ಮಂಗಳೂರು,ಮಾರ್ಚ್.30: ಯುವಕನೋರ್ವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಕುಂಟಿಕಾನ್ ಸಮೀಪದ ದೇರೆಬೈಲ್ ನೆಕ್ಕಿಲಗುಡ್ಡೆಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ. ಕೊಲೆಯಾದ ಯುವಕನನ್ನು ನೆಕ್ಕಿಲಗುಡ್ಡೆ ಪ್ರಶಾಂತ್ ನಗರದ ನಿವಾಸಿ ರಿತು ಅಲಿಯಾಸ್ ರಿತೇಶ್ (30) ಎನ್ನಲಾಗಿದೆ.
ಮಾರ್ಚ್ 29 ರಂದು ರಾತ್ರಿ ಸುಮಾರು ಒಂದು ಗಂಟೆ ಸಮಯ ರಿತೇಶ್ ತನ್ನ ಸ್ನೇಹಿತರಾದ ನಿತೇಶ್, ಯತೀಶ್ ಹಾಗೂ ಲೋಹೀತ್ ಎಂಬವರ ಜೊತೆ ಶನೀಶ್ವರ ಪೂಜೆಯಲ್ಲಿ ಪಾಲ್ಗೊಂಡ್ಡು ಹಿಂತಿರುಗುತ್ತಿದ್ದಾಗ ರಿತೇಶ್‌ನ ವಿರೋಧಿಗಳು ಎನ್ನಲಾದ ಪ್ರಭಾಕರ್ ಬಂಗೇರಾ ಹಾಗೂ ನಿಶಾಂತ್ ಕಾವೂರ್ ಎಂಬವರು ತಮ್ಮ ಇತರ ಗೆಳೆಯರ ಜೊತೆ ಇವರನ್ನು ಹಿಂಬಾಲಿಸಿಕೊಂಡು ಬಂದು ರಿತೇಶ್ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭ ಪ್ರಭಾಕರ್ ಬಂಗೇರಾ ರಿತೇಶ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.
ಘರ್ಷಣೆಯಲ್ಲಿ ಗಾಯಗೊಂಡಿರುವ ರಿತೇಶ್‌ನ ಇತರ ಮೂವರು ಸ್ನೇಹಿತರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಿತೇಶ್ ಹಾಗೂ ಪ್ರಭಾಕರ್ ಬಂಗೇರಾ ಅವರ ನಡುವೆ ಕೆಲವು ದಿನಗಳಿಂದ ಹಣಾಕಾಸು ( ಫೈನಾನ್ಸ್) ವಿಚಾರದಲ್ಲಿ ಘರ್ಷಣೆ ನಡೆಯುತ್ತಿದ್ದು, ಇದೇ ವಿಚಾರದಲ್ಲಿ ರಿತೀಶ್ ನನ್ನು ಹರಿತವಾದ ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಗಿರೀಶ್ ಪುತ್ರನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಿತೇಶ್ ಮರ್ಡರ್
ಮಂಗಳೂರು: ಮಾಲೆಮಾರ್ ನೆಕ್ಕಿಲ ಗುಡ್ಡೆಯ ಅಶ್ವತ್ಥಕಟ್ಟೆ ಸಮೀಪ ಭಾನುವಾರ ತಡರಾತ್ರಿ ಕೊಲೆ ಪ್ರಕರಣವೊಂದರ ಆರೋಪಿ ಯುವಕನೊಬ್ಬನನ್ನು ಬರ್ಬರವಾಗಿ ಕಡಿದು ಕೊಲೆ ಮಾಡಲಾಗಿದೆ. ಜೆಡಿಎಸ್ ಮುಖಂಡ ಗಿರೀಶ್ ಪುತ್ರನ್ ಕೊಲೆ ಪ್ರಕರಣದ ಆರೋಪಿ ರಿತೇಶ್ ಯಾನೆ ರಿತು (31) ಕೊಲೆಯಾದ ಯುವಕ.
ನಾಟಕ ಮುಗಿದ ಬಳಿಕ: ಭಾನುವಾರ ನೆಕ್ಕಿಲಗುಡ್ಡೆಯ ಅಶ್ವತ್ಥಕಟ್ಟೆಯಲ್ಲಿ ಸತ್ಯನಾರಾಯಣ ಪೂಜೆ ಪ್ರಯುಕ್ತ ಆಯೋಜಿಸಿದ್ದ ರಸಮಂಜರಿ ಮತ್ತು ನಾಟಕ ಕಾರ್ಯಕ್ರಮದ ಮುಗಿದ ಬಳಿಕ ಈ ಘಟನೆ ನಡೆದಿದೆ.
ಭಾನುವಾರ ರಾತ್ರಿ ಸುಮಾರು 12.30ಕ್ಕೆ ನಾಟಕ ಮುಗಿದಿದ್ದು, ರಿತೇಶ್ ಹಾಗೂ ಆತನ ಸ್ನೇಹಿತರಾದ ಲೋಹಿತ್, ಮಿಥುನ್ ಮತ್ತು ಯತೀಶ್ ನಾಟಕ ನೋಡಿದ ಬಳಿಕ ಮನೆಗೆ ಹಿಂತಿರುಗುತ್ತಿದ್ದರು. ಈ ಸಮಯದಲ್ಲಿ ನೆಕ್ಕಿಲಗುಡ್ಡೆ ನಿವಾಸಿ ಪ್ರಭಾ ಯಾನೆ ಪ್ರಭಾಕರ, ನಿಶಾಂತ್ ಕಾವೂರು ಮತ್ತಿತರರಿದ್ದ ತಂಡ ತಲವಾರಿನಿಂದ ದಾಳಿ ನಡೆಸಿ ಯದಾತದ್ವ ಕಡಿದು ಪರಾರಿಯಾಗಿದೆ. ಹೊಟ್ಟೆ ಭಾಗಕ್ಕೆ ಬಲವಾದ ತಲವಾರಿನಿಂದ ಕಡಿದ ಗಾಯವಾಗಿದ್ದು, ನೆಲಕ್ಕೆ ಉರುಳಿದ ರಿತೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ತಡೆದವರಿಗೂ ಕಡಿದರು:
ಇದೇ ಸಂದರ್ಭ ದಾಳಿಯನ್ನು ತಡೆಯಲು ಹೋದ ಇತರ ಮೂವರಿಗೂ ಕಡಿಯಲಾಗಿದೆ. ಕೊಟ್ಟಾರಚೌಕಿ ಪ್ರೇಮಾ ಲೇಔಟ್ ನಿವಾಸಿ ಮಿಥುನ್ ಎಂಬಾತನ ಬೆನ್ನು, ಕಣ್ಣಿನ ಭಾಗ ಹಾಗೂ ಕತ್ತಿನ ಭಾಗಕ್ಕೆ ಕಡಿಯಲಾಗಿದೆ. ಮಿಥುನ್ ಅಲ್ಲಿಂದ ತಪ್ಪಿಸಿಕೊಂಡು ನೆಕ್ಕಿಲಗುಡ್ಡೆಯ ಮತ್ತೊಂದು ಬದಿಯ ವಸತಿ ಬಡಾವಣೆಗೆ ಓಡಿ ಬಂದು ಮನೆಯೊಂದರ ಬಾಗಿಲು ಬಡಿದು ನೆರವು ಯಾಚಿಸಿದ್ದಾನೆ. ಬಳಿಕ ಸ್ಥಳೀಯರು ಕಾವೂರು ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಆಗಮಿಸಿ ಮಿಥುನ್‌ನನ್ನು ಕರೆದೊಯ್ದಿದ್ದಾರೆ. ಲೋಹಿತ್‌ನ ಬಲ ಕೈ, ಬಲ ಭುಜಕ್ಕೆ ಹಾಗೂ ಯತೀಶ್‌ನ ಕೈ ಕಾಲಿಗೆ ತಲವಾರಿನಿಂದ ಕಡಿಯಲಾಗಿದ್ದು, ಎಲ್ಲರನ್ನೂ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಣಕಾಸಿನ ವ್ಯವಹಾರ ಕಾರಣ:
ರಿತೇಶ್ ಹತ್ಯೆಗೆ ಹಣಕಾಸಿನ ವ್ಯವಹಾರವೇ ಕಾರಣ ಎಂದು ಕಾವೂರು ಪೊಲೀಸರು ತಿಳಿಸಿದ್ದಾರೆ. ಆರೋಪಿ ಪ್ರಭಾಕರ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದು, ಈತನ ವ್ಯವಹಾರಕ್ಕೆ ರಿತೇಶ್ ಹಣಕಾಸು ನೆರವು ನೀಡಿದ್ದ. ಆದರೆ ಕೊಟ್ಟ ಹಣವನ್ನು ರಿತೇಶ್ ಮರಳಿ ನೀಡುವಂತೆ ಪ್ರಭಾಕರನ ಮೇಲೆ ಒತ್ತಡ ಹಾಕುತ್ತಿದ್ದ. ಭಾನುವಾರ ನಾಟಕ ಮುಗಿದ ಬಳಿಕ ಎಲ್ಲರೂ ತೆರಳಿದ ಬಳಿಕ ರಿತೇಶ್ ತನ್ನ ಸಾಲದ ಹಣ ನೀಡುವಂತೆ ಪ್ರಭಾಕರನಲ್ಲಿ ಕೇಳಿದ್ದ. ಈ ಸಂದರ್ಭ ಪ್ರಭಾಕರ ಮತ್ತು ರಿತೇಶ್ ನಡುವೆ ಗಲಾಟೆ ನಡೆದಿದೆ. ಬಳಿಕ ಪ್ರಭಾಕರ ಸ್ವಲ್ಪ ದೂರ ಹೋಗಿ ಮತ್ತೆ ಬಂದು ರಿತೇಶನಿಗೆ ತಲವಾರಿನಿಂದ ಕಡಿದಿದ್ದಾನೆ. ಈತನ ಜತೆಗಿದ್ದ ನಿಶಾಂತ್ ಕಾವೂರು ಹಾಗೂ ಇತರ ಮೂವರು ತಮ್ಮಲ್ಲಿದ್ದ ತಲವಾರಿನಿಂದ ಕಡಿದಿದ್ದಾರೆ.
ಗಿರೀಶ್ ಪುತ್ರನ್ ಕೊಲೆ ಆರೋಪಿ:
ರಿತೇಶ್ 2012ರ ಡಿ.21ರಂದು ನಡೆದಿದ್ದ ಜೆಡಿಎಸ್ ಮುಖಂಡ ಗಿರೀಶ್ ಪುತ್ರನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ. ನಗರದ ಹಲವಾರು ಯುವಕ – ಯುವತಿಯರನ್ನು ಬಳಸಿಕೊಂಡು ಪ್ರೇಮದ ನಾಟಕವಾಡಿ ಹಣ ದೋಚುತ್ತಿದ್ದ ಕೋಡಿಕಲ್ ನ ನತಾಶ ಎಂಬಾಕೆ ಜೊತೆ ಗಿರೀಶ್ ಪುತ್ರನ್‌ಗೆ ಸಂಬಂಧವಿರುವುದನ್ನು ತಿಳಿದ ಆಕೆಯ ಪ್ರೇಮಿ ರಾಜೇಶ್ ಹಾಗೂ ನತಾಶಳ ಇನ್ನೋರ್ವ ಸ್ನೇಹಿತ ಬೋಳೂರಿನ ಪ್ರಶಾಂತ್ ಎಂಬವರು ಸೇರಿ ರಿತೇಶ್ ಮೂಲಕ ಗಿರೀಶ್ ಪುತ್ರನ್‌ನ್ನು ಕೊಲ್ಲಿಸಿದ್ದರು.
ಕೊಲೆ ಬಳಿಕ ಈತ ಮುಂಬಯಿ, ದುಬೈ ಸೇರಿದಂತೆ ಕೆಲವೆಡೆ ತಲೆಮರೆಸಿಕೊಂಡು ತಿರುಗಾಡುತ್ತಿದ್ದ. 2013 ಮಾರ್ಚ್ ಅಂತ್ಯದಲ್ಲಿ ಈತ ಊರಿಗೆ ಬಂದಿದ್ದ ಮಾಹಿತಿ ಪಡೆದ ಅಂದಿನ ಬಜಪೆ ಇನ್‌ಸ್ಪೆಕ್ಟರ್ ದಿನಕರ ಶೆಟ್ಟಿ ನೇತೃತ್ವದ ಪೊಲೀಸರ ತಂಡ ರಿತೇಶ್‌ನನ್ನು ಕೂಳೂರು ಸಮೀಪ ಬಂಧಿಸಿ ಜೈಲಿಗಟ್ಟಿದ್ದರು. ಸುಮಾರು ಒಂದು ವರ್ಷ ಜೈಲಿನಲ್ಲಿದ್ದ ರಿತೇಶ್ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಆ ಬಳಿಕ ನೆಕ್ಕಿಲಗುಡ್ಡೆಯಲ್ಲಿ ನೆಲೆಸಿದ್ದ.