ಮಂಗಳೂರು,ಮಾರ್ಚ್.31 : ನಗರದ 20 ಕಿ.ಮೀ ವ್ಯಾಪ್ತಿಯಲ್ಲಿ ನರ್ಮ್ ಯೋಜನೆಯಡಿ 35 ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಪರವಾನಗಿ ನೀಡುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ರೂಟ್‌ಗಳ ಬಗ್ಗೆ ಬೇಡಿಕೆ ಸಲ್ಲಿಸಲು ಏ.9 ಕೊನೆಯ ದಿನಾಂಕವಾಗಿದ್ದು, ಸಾರ್ವಜನಿಕರು ಕೆಎಸ್‌ಆರ್‌ಟಿಸಿ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿಗೆ ಲಿಖಿತ ಮನವಿ ಸಲ್ಲಿಸಬೇಕು. ಏ. 20ರಂದು ನಡೆಯುವ ಆರ್‌ಟಿಎ ಸಭೆಯಲ್ಲಿ ನರ್ಮ್ ಬಸ್‌ಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಅಗಿರುವ ಎ. ಬಿ. ಇಬ್ರಾಹಿಂ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಸಾರ್ವಜನಿಕರಿಗೆ ಗರಿಷ್ಠ ಸಾರಿಗೆ ಸೇವೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಎಸ್‌ಆರ್‌ಟಿಸಿ ಸಂಸ್ಥೆ ಅಗತ್ಯ ರೂಟ್‌ಗಳಿಗೆ ಬೇಡಿಕೆ ಸಲ್ಲಿಸಬೇಕು. ಇದಕ್ಕಾಗಿ ಸಾರ್ವಜನಿಕರಿಂದ, ಜನಪ್ರತಿನಿಗಳಿಂದ ಮಾಹಿತಿ ಪಡೆದುಕೊಂಡು, ಏ.14ರ ಒಳಗೆ ಪ್ರಸ್ತಾವನೆ ಸಿದ್ಧಪಡಿಸಿ, ಏಪ್ರಿಲ್ 15ಕ್ಕೆ ಆರ್‌ಟಿಎಗೆ ಸಲ್ಲಿಸಬೇಕು. ಏಪ್ರಿಲ್ 20ರಂದು ಮತ್ತೆ ಆರ್‌ಟಿಎ ಸಭೆ ನಡೆಸಿ, ಇದರ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸಾರ್ವಜನಿಕರ ಹಿತದಷ್ಟಿಯಿಂದ ಉತ್ತಮ ಸಾರಿಗೆ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಶೇ.80 ಹಾಗೂ ರಾಜ್ಯ ಸರಕಾರ ಶೇ.20ರ ಅನುಪಾತದಲ್ಲಿ ಹಣಕಾಸು ನೆರವು ಒದಗಿಸುತ್ತಿದೆ. ಮಂಗಳೂರು ಹೊರತುಪಡಿಸಿ ಇಡೀ ದೇಶದಲ್ಲಿ ಯೋಜನೆ ಅನುಷ್ಠಾನವಾಗಿದೆ. ಇತ್ತೀಚೆಗೆ ಉಡುಪಿಯಲ್ಲಿಯೂ ನರ್ಮ್ ಬಸ್‌ಗಳಿಗೆ ಪರವಾನಗಿ ನೀಡಲಾಯಿತು. ನಗರದ 20 ಕಿ.ಮೀ.ವ್ಯಾಪ್ತಿಯಲ್ಲಿ 35 ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಪರವಾನಗಿ ನೀಡಲು ಅವಕಾಶವಿದೆ. ಆರ್‌ಟಿಎ ಇದಕ್ಕೆ ಅನುಮತಿ ನೀಡಬೇಕು ಎಂದು ಕೆಎಸ್‌ಆರ್‌ಟಿಸಿ ಪರ ವಕೀಲರಾದ ರಾಜೇಶ್ ಶೆಟ್ಟಿ ಪ್ರಾಕಾರದ ಸಭೆಯಲ್ಲಿ ವಾದ ಮಂಡಿಸಿದರು.
ಸಾರ್ವಜನಿಕರ ಪರವಾಗಿ ಮಾತನಾಡಿದ ನಾಗರಿಕ ಹಿತರಕ್ಷಣಾ ವೇದಿಕೆಯ ಹನುಮಂತ ಕಾಮತ್, ಖಾಸಗಿ ಬಸ್ಸು ಮಾಲೀಕರು ಈಗಾಗಲೇ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದು, ನಾವು ಉತ್ತಮ ಸೇವೆ ನೀಡುತ್ತಿದ್ದು, ಮಂಗಳೂರಿನಲ್ಲಿ ನರ್ಮ್ ಬಸ್ಸುಗಳಿಗೆ ಅವಕಾಶ ಕಲ್ಪಿಸಬಾರದು ಎಂದು ಆಗ್ರಹಿಸಿದ್ದಾರೆ. ಖಾಸಗಿ ಬಸ್ಸಿನವರು ಉತ್ತಮ ಸೇವೆ ನೀಡುತ್ತಿರುವುದರಲ್ಲಿ ಸಾರ್ವಜನಿಕರ ಆಕ್ಷೇಪವಿಲ್ಲ. ಹಾಗಿದ್ದರೆ ಕೆಎಸ್‌ಆರ್‌ಟಿಸಿ ಬಸ್ಸುಗಳ ಜತೆ ಖಾಸಗಿಯವರು ಉತ್ತಮ ಪೈಪೋಟಿ ನೀಡಲು ಹಿಂದೇಟು ಹಾಕುವುದು ಏಕೆ ಎಂದು ಪ್ರಶ್ನಿಸಿದರು.
ಸಾರ್ವಜನಿಕರ ಹಿತದಷ್ಟಿಯಿಂದ ನರ್ಮ್ ಬಸ್ಸುಗಳಿಗೆ ನಗರದಲ್ಲಿ ಅವಕಾಶ ಕಲ್ಪಿಸಬೇಕು. ಸಾರ್ವಜನಿಕರಿಗೆ ಎಲ್ಲಿ ಬಸ್ ಬೇಕೋ ಅಲ್ಲಿಗೆ ಕೆಎಸ್‌ಆರ್‌ಟಿಸಿಯವರು ಬಸ್ ಸೌಲಭ್ಯ ಕಲ್ಪಿಸಬೇಕು. ಅದು ಬಿಟ್ಟು ಕೆಎಸ್‌ಆರ್‌ಟಿಸಿಯವರು ತಮಗೆ ಬೇಕಾದ ಸ್ಥಳಕ್ಕೆ ಬಸ್ ಹಾಕುವುದಕ್ಕೆ ಅವಕಾಶ ನೀಡಬಾರದು. ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಾಗಿರುವ ಬಜಾಲ್- ಪಕ್ಕಲಡ್ಕ, ಲ್ಯಾಂಡ್ ಲಿಂಕ್ಸ್ ಮೊದಲಾದ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳ ಅವಕಾಶ ಕಲ್ಪಿಸಬೇಕು ಎಂದು ಹನುಮಂತ ಕಾಮತ್ ಒತ್ತಾಯಿಸಿದರು.
ಇದಕ್ಕೆ ಪೂರಕವಾಗಿ ಮಾತನಾಡಿದ ಡಿವೆಎಫ್‌ಐನ ಇಮ್ತಿಯಾಜ್, ಸುರತ್ಕಲ್, ಕಾನ, ಕಷ್ಣಾಪುರ, ಸುರತ್ಕಲ್ ವಯಾ ಬಜಪೆ, ಮೊದಲಾದ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಹಾಕುವ ಮೂಲಕ ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಾರ್ವಜನಿಕರ ಮನವಿ, ಬಸ್ ಮಾಲೀಕರ ಪರ,ವಿರೋಧ, ಕೆಎಸ್‌ಆರ್‌ಟಿಸಿ ಪರ ವಿರೋಧ ಹೇಳಿಕೆಗಳನ್ನು ಆಲಿಸಿದ ಜಿಲ್ಲಾಕಾರಿ ಎ.ಬಿ. ಇಬ್ರಾಹಿಂ, ಏ. 20ರಂದು ಮತ್ತೆ ಸಭೆ ನಡೆಸಲು ತೀರ್ಮಾನಿಸಲಾಯಿತು. 35 ಬಸ್ಸುಗಳು ಕನಿಷ್ಠ 25 ರೂಟ್‌ಗಳಲ್ಲಿ ಸಂಚರಿಸುವ ವ್ಯವಸ್ಥೆ ಮಾಡಬೇಕು. ಈಗಾಗಲೇ ನಗರದಲ್ಲಿ ಕೆಎಸ್‌ಆರ್‌ಟಿಸಿಗೆ ನೀಡಲಾಗಿರುವ 28 ಬಸ್ಸುಗಳ ಪರವಾನಗಿಯ ಸ್ಥಿತಿಗತಿಯ ಬಗ್ಗೆಯೂ ಮುಂದಿನ ಸಭೆಗೆ ಮಾಹಿತಿ ನೀಡಬೇಕು ಎಂದರು ಸೂಚಿಸಿದರು.