ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು,ಎ.06: ಶ್ರೀ ಮಂಗಳಾ ಗಣೇಶ ಕಂಬೈನ್ಸ್‌ರವರ ಬಿ. ಅಶೋಕ್ ಕುಮಾರ್ ಹಾಗೂ ಎ. ಗಂಗಾಧರ ಶೆಟ್ಟಿ ಅಳಕೆ ನಿರ್ಮಾಣದ ಹ.ಸೂ. ರಾಜಶೇಖರ್ ನಿರ್ದೇಶನದ ಬಹುನಿರೀಕ್ಷೆಯ “ಒರಿಯನ್ ತೂಂಡ ಒರಿಯಗಾಪುಜಿ” ತುಳುಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭ ರವಿವಾರ ಸಂಜೆ ಮಂಗಳೂರಿನ ನೆಹರೂ ಮೈದಾನಿನಲ್ಲಿ ಬಹಳ ಅದ್ದೂರಿಯಾಗಿ ನೆರವೇರಿತು.
ಸಂಸದ ನಳಿನ್ ಕುಮಾರ್ ಕಟೀಲ್ ಅವರು ಆಡಿಯೋ ಸಿಡಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ತುಳುಚಿತ್ರರಂಗದಲ್ಲಿ ಒಂದು ವರ್ಷಕ್ಕೆ ಒಂದೇರೆಡು ಸಿನೆಮಾಗಳು ಮಾತ್ರ ತೆರೆ ಕಾಣುವ ದಿನಗಳಿದ್ದವು. ಆದರೆ ಇಂದು ತುಳು ಚಿತ್ರರಂಗ ಬಹುದೊಡ್ಡ ಸಾಧನೆಯ ಹಂತದವರೆಗೆ ಬೆಳೆದು ನಿಂತಿದೆ. ವರ್ಷಕ್ಕೆ ಹಲವು ಯಶಸ್ವಿ ಚಿತ್ರಗಳು ತೆರೆಕಂಡು ಮೆಚ್ಚುಗೆ ಪಡೆಯುವಂತಾಗಿದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಸಕ ಜೆ.ಆರ್. ಲೋಬೋ ಅವರು ಮಾತನಾಡಿ, ತುಳುಚಿತ್ರರಂಗದಲ್ಲಿ ಪ್ರಸ್ತುತ ದಿನಗಳು ಅತ್ಯಂತ ಶೋಭಾಯಮಾನ ವಾತಾವರಣವನ್ನು ಹೊಂದಿದೆ ಎಂದರು. ಶಾಸಕ ಮ್ಯೊದಿನ್ ಬಾವ ಮಾತನಾಡಿ, ತುಳು ಚಿತ್ರದ ಈ ಹಿಂದಿನ ಒಂದೊಂದು ಸಾಧನೆಗಳು ಇಂದಿನ ಬೆಳವಣಿಗೆಗೆ ಆಧಾರಸ್ತಂಭವಾಗಿದೆ ಎಂದರು.
ಸಂಗೀತ ನಿರ್ದೇಶಕ ವಿ. ಮನೋಹರ್, ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ, ಮಾಜಿ ಉಪಮೇಯರ್ ಕವಿತಾವಾಸು, ಮನಪಾ ಸದಸ್ಯರಾದ ದಿವಾಕರ್, ಪ್ರೇಮಾನಂದ ಶೆಟ್ಟಿ, ಅಬ್ದುಲ್ ಲತೀಫ್, ರಾಜೇಂದ್ರ ಕುಮಾರ್, ಹಿರಿಯ ರಂಗಕರ್ಮಿ ಡಾ | ಸಂಜೀವ ದಂಡಕೇರಿ, ರಂಗ ಕಲಾವಿದ ವಿ.ಜಿ.ಪಾಲ್, ರಂಗ ನಟ,ನಿರ್ದೇಶಕ ದೇವದಾಸ್ ಕಾಪಿಕಾಡ್, ಚಿತ್ರ ನಟ ಹಾಗೂ ಕಿರುತೆರೆಯ ಹಾಸ್ಯ ನಟ ಮಿತ್ರ, ಚಿತ್ರ ನಟ ಕಾಸರಗೋಡು ಚಿನ್ನ, ರಂಗ ನಟ ಹಾಗೂ ಸಿನಿಮಾ ನಟ ಭೋಜರಾಜ್ ವಾಮಂಜೂರ್ ಮುಂತಾದವರು ಅತಿಥಿಗಳಾಗಿದ್ದರು.
ಚಿತ್ರದ ನಿರ್ಮಾಪಕರಾದ ಬಿ. ಅಶೋಕ್ ಕುಮಾರ್ ಹಾಗೂ ಎ. ಗಂಗಾಧರ ಶೆಟ್ಟಿ ಅಳಕೆ, ನಿರ್ದೇಶಕ ಹ.ಸೂ. ರಾಜಶೇಖರ್, ನಾಯಕ ನಟ ಅರ್ಜುನ್ ಕಾಪಿಕಾಡ್, ನಾಯಕಿ ಪ್ರಜ್ಯು ಪೂವಯ್ಯ ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಅಳಕೆ ಹಾಗೂ ಮಧು ಕಾರ್ಯಕ್ರಮ ನಿರೂಪಿಸಿದರು.
ಸಂಗೀತಾ, ನೃತ್ಯ – ವಿಶೇಷ ಆಕರ್ಷಣೆ
ಕಾರ್ಯಕ್ರಮದಲ್ಲಿ ವಿಶೇಷವಾಗಿ ಆಯೋಜಿಸಲಾದ ಸಂಗೀತಾ ರಸಮಂಜರಿ ಹಾಗೂ ವಿಶಿಷ್ಠ ನೃತ್ಯ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.