ಮಂಗಳೂರು/ ಹರಿದ್ವಾರ: ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ 90ನೇ ಜನ್ಮ ದಿನಾಚರಣೆಯ ಅಂಗವಾಗಿ ಸೋಮವಾರ ಪೂರ್ವಾಹ್ನ ಇಲ್ಲಿನ ವ್ಯಾಸಾಶ್ರಮದ ವ್ಯಾಸಮಂದಿರದ ಸನ್ನಿಧಿಯಲ್ಲಿ ವಿಶೇಷ ಸಂಭ್ರಮಾಚರಣೆ ನಡೆಯಿತು. ಸಂಸ್ಥಾನದ ಪ್ರಧಾನ ಶ್ರೀ ವ್ಯಾಸದೇವರಿಗೆ ಮುಂಜಾನೆ ಶ್ರೀ ಕಾಶೀಮಠದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ಪಂಚಾಮೃತ, ಪವಮಾನಾಭಿಷೇಕ ನಡೆಯಿತು. ಶ್ರೀಕಾಶೀಮಠಾಧೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಕಿರಿಯ ಶ್ರೀಗಳವರ ಉಪಸ್ಥಿತಿಯಲ್ಲಿ ಸಂಸ್ಥಾನದ ಪಟ್ಟದ ದೇವರುಗಳಿಗೆ ಮಹಾಪೂಜೆಯ ಮಹಾಮಂಗಲಾರತಿ ಬೆಳಗಿದರು.
ನವತಿ ನಮನ:
ಶ್ರೀಗಳವರ ನವತಿಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಹವನ, ಧಾರ್ಮಿಕ ವಿದಿವಿಧಾನಗಳಲ್ಲಿ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ನವತಿ ಹವನದ ಪೂರ್ಣಾಹುತಿಯನ್ನು ನೆರವೇರಿಸಿದರು. ಇದೇ ವೇಳೆಗೆ ವ್ಯಾಸ ಮಂದಿರದ ಒಳಾಂಗಣದಲ್ಲಿ ನೂತನ ರಜತ ಸಿಂಹಾನಸದಲ್ಲಿ ವಿರಾಜಮಾನರಾದ ಶ್ರೀ ಕಾಶೀ ಮಠಾಧೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರಿಗೆ ಅವರ ಪಟ್ಟ ಶಿಷ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು 90 ದೀಪಗಳ ನವತಿ ಆರತಿಯ ನವತಿ ಅರ್ಚನದ ಮೂಲಕ ಗುರುವಂದನೆ ನಡೆಸಿದ್ದು ಮಹೋತ್ಸವದ ಪ್ರಧಾನ ಆಕರ್ಷಣೆಯಾಗಿತ್ತು.
ಅಪರೂಪದ ಹೃದಯ ಸ್ಪರ್ಶಿ ಕ್ಷಣಗಳನ್ನು ಭಾವೊದ್ವೇಗದಿಂದ ಸಂಭ್ರಮಿಸಿದ ಸೇರಿದ್ದ ಭಾರೀ ಸಂಖ್ಯೆಯ ಶಿಷ್ಯ ವರ್ಗದಿಂದ ಜಯ ಘೋಷಗಳು ಮೊಳಗಿದವು.
ಈ ಸಂದರ್ಭದಲ್ಲಿ ಶ್ರೀಗಳವರು ತಮ್ಮ ಪಟ್ಟ ಶಿಷ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಗೆ ಹಾರಾರ್ಪಣೆ ಮಾಡಿ ಗೌರವಿಸಿದ್ದೂ ವಿಶೇಷವಾಗಿತ್ತು. ದೇಶ,ವಿದೇಶದ ಹೀಗೆ ವಿವಿದೆಡೆಗಳಿಂದ ವ್ಯಾಸ ಮಂದಿರದ ಆವರಣದಲ್ಲಿ ಸೇರಿದ್ದ ನಾಲ್ಕೂವರೆ ಸಾವಿರಕ್ಕೂ ಅಧಿಕ ಮಂದಿಯ ಶಿಷ್ಯವರ್ಗ ಶ್ರೀಗಳವರ ನವತಿ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಸಂಜೆ ಶ್ರೀಗಳವರಿಂದ ಪ್ರವಚನ, ಧಾರ್ಮಿಕ ಸಭೆ ನಡೆಯಿತು.
ಚಿತ್ರ: ಮಂಜು ನಿರೇಶ್ವಾಲ್ಯ