ಉಳ್ಳಾಲ, ಎ.09 : ತುಂಬು ಗರ್ಭಿಣಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಬಾರೆದಡ್ಕ ಎಂಬಲ್ಲಿ ರಾತ್ರಿ ನಡೆದಿದೆ. ಮೃತರನ್ನು ತಮಿಳುನಾಡು ಮೂಲದ 9 ತಿಂಗಳ ತುಂಬು ಗರ್ಭಿಣಿ ಪ್ರಿಯಾ (21) ಎಂದು ಗುರುತಿಸಲಾಗಿದೆ.
ತಮಿಳುನಾಡು ಮೂಲದ ಕೂಲಿ ಕಾರ್ಮಿಕ ವಿಘ್ನೇಶ್(25) ಮತ್ತು ಪ್ರಿಯಾ ದಂಪತಿ ಕಳೆದ ಎರಡು ತಿಂಗಳಿನಿಂದ ಅಂಬ್ಲಮೊಗರು ಗ್ರಾಮದ ಬಾರೆದಡ್ಕದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಪ್ರಿಯಾ ಮಂಗಳವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಘಟನೆ ನಡೆದ ಸಂದರ್ಭ ಪತಿ ವಿಘ್ನೇಶ್ ಮನೆಯಲ್ಲಿದ್ದ ಎನ್ನಲಾಗಿದೆ. ಆತ್ಮಹತ್ಯೆಗೆ ಪತಿಯ ಮಾನಸಿಕ ಕಿರುಕುಳ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಪ್ರಿಯಾ ಮತ್ತು ವಿಘ್ನೇಶ್ ಹಲವು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದು, ತಮಿಳುನಾಡಿನ ಪೆರಿಯಲೂರು, ಪುದುಕೋಟೆ ಎಂಬಲ್ಲಿ ವಿವಾಹವಾಗಿ 2 ತಿಂಗಳಿನ ಹಿಂದಷ್ಟೇ ಮಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ಅಂಬ್ಲಮೊಗರುವಿನ ಸೆಲೂನ್ ಮಾಲಕನೊಬ್ಬನ ಶಿಫಾರಸಿನ ಮೇರೆಗೆ ಪಂಚಾಯತ್ ಮಾಜಿ ಸದಸ್ಯ ಕರುಣಾಕರ ಪೂಜಾರಿ ಬಾರೆದಡ್ಕದಲ್ಲಿ ಅವರಿಗೆ ಮನೆಯೊಂದನ್ನು ಬಾಡಿಗೆಗೆ ನೀಡಿದ್ದರು. ಎರಡು ತಿಂಗಳು ಕಳೆದರೂ ವಿಘ್ನೇಶ್ ಮನೆ ಬಾಡಿಗೆಯನ್ನು ನೀಡಿರಲಿಲ್ಲ ಎನ್ನಲಾಗಿದೆ. ಪ್ರಿಯಾ ಆತ್ಮಹತ್ಯೆಗೈದ ಕೊಠಡಿಯ ಇನ್ನೊಂದು ಪಾರ್ಶ್ವದಲ್ಲಿ ಸೀರೆಯೊಂದು ನೇತಾಡುತ್ತಿದ್ದು ವಿಘ್ನೇಶ್ ಜೊತೆಯಾಗಿ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ನಿರ್ಧರಿಸಿ ಪತ್ನಿಯ ಆತ್ಮಹತ್ಯೆ ಮಾಡಿಕೊಳ್ಳುವಂತೆ ಯಾಮಾರಿಸಿರಬೇಕೆಂದು ಸ್ಥಳೀಯರು ಶಂಕಿಸಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ವಿಘ್ನೇಶ್ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.