ಸುರತ್ಕಲ್ : ತೋಕೂರು – ಪಾದೂರು ಐಎಸ್ಆರ್ಪಿಎಲ್ ಪೈಪ್ ಲೈನ್ ಬಗೆಗಿನ ಜನ ಜಾಗೃತಿ ಸಭೆಯು ಸೂರಿಂಜೆಯ ಕೋಟೆಯಲ್ಲಿ ಸೂರಿಂಜೆ ಪಂಚಾಯತ್ ಅಧ್ಯಕ್ಷ ವಿನೀತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿತು. ಸೂರಿಂಜೆ, ಪಂಜ, ಕೊಯ್ಕಡೆ ಮದ್ಯ ಗ್ರಾಮದ ಸಂತ್ರಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.
ಮಂಗಳೂರು ಪಾದೂರು ಕಚ್ಚ ತೈಲ ಸಾಗಾಣಿಕ ಕೊಳವೆ ಮಾರ್ಗ ಸಂತ್ರಸ್ಥರ ಹೋರಾಟ ಜನಜಗೃತಿ ಸಮಿತಿಯ ದ.ಕ. ಜಿಲ್ಲೆ ಇದರ ಕಾನೂನು ಸಲಹೆಗಾರ ಜಗದೀಶ್ ಪಿ. ಮತ್ತು ಬಾಳ ಪಂಚಾಯತ್ನ ಮಾಜಿ ಅಧ್ಯಕ್ಷ ಚಿತ್ತರಂಜನ್ ಭಂಡಾರಿ ಮಾಹಿತಿ ನೀಡಿದರು. ವಿನೀತ್ ಶೆಟ್ಟಿ ಮತ್ತು ಭೋಜ ಶೆಟ್ಟಿ ಸೂರಿಂಜೆ ಹೋರಾಟದ ಸ್ವರೂಪದ ಬಗ್ಗೆ ಮಾರ್ಗದರ್ಶನ ಮಾಡಿದರು.
ಪೈಪ್ ಲೈನ್ ಅಳವಡಿಕೆಯ ಬಗೆಗಿನ ತೊಂದರೆಗಳನ್ನು ಸಮಗ್ರವಾಗಿ ಸಭೆಯಲ್ಲಿ ಚರ್ಚಿಸಲಾಯಿತು . ಸರಕಾರವು ಕಾನೂನು ಬದ್ಧವಾಗಿ ಇಂದಿನ ಕೇಂದ್ರ ಸರಕಾರವು ಮಾಡಿದ ನೀತಿಗನುಸಾರವಾಗಿ ಭೂ ಸ್ವಾಧೀನ ಮಾಡಿಕೊಳ್ಳಲಿ. ಅದರ ಬದಲು ಜನರನ್ನು ವಂಚಿಸಿ ಬಲಾತ್ಕಾರವಾಗಿ ಭೂ ಸ್ವಾಧೀನ ಪಡಿಸಿಕೊಳ್ಳುವ ವಿರುದ್ಧ ಉಗ್ರ ಹೋರಾಟವನ್ನು ಮಾಡಲು ನಿರ್ಧರಿಸಲಾಯಿತು. ಸೂರಿಂಜೆ, ಪಂಜ, ಕೊಯ್ಕುಡೆ, ಮದ್ಯ ಗ್ರಾಮಗಳ ಪ್ರತಿನಿಧಿಗಳನ್ನೊಳಗೊಂಡ ಜನಜಾಗೃತಿ ಸಮಿತಿಯನ್ನು ಈ ಸಂದರ್ಭದಲ್ಲಿ ರಚಿಸಲಾಯಿತು.
ಮಾಹಿತಿ ಹಕ್ಕಿನ ಮೂಲಕ ಪೈಪ್ಲೈನ್ ಯೋಜನೆಯ ಮಾಹಿತಿಗಳನ್ನು ಪಡೆದು ಕಾನೂನು ಹೋರಾಟ ಮಾಡಲು ನಿರ್ಧರಿಸಲಾಯಿತು. ಸುರೇಶ್ ಪಂಜ, ರಜಾಕ್, ಪ್ರಕಾಶ್ ಶೆಟ್ಟಿ, ಜಗನ್ನಾಥ ಶೆಟ್ಟಿ, ತುಕಾರಾಮ ಶೆಟ್ಟಿ, ಜನಜಾಗೃತಿ ಸಮಿತಿಯ ಸಂಚಾಲಕ ವಿನಯ್ ಎಲ್ ಶೆಟ್ಟಿ ಉಪಸ್ಥಿತರಿದ್ದರು.