ಮಂಗಳೂರು ಮಾರ್ಚ್,30 : ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಕಂಡು ಬರುತ್ತಿರುವ ಶಾಲಾ ಮಕ್ಕಳಿಗೆ ಲೈಂಗಿಕ ಕಿರುಕುಳ ಇತ್ಯಾದಿ ಪ್ರಕರಣಗಳನ್ನು ನಿಯಂತ್ರಿಸುವುದು ಸೇರಿದಂತೆ ಶಾಲಾ ಮಕ್ಕಳ ಹಿತದೃಷ್ಠಿಯಿಂದ ಶಾಲಾ ವಾಹನಗಳಿಗೆ ಕಡ್ಡಾಯವಾಗಿ ಜಿ.ಪಿ.ಎಸ್. ನ್ನು ಮುಂದಿನ ಶೈಕ್ಷಣಿಕ ವರ್ಷಾರಂಭದ ಒಳಗಾಗಿ ಅಳವಡಿಸಬೇಕೆಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಎಲ್ಲಾ ಶಾಲೆಗಳ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ. ಅವರು ಸೋಮವಾರ ತಮ್ಮ ಕಛೇರಿಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ||ಶರಣಬಸಪ್ಪ ಅವರು ಮಾತನಾಡಿ ಎಲ್ಲಾ ಶಾಲಾ ಮಕ್ಕಳ ವಾಹನ ಚಾಲಕರು/ಕ್ಲೀನರ್‌ಗಳನ್ನು ಶಾಲಾ ಆಡಳಿತ ಮಂಡಳಿಯವರು ನೇಮಕ ಮಾಡಿಕೊಳ್ಳುವ ಮುನ್ನ ಅವರ ಪೂರ್ವಾಪರ ಮಾಹಿತಿಯನ್ನು ದಾಖಲೆ ಸಮೇತ ಸಂಗ್ರಹಿಸಬೇಕು, ಸಂಗ್ರಹಿಸಿದ ಮಾಹಿತಿಯನ್ನು ಹತ್ತಿರದ ಪೋಲೀಸ್ ಠಾಣೆಗೆ ಸಲ್ಲಿಸುವುದಲ್ಲದೆ ಅವರಿಂದ ಧೃಡೀಕರಣ ಪತ್ರ ಪಡೆಯಲು ಸೂಚಿಸಿದರು. ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಖಾಸಗಿ ಆಟೋಗಳನ್ನು, ವ್ಯಾನ್‌ಗಳನ್ನು ನೇಮಿಸಿಕೊಂಡಿದ್ದಲ್ಲಿ, ಅಂತಹ ವಾಹನ ಚಾಲಕರ ಬಗ್ಗೆ ಎಲ್ಲಾ ಮಾಹಿತಿಯನ್ನು ಸ್ಥಳೀಯ ಪೋಲಿಸ್ ಠಾಣೆಗೆ ನೀಡಬೇಕೆಂದು ಅವರು ಸೂಚಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ನರ್ಮ್ ಯೋಜನೆಯಡಿ 35 ಮಾರ್ಗಗಳಲ್ಲಿ ಬಸ್ಸು ಸಂಚಾರ ಆರಂಭಿಸಲು ಹೊಸದಾಗಿ ಪರವಾನಿಗೆ ನೀಡುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಿದ ನಂತರ ಅವರಿಗೆ ಹೊಸ ಮಾರ್ಗಗಳಲ್ಲಿ ಅಂದರೆ ಇಲ್ಲಿಯವರೆಗೆ ಯಾವ ಮಾರ್ಗಗಳಲ್ಲಿ ಬಸ್ಸು ಸಂಚಾರವಿಲ್ಲವೋ ಅಂತಹ ಮಾರ್ಗಗಳಲ್ಲಿ ವಾಹನಗಳನ್ನು ಓಡಿಸಲು ಹಾಗೂ ಈ ಬಗ್ಗೆ ಸಾರ್ವಜನಿಕರು ತಮಗೆ ಅವಶ್ಯಕತೆ ಇರುವ ಮಾರ್ಗಗಳ ಕೋರಿಕೆ ಅರ್ಜಿಗಳನ್ನು ಏಪ್ರಿಲ್ 09 ರೊಳಗೆ ಕೆ.ಎಸ್.ಆರ್.ಟಿ.ಸಿ. ಯವರಿಗೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ವಿಮಾನ ಯಾನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಜ್ಪೆ ವಿಮಾನ ನಿಲ್ದಾಣದಿಂದ ಕಾಸರಗೋಡಿಗೆ ಹೊಸದಾಗಿ ಬಸ್ಸು ಸಂಚಾರ ಆರಂಭಿಸಲು ಜಿಲ್ಲಾಧಿಕಾರಿಗಳು ಕೆ.ಎಸ್.ಆರ್.ಟಿ.ಸಿ. ಸಂಸ್ಥೆಗೆ ಸಲಹೆ ನೀಡಿದರು. ಒಂದಕ್ಕಿಂತ ಹೆಚ್ಚು ಆಟೋರಿಕ್ಷಾ ಪರವಾನಿಗೆ ಹೊಂದಿರುವವರು ಅವುಗಳನ್ನು ವರ್ಗಾವಣೆ ಮಾಡಲು ಅರ್ಜಿ ಸಲ್ಲಿಸಿದಲ್ಲಿ ಅಂತಹ ಪರವಾನಿಗೆಗಳಲ್ಲಿ ಒಂದನ್ನು ಮಾತ್ರ ಪರಿಗಣಿಸಿ ಉಳಿದದ್ದನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಫಜಲ್ ಹಮದ್ ಖಾನ್ ಮುಂತಾದವರು ಉಪಸ್ಥಿತರಿದ್ದರು.