂದಿನ ಪ್ರಕ್ರಿಯೆಯನ್ನೇ ನಡೆಸಿಲ್ಲ ಎಂದು ತಿಳಿಸಿದರು. ಯೋಜನೆ ಕೇಂದ್ರದ್ದಾದರೂ ಅದಕ್ಕೆ ಬೇಕಾದ ಮೂಲಭೂತ ಸೌಲಭ್ಯ ಹಾಗೂ ಭೂಮಿ ನೀಡುವ ಜವಾಬ್ದಾರಿ ರಾಜ್ಯ ಸರಕಾರದ್ದಾಗಿದೆ ಎಂದು ಅವರು ತಿಳಿಸಿದರು.

ದೇಶದಲ್ಲಿ 32 ಮಿಲಿಯ ಟನ್ ಯೂರಿಯಾದ ಬೇಡಿಕೆ ಇದೆ. ಈಗ 22 ಮಿಲಿಯ ಟನ್ ಯೂರಿಯಾ ಉತ್ಪಾದನೆಯಾಗುತ್ತಿದೆ. ಉಳಿದ ಯೂರಿಯಾವನ್ನು ವಿದೇಶದಿಂದ ತರಿಸಲಾಗುತ್ತಿದೆ. ಇನ್ನು ಮುಂದಕ್ಕೆ ಪ್ರಧಾನ ಮಂತ್ರಿಯವರ ‘ಮೇಕ್ ಇನ್ ಇಂಡಿಯಾ’ ಘೋಷಣೆಯಂತೆ ನಮ್ಮಲ್ಲೇ ಉತ್ಪಾದಿಸಲು ಚಿಂತನೆ ನಡೆಸಲಾಗಿದೆ ಇದಕ್ಕಾಗಿ ದೇಶದ ನಾನಾ ಕಡೆಗಳಲ್ಲಿ ಸುಮಾರು 10 ಹೊಸ ರಸಗೊಬ್ಬರ ತಯಾರಿಕಾ ಘಟಕ ಸ್ಥಾಪನೆಗೆ ಸರಕಾರ ಮುಂದಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ಲಾಸ್ಟಿಕ್, ಫಾರ್ಮಾ ಕೇಂದ್ರವನ್ನು ಆರಂಭಿಸಲು ಕೂಡಾ ಕೇಂದ್ರ ಉತ್ಸುಕವಾಗಿದೆ. ಪ್ರಸ್ತುತ ದೇಶದಲ್ಲಿ 12 ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದಿಸಲಾಗುತ್ತಿದೆ. 2020ರ ಅವಧಿಗೆ 20 ಮಿಲಿಯ ಟನ್ ಪ್ಲಾಸ್ಚಿಕ್ ಉಪಯೋಗವಾಗಲಿದೆ. ಇದಕ್ಕಾಗಿ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್‌ಗಳ ಅಗತ್ಯವಿದೆ. ಪ್ಲಾಸ್ಟಿಕ್ ಘಟಕಗಳನ್ನು ರಚಿಸಬೇಕಾಗಿದೆ. ಅದಕ್ಕಾಗಿ ನುರಿತ ಪ್ಲಾಸ್ಟಿಕ್ ಎಂಜಿನಿಯರ್‌ಗಳು, ತಂತ್ರಜ್ಞರ ಅಗತ್ಯವಿದೆ. ಅವರನ್ನು ಸಿದ್ಧಪಡಿಸಲು ಪ್ಲಾಸ್ಟಿಕ್ ಶಿಕ್ಷಣ ಸಂಸ್ಥೆಯನ್ನು ಬೆಂಗಳೂರು ಅಥವಾ ಮಂಗಳೂರಿನಲ್ಲಿ ಆರಂಭಿಸಬಹುದಾಗಿದೆ. ಈ ಬಗ್ಗೆ ರಾಜ್ಯ ಸರಕಾರಕ್ಕೆ ಉತ್ಸುಕತೆ ತೋರಬೇಕು ಎಂದರು.

Ananth_kuma_Prsmt_4

ಎಂಸಿಎಫ್ ಸಮಸ್ಯೆಗೆ ಯುಪಿಎ ಕಾರಣ: ನಾಫ್ತಾ ಮೂಲಕ ಕಾರ್ಯಗತಗೊಳ್ಳುತ್ತಿರುವ ರಸಗೊಬ್ಬರ ಕಾರ್ಖಾನೆಗಳನ್ನು ಗ್ಯಾಸ್ ಆಧಾರಿತವನ್ನಾಗಿ ಪರಿಸರ್ತಿಸಬೇಕು ಎಂದು 2007ರಲ್ಲಿ ಯುಪಿಎ ಸರಕಾರ ಹಠಾತ್ತನೆ ಆದೇಶ ನೀಡಿತ್ತು. ಆದರೆ ಈ ಬಗ್ಗೆ ಏಳು ವರ್ಷಗಳ ಕಾಲ ಯಾವುದೇ ಬದಲಿ ವ್ಯವಸ್ಥೆ ಮಾಡದೆ 2014ರಲ್ಲಿ ನಾಫ್ತಾ ಮೂಲಕ ಕಾರ್ಯ ನಿರ್ವಹಿಸುವ ಕಾರ್ಖಾನೆಗಳಿಗೆ ಅನುದಾನ ಸ್ಥಗಿತಗೊಳಿದ ಕರಣ ಎಂಸಿಎಫ್ ಕಾರ್ಖಾನೆ ಸಮಸ್ಯೆಗೆ ಸಿಲುಕಿತ್ತು.

ಅಂದೇ ವೀರಪ್ಪ ಮೊಯ್ಲಿ ಮತ್ತು ಆಸ್ಕರ್ ಫರ್ನಾಂಡಿಸ್ ಮನಸ್ಸು ಮಾಡಿದ್ದರೆ ಕೇರಳ ಮುಖ್ಯಮಂತ್ರಿ ಜತೆಯಲ್ಲಿ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಿತ್ತು. ಆದರೆ ಅವರಿಗೆ ಎಂಸಿಎಫ್ ಘಟಕ ಮುಂದುವರಿಯುವುದು ಬೇಕಿರಲಿಲ್ಲ ಎಂದು ಟೀಕಿಸಿದರು.

ಸಂಸದ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್‌ಸಿಂಹ ನಾಯಕ್, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸುಲೋಚನಾ ಭಟ್, ಶಾಸಕ ಸುನಿಲ್ ಕುಮಾರ್, ಯೋಗೀಶ್ ಭಟ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Write A Comment