ಮಂಗಳೂರು, ಏ.7- ರಾಜ್ಯ ಸರ್ಕಾರದ ಧೋರಣೆಗೆ ಅಸಮಾಧಾನಗೊಂಡು ಗುರುವಾರದಿಂದ ಮುಷ್ಕರದಲ್ಲಿ ತೊಡಗಿರುವ ಮಂಗಳೂರಿನ ಮೀನುಗಾರರು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರ ಕಚೇರಿ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಭ ಮಾತನಾಡಿದ ಮುಖಂಡರು, ಯಾಂತ್ರೀಕೃತ ಮೀನುಗಾರಿಕೆ ಬೋಟ್‍ಗಳಿಗೆ ಡೀಸೆಲ್ ಮೇಲಿನ ಮಾರಾಟ ತೆರಿಗೆ ವಿನಾಯಿತಿಯನ್ನು ಮಾಲಕರ ಖಾತೆಗೆ ನೇರ ವರ್ಗಾವಣೆ ಮಾಡುವ ರಾಜ್ಯ ಬಜೆಟ್ ಘೋಷಣೆಯನ್ನು ವಿರೋಧಿಸಿದರಲ್ಲದೆ, ಹಳೆಯ ಪದ್ಧತಿಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು. ಈ ಹಿಂದೆ ತೆರಿಗೆ ಸಬ್ಸಿಡಿ ದರದಲ್ಲಿ ಡೀಸೆಲನ್ನು ನೀಡಲಾಗುತ್ತಿತ್ತು. ಆದರೆ ಇದೀಗ ಗರಿಷ್ಠ 9 ಸಾವಿರ ಲೀಟರ್ ಡೀಸೆಲನ್ನು ಪೂರ್ಣ ಹಣ ಪಾವತಿಸಿ ಖರೀದಿಸಬೇಕಾಗುತ್ತದೆ. ಬಳಿಕ ವಿನಾಯಿತಿ ಮೊತ್ತವನ್ನು ಮೀನುಗಾರಿಕೆ ಇಲಾಖೆಯ ಮೂಲಕ ಮಾಲಕರ ಖಾತೆಗೆ ಚೆಕ್ ಮೂಲಕ ಜಮೆ ಮಾಡಲಾಗುತ್ತದೆ. ಇದರಿಂದ ಮೀನುಗಾರರಿಗೆ ಅನ್ಯಾಯವಾಗುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.
ಸಚಿವ ಯು.ಟಿ. ಖಾದರ್, ಶಾಸಕರಾದ ಜೆ.ಆರ್. ಲೋಬೊ, ಬಿ.ಎ. ಮೊಯ್ದಿನ್ ಬಾವ, ಐವನ್ ಡಿಸೋಜ ಸ್ಥಳಕ್ಕೆ ಭೇಟಿ ನೀಡಿ ಮೀನುಗಾರರ ಮನವೊಲಿಸುವ ಪ್ರಯತ್ನ ಮಾಡಿದರು. ಅಲ್ಲದೆ ಈ ಬಗ್ಗೆ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು. ಮೀನುಗಾರರ ನಿಯೋಗವನ್ನು ಮುಖ್ಯಮಂತ್ರಿ ಬಳಿ ಕರೆದೊಯ್ಯಲು ಸಮಯ ನಿಗದಿ ಪಡಿಸಲಾಗುವುದು ಎಂಬ ಭರವಸೆ ನೀಡಿದರು.
ಸರಕಾರ ಆದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕು. ಈ ನಿರ್ಧಾರವನ್ನು ಸರಕಾರ ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಕರ್ನಾಟಕ ಪರ್ಸೀನ್ ಬೋಟ್ ಮೀನುಗಾರರ ಸಂಘ, ಕರ್ನಾಟಕ ಟ್ರಾಲ್ ಬೋಟ್ ಮೀನುಗಾರರ ಸಂಘ, ಗಿಲ್ ನೆಟ್ ಮೀನುಗಾರರ ಸಂಘ, ಒಣ ಮೀನು ವ್ಯಾಪಾರಿಗಳ ಸಂಘ. ಹಸಿ ಮೀನು ವ್ಯಾಪಾರಿಗಳ ಸಂಘಗಳ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್ ಕುಮಾರ್, ಮೀನುಗಾರ ಮುಖಂಡರಾದ ಮೋಹನ್ ಬೆಂಗ್ರೆ, ಶಶಿಕುಮಾರ್, ನವೀನ್ ಕರ್ಕೇರ, ಸೀತಾರಾಮ ಸುವರ್ಣ, ಇಬ್ರಾಹಿಂ, ಅನಿಲ್ ಕುಮಾರದ, ಅಬ್ದುಲ್ ರಹಿಮಾನ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.