ಮಂಗಳೂರು, ಎ.4: ಕ್ರೈಸ್ತ ಬಾಂಧವರ ಪವಿತ್ರ ದಿನವಾದ ‘ಶುಭ ಶುಕ್ರವಾರ’ವನ್ನು ಶುಕ್ರವಾರ ಮಂಗಳೂರು ಧರ್ಮಪ್ರಾಂತದಲ್ಲಿ ಕ್ರೈಸ್ತರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಮನುಕುಲಕ್ಕೆ ಪ್ರೀತಿ ಹಾಗೂ ಶಾಂತಿಯ ಸಂದೇಶ ಸಾರಿದ ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ಸ್ಮರಣಾರ್ಥ ಆಚರಿಸಲಾಗುವ ಶುಭ ಶುಕ್ರವಾರದ ದಿನವಾದ ಇಂದು ನಗರದ ಪ್ರಮುಖ ಚರ್ಚ್‌ಗಳಲ್ಲಿ ಸಾಮೂಹಿಕ ಪೂಜೆ, ಪ್ರಾರ್ಥನೆ ಸಲ್ಲಿಸಿದ ಕ್ರೈಸ್ತರು ಲೋಕ ಕಲ್ಯಾಣಕ್ಕಾಗಿ ಯೇಸು ಅನುಭವಿಸಿದ ಕಷ್ಟದ ದಿನಗಳನ್ನು ನೆನಪಿಸಿಕೊಂಡರು.
ಮಂಗಳೂರು ಕೆಥೊಲಿಕ್ ಧರ್ಮಪ್ರಾಂತದ ಬಿಷಪ್ ರೆ.ಫಾ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ರವರು ರೊಜಾರಿಯೊ ಕೆಥೆಡ್ರಲ್‌ನಲ್ಲಿ ಮಧ್ಯಾಹ್ನ ವೇ ಆಫ್ ಕ್ರಾಸ್ ಕಾರ್ಯಕ್ರಮದಲ್ಲಿ ಮತ್ತು ಸಂಜೆ ವಿಶೇಷ ಪ್ರಾರ್ಥನಾ ವಿಧಿಗಳಿಗೆ ನೇತೃತ್ವ ನೀಡಿದರು.
ನಗರದ ಎಲ್ಲಾ ಚರ್ಚ್‌ಗಳಲ್ಲಿ ಇಂದು ವಿಶೇಷ ಪ್ರಾರ್ಥನೆ ಹಾಗೂ ಆರಾಧನೆ ಯೊಂದಿಗೆ ಕ್ರೈಸ್ತರು ಯೇಸು ಕ್ರಿಸ್ತನನ್ನು ಆರಾಧಿಸಿದರು. ನಗರದ ಪ್ರಮುಖ ಕ್ರೈಸ್ತ ಪ್ರಾರ್ಥನಾಲಯಗಳಲ್ಲಿ ಒಂದಾದ ಮಿಲಾಗ್ರಿಸ್ ಚರ್ಚ್‌ನಲ್ಲಿ ಬೆಳಗ್ಗಿನಿಂದಲೇ ಭಕ್ತರು ಪ್ರಾರ್ಥನೆ ನೆರವೇರಿಸಿ ಯೇಸು ಕ್ರಿಸ್ತ ಶಿಲುಬೆಗೇರಿದ ಸ್ಮರಣಾರ್ಥ ಶಿಲುಬೆಯನ್ನು ಹೊತ್ತ ಯೇಸುವಿನ ಪ್ರತಿಕೃತಿಯ ಮೆರವಣಿಗೆ ನಡೆಸಿದರು. ಅಪಾರ ಕ್ರೈಸ್ತರು ಭಾಗವಹಿಸುವ ಮೂಲಕ ಶುಭ ಶುಕ್ರವಾರ ಆಚರಣೆಗೆ ಸಾಕ್ಷಿಯಾದರು.