ಕೊಣಾಜೆ, ಎ.06 : ನೇತ್ರಾವತಿ ನದಿಯ ಇನೋಳಿ ತಟದಲ್ಲಿ ಇತ್ತೀಚೆಗೆ ಅಪಾರ ಪ್ರಮಾಣದಲ್ಲಿ ಕಪ್ಪೆಚಿಪ್ಪುಗಳು ಸಾವನ್ನಪ್ಪುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ ಮೀನುಗಾರಿಕಾ ಕಾಲೇಜು ಹಾಗೂ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಇನೋಳಿಗೆ ಪರೀಕ್ಷಾ ಉಪಕರಣಗಳೊಂದಿಗೆ .ರವಿವಾರ ಬಂದಿದ್ದ ತಂಡ ನೀರು ಹಾಗೂ ಮರಳು ಪರೀಕ್ಷೆ ನಡೆಸಿತು. ಈ ಸಂದರ್ಭ ನೀರಿನ ತಾಪಮಾನ 35-38 ಡಿಗ್ರಿ ಸೆಲ್ಸಿಯಸ್ ಇದ್ದರೆ, ಮರಳು ಕೂಡಾ ಅದೇ ತಾಪಮಾನ ತೋರಿಸಿತು.
ನೇತ್ರಾವತಿ ತಟ ಹಾಗೂ ನದಿಯಿಂದ ಅವ್ಯಾಹತವಾಗಿ ಮರಳು ತೆಗೆಯಲಾಗುತ್ತಿದ್ದು ಇದರಿಂದ ಕೆಸರು ಮಿಶ್ರಿತ ಮೆದುಮರಳು ನಾಶವಾಗಿ ದೊಡ್ಡ ಹರಳುಗಳ ಮರಳು ಮಾತ್ರವೇ ಉಳಿದಿವೆ. ಇದರಿಂದ ಮರುವಾಯಿಗಳಿಗೆ ಆಹಾರ ಸಿಗದೆ, ಮರಳಿನಡಿ ನುಸುಳಲೂ ಆಗದೆ ಅವು ಸಾವನ್ನಪ್ಪುತ್ತಿವೆ. ಅದಲ್ಲದೆ ಶಂಭೂರು ಹಾಗೂ ತುಂಬೆ ಅಣೆಕಟ್ಟಿನಿಂದಾಗಿ ಸಿಹಿ ನೀರು ಹರಿಯುವಿಕೆಯ ಪ್ರಮಾಣ ಕಡಿಮೆಯಾಗಿದೆ. ಇದರಿಂದ ನದಿಯಲ್ಲಿ ಉಪ್ಪಿ ನಾಂಶದ ಪ್ರಮಾಣ ಹೆಚ್ಚಾಗಿದೆ. ಜೊತೆಗೆ ಕಪ್ಪೆಚಿಪ್ಪಿಗೆ 28-32 ಡಿಗ್ರಿ ಸೆಲ್ಸಿಯಸ್ ತಾಪಮಾನ ಬೇಕಾಗುತ್ತದೆ. ಆದರೆ ಈ ವರ್ಷ ನೀರು ನಿಂತಲ್ಲೇ ಇರುತ್ತದೆ. ಇದರ ಪರಿಣಾಮದಿಂದಲೂ ಹೊಸ ಮರಳು ಸಂಗ್ರಹವಾಗುತ್ತಿಲ್ಲ, ಸಿಹಿ ನೀರು ಹರಿಯುತ್ತಿಲ್ಲ. ಇದರಿಂದಲೂ ಮರುವಾಯಿ ನಾಶವಾಗಿದೆ.
ಈ ಬಾರಿ ನದಿ ಜಾಲಾಡಿದರೂ ಒಂದು ಮರುವಾಯಿ ಸಿಗಲು ಸಾಧ್ಯವಿಲ್ಲ. ಹೀಗೆಯೇ ಮುಂದುವರಿದರೆ ಈ ಭಾಗದಲ್ಲಿ ಮುಂದೆಂದೂ ಮರುವಾಯಿಗಳು ಸಿಗದು ಎಂದು ಮೀನುಗಾರಿಕಾ ಕಾಲೇಜಿನ ಪ್ರಾಧ್ಯಾಪಕ ಡಾ.ಗಂಗಾಧರ ಗೌಡ ಮಾಹಿತಿ ನೀಡಿದರು. ಈ ಬಗ್ಗೆ ಪರೀಕ್ಷಿಸಿ ಸಂಬಂಧಪಟ್ಟ ಇಲಾಖೆಗೆ ವರದಿ ನೀಡಬಹುದೇ ಹೊರತು ಕ್ರಮ ಕೈಗೊಳ್ಳಲು ಮೀನುಗಾರಿಕಾ ಇಲಾಖೆಗೆ ಅಧಿಕಾರವಿಲ್ಲ. ಜಿಲ್ಲಾಧಿಕಾರಿ ಅಥವಾ ಸರಕಾರವೇ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯತ್ ಕೂಡಾ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಎಂ.ಡಿ.ಪ್ರಸಾದ್ ಹೇಳಿದರು.
ಹೇರಳವಾಗಿ ಸಿಗುತ್ತಿದ್ದ ಕಪ್ಪೆಚಿಪ್ಪುಈ ಬಾರಿ ಇನೋಳಿ ನೇತ್ರಾವತಿ ನದಿ ತಟ ದಲ್ಲಿ ಸಾವಿಗೀಡಾಗಿ ಕೊಳೆತು ಹೋಗಿದ್ದವು. ಈ ಹಿನ್ನೆಲೆಯಲ್ಲಿ ಮೀನುಗಾರಿಕಾ ಇಲಾಖೆಯ ಈ ತಂಡ ಭೇಟಿ ನೀಡಿದೆ. ಇದಕ್ಕೂ ಮೊದಲು ಜಿಪಂ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಶ್ಮಿತಾ ರಾವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀ ಲಿಸಿದರು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಬೀಫಾತಿಮಾ, ಉಪಾಧ್ಯಕ್ಷ ದುಗ್ಗಪ್ಪ ಪೂಜಾರಿ, ಸದಸ್ಯ ವಲೇರಿಯನ್ ಡಿಸೋಜ, ಕಾರ್ಯದರ್ಶಿ ಚಿತ್ರಾಕ್ಷಿ ಹಾಜರಿದ್ದರು.