ಕನ್ನಡ ವಾರ್ತೆಗಳು

ಏ. 2ರಿಂದ 26ರವರೆಗೆ ಐತಿಹಾಸಿಕ ಉಳ್ಳಾಲ ಉರೂಸ್

Pinterest LinkedIn Tumblr

ullalla_uroos_photo

ತೊಕ್ಕೊಟ್ಟು: ಖುತುಬುಝ್ಜಮಾನ್ ಹಝ್ರತ್ ಅಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ(ಖ.ಸಿ.) ತಂಙಳ್‌ರವರ 423ನೇ ವಾರ್ಷಿಕ ಮತ್ತು 20ನೇ ಪಂಚವಾರ್ಷಿಕ ಉರೂಸ್ ನೇರ್ಚೆ ಕಾರ್ಯಕ್ರಮ ಏ. 2ರಿಂದ 26ರವರೆಗೆ ನಾನಾ ಕಾರ್ಯಕ್ರಮಗಳೊಂದಿಗೆ ಉಳ್ಳಾಲ ದರ್ಗಾ ವಠಾರದಲ್ಲಿರುವ ತಾಜುಲ್ ಉಲಮಾ ವೇದಿಕೆಯಲ್ಲಿ ಜರುಗಲಿದೆ ಎಂದು ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್.ಹಂಝ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಏ. 2ರಂದು ಬೆಳಗ್ಗೆ 11 ಗಂಟೆಗೆ ನವೀಕೃತ ಮಸೀದಿ ಉದ್ಘಾಟನೆಯು ಉಳ್ಳಾಲ ಖಾಝಿ ಅಸ್ಸಯ್ಯದ್ ಪಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ನೇತೃತ್ವದಲ್ಲಿ ನಡೆಯಲಿದೆ. ಸಂಜೆ ನಾಲ್ಕು ಗಂಟೆಗೆ ದರ್ಗಾ ಝಿಯಾರತ್, ತಾಜುಲ್ ಉಲಮಾ ಅನುಸ್ಮರಣೆ, ತಹ್ಲೀಲ್ ಮತ್ತು ಖತಮುಲ್ ಕುರ್‌ಆನ್ ಸಮರ್ಪಣೆ ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮದಲ್ಲಿ ಸೆಯ್ಯಿದ್ ಆಟಕೋಯ ತಂಙಳ್ ದುವಾ ನೆರವೇರಿಸಲಿದ್ದಾರೆ. ಸಂಜೆ ಏಳು ಗಂಟೆಗೆ ಉರೂಸ್ ಕಾರ್ಯಕ್ರಮದ ಉದ್ಘಾಟನೆ ಮತ್ತು ತಾಜುಲ್ ಉಲಮಾ ಪ್ರಶಸ್ತಿ ಪ್ರದಾನ ಸಮಾರಂಭ ಉಳ್ಳಾಲ ಖಾಝಿ ಅಸ್ಸಯ್ಯದ್ ಪಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದರು.

ಅಸಯ್ಯಿದ್ ಉಮರುಲ್ ಫಾರೂಕ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಸಂದೇಶ ನೀಡಲಿದ್ದಾರೆ. ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಸಚಿವರಾದ ಬಿ.ರಮಾನಾಥ ರೈ, ಯು.ಟಿ. ಖಾದರ್ ಮುಖ್ಯ ಅತಿಥಿಗಳಾಗಿರುವರು. 3ರಂದು ನಡೆಯುವ ರಾಷ್ಟ್ರೀಯ ಸಮಗ್ರತಾ ಸಮಾವೇಶವನ್ನು ರಾಜ್ಯಪಾಲ ವಜುಭಾಯಿ ವಾಲಾ ಉದ್ಘಾಟಿಸಲಿದ್ದಾರೆ. 4ರಂದು ಎಲೈಟ್ ಮೀಟ್ (ದ.ಕ. ಜಿಲ್ಲಾ ಅಧಿಕಾರಿಗಳ ಸಭೆ), ನ್ಯಾಷನಲ್ ಸ್ಟೂಡೆಂಟ್ ಸಮ್ಮಿಟ್, 5ರಂದು ದ.ಕ. ಜಿಲ್ಲಾ ಜಮಾಅತ್ ಪ್ರತಿನಿಧಿ ಸಮಾವೇಶ, 7ರಂದು ಸುನ್ನಿ ಇಜ್ತಿಮಾ ಕಾರ್ಯಕ್ರಮ ನಡೆಯಲಿದೆ.

8ರಂದು ಸೆಯ್ಯಿದ್ ಮದನಿ ನ್ಯಾಷನಲ್ ಪೀಸ್ ಕಾನ್ಫರೆನ್ಸ್ ಮತ್ತು ಸಾಧಕರಿಗೆ ಸನ್ಮಾನ, 11ರಂದು ಅಂತಾರಾಜ್ಯ ಮಟ್ಟದ ಬುರ್ದಾ ಆಲಾಪನೆ ಸ್ಪರ್ಧೆ, 12ರಂದು ಸನದುದಾನ ಮಹಾ ಸಮ್ಮೇಳನ, 16ರಂದು ಮದನಿ ಸಂಗಮ, 18ರಂದು ಸಯ್ಯಿದ್ ಮದನಿ ದಅವಾ ಕಾಲೇಜು ವಿದ್ಯಾರ್ಥಿಗಳ ದುಅವಾ ಫೆಸ್ಟ್, ನ್ಯಾಷನಲ್ ದಅವಾ ಕಾನ್ಫರೆನ್ಸ್, 20ರಂದು ಸಾದಾತ್ ಸಂಗಮ, 22ರಂದು ಮುಅಲ್ಲಿಂ ಸಮಾವೇಶ ಮತ್ತು ಎಸ್.ಎಂ.ತಂಙಳ್ ಪ್ರಶಸ್ತಿ ಪ್ರದಾನ, 23ರಂದು ಧಾರ್ಮಿಕ ಸಮಾರಂಭ ನಡೆಯಲಿದೆ.

24ರಂದು ಸಂಜೆ 4.30ಕ್ಕೆ ನಡೆಯುವ ರಾಜಕೀಯ ಮತ್ತು ಸಾಮಾಜಿಕ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ದರ್ಗಾದ ಡಾಕ್ಯುಮೆಂಟರಿ ಸಿ.ಡಿ.ಯನ್ನು ಸಿ.ಎಂ. ಇಬ್ರಾಹಿಂ ಬಿಡುಗಡೆ ಮಾಡಲಿದ್ದಾರೆ. ಗಣ್ಯ ಜನಪ್ರತಿನಿಧಿಗಳಾದಡಿ.ವಿ. ಸದಾನಂದಗೌಡ, ಮಲ್ಲಿಕಾರ್ಜುನಖರ್ಗೆ, ನಳಿನ್ ಕುಮಾರ್ ಕಟೀಲ್, ಎಚ್.ಡಿ. ಕುಮಾರಸ್ವಾಮಿ, ಕೆ.ಆರ್. ಜಾರ್ಜ್, ರಮಾನಾಥ ರೈ, ಯು.ಟಿ. ಖಾದರ್, ವಿನಯ ಕುಮಾರ್ ಸೊರಕೆ, ಆರ್.ವಿ.ದೇಶಪಾಂಡೆ, ಖಮರುಲ್ ಇಸ್ಲಾಂ, ರೋಶನ್ ಬೇಗ್, ಅಂಬರೀಶ್, ಕೆ. ಅಭಯಚಂದ್ರ ಜೈನ್, ದಿನೇಶ್ ಗುಂಡುರಾವ್, ಜನಾರ್ದನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯಿಲಿ, ಎಸ್. ಅಂಗಾರ, ವಸಂತ ಬಂಗೇರ, ಮೊಯ್ದಿನ್ ಬಾವಾ, ಜೆ.ಆರ್.ಲೋಬೋ, ಐವನ್ ಡಿಸೋಜ, ಡಾ. ಮೊಹಮ್ಮದ್ ಯೂಸುಫ್, ಎ.ಎಸ್.ಜೀಲಾನಿ, ಎಂ.ಎಂ. ಅಹ್ಮದ್, ಇಬ್ರಾಹಿಂ ಕೋಡಿಜಾಲ್, ವೈ. ಅಬ್ದುಲ್ಲ ಕುಂಞಿ, ಎನ್.ಕೆ.ಎಂ. ಶಾಫಿ ಸಅದಿ ಸೇರಿದಂತೆ ಧಾರ್ಮಿಕ ಸಾಮಾಜಿಕ ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ.

ಏ.25ರಂದು ಸಂದಲ್ ಮೆರವಣಿಗೆ, ಬುರ್ದಾ ಮಜ್ಲಿಸ್ ನಡೆಯಲಿದ್ದು. ಎ.26ರಂದು ಅನ್ನದಾನ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ದರ್ಗಾ ಸಮಿತಿ ಉಪಾಧ್ಯಕ್ಷ ಅಶ್ರಪ್ ಅಹ್ಮದ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಯು.ಟಿ.ಇಲ್ಯಾಸ್,ಜೊತೆ ಕಾರ್ಯದರ್ಶಿ ಮಹಮ್ಮದ್ ಅಶ್ರಫ್, ಫಾರೂಕ್ ಮಾರ್ಗತ್ತಲೆ, ಮಹಮ್ಮದ್ ಹಾಜಿ ಹಾಗೂ ಆಡಿಟರ್ ಜೆ. ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.

Write A Comment