ಮಂಗಳೂರು,ಎ.09 : ಸೌದಿ ಅರೇಬಿಯಾದ ಜುಬೈಲ್ನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಕುದ್ರೋಳಿ ನಿವಾಸಿ ಮುಹಮದ್ ತಂಶೀರ್(ತಂಝೀಂ ಕುದ್ರೋಳಿ) ಅವರಿಗೆ ತನ್ನ ಸಾವಿನ ಸುಳಿವು ಸಿಕ್ಕಿತ್ತೆ? ಇಂಥದೊಂದು ಚರ್ಚೆಯನ್ನು ಅವರು ತನ್ನ ಸಾವಿನ ಕೆಲವೇ ಹೊತ್ತಿನ ಮೊದಲು ಕಳುಹಿಸಿದ ವಾಟ್ಸ್ಯಾಪ್ ಸಂದೇಶ ಅವರ ಸ್ನೇಹಿತರ ಬಳಗದಲ್ಲಿ ಹುಟ್ಟು ಹಾಕಿದೆ.
ವಾಟ್ಸ್ಯಾಪ್ ಸಂದೇಶದಲ್ಲಿ ಏನಿದೆ?
ಯಾ ಅಲ್ಲಾ ಮುಝ್ಪರ್ ರೆಹೆಂ ಕರ್, ಮೇರೆ ಗುನಾವೊಂ ಕೊಂ ಮಾಫ್ ಕರ್, ಪ್ಲೀಸ್, ಪ್ಲೀಸ್, ಪ್ಲೀಸ್ ಅಕ್ಸೆಪ್ಟ್ ಮೈ ದುವಾ.. ( ಓ ದೇವರೇ ನನ್ನ ಮೇಲೆ ಕರುಣೆ ತೋರಿಸು, ನನ್ನ ಪಾಪಗಳನ್ನು ಕ್ಷಮಿಸು, ದಯವಿಟ್ಟು, ದಯವಿಟ್ಟು, ದಯವಿಟ್ಟು ನನ್ನ ಪ್ರಾರ್ಥನೆ ಸ್ವೀಕರಿಸು…..)
ಮಧ್ಯಾಹ್ನ 2.26ಕ್ಕೆ ಅವರು ಗೆಳೆಯರಿಗೆ ಈ ವಾಟ್ಯಾಪ್ ಸಂದೇಶ ಕಳುಹಿಸಿದ್ದಾರೆ. ಸಂಜೆ 3.30ಗೆ ಟ್ರಾಫಿಕ್ ಸಿಗ್ನಲ್ ಜಂಕ್ಷನ್ನಲ್ಲಿ ನಿಂತಿದ್ದ ಅವರಿಗೆ ಕಾರೊಂದು ಗುದ್ದಿ, ಗಂಭೀರ ಗಾಯಗೊಂಡು ಇಹಲೋಕ ತ್ಯಜಿಸಿದ್ದಾರೆ. ಸಾಯುವ ಕೆಲವೇ ಹೊತ್ತಿನ ಮುಂಚೆ ಈ ಯುವಕ ತನ್ನ ಪಾಪಗಳಿಗೆ ಅಲ್ಲಾಹುವಿನಲ್ಲಿ ಕ್ಷಮೆ ಕೋರುವ ಸಂದೇಶಗಳನ್ನು ಕಳುಹಿಸಿದ್ದು ಅಪರೂಪದ ಸಂಗತಿಯಾಗಿ ಗಮನ ಸೆಳೆದಿದೆ. ಯಾರೋ ತನಗೆ ಕಳುಹಿಸಿದ ಸಂದೇಶವನ್ನು ತಂಶೀರ್ ಫಾರ್ವರ್ಡ್ ಮಾಡಿರಬಹುದಾದರೂ ಅದು ಕಳುಹಿಸಿರುವ ಸಮಯ ಅವರ ಸಾವಿಗೆ ಅತಿ ಹತ್ತಿರದಲ್ಲಿರುವುದೇ ಎಲ್ಲರಿಗೂ ಅಚ್ಚರಿ ಮೂಡಿಸಿರುವ ಸಂಗತಿ.
ನಗರದಲ್ಲಿ ವಿದ್ಯಾಭ್ಯಾಸ ಪೂರೈಸಿದ ಬಳಿಕ ತಂಶೀರ್ ಸೌದಿಯಲ್ಲಿ ಕಳೆದ ಏಳು ವರ್ಷಗಳಿಂದ ಡಿಎಚ್ಎಲ್ ಸಂಸ್ಥೆಯಲ್ಲಿ ವೃತ್ತಿ ನಿರತರಾಗಿದ್ದರು. ಅವರಿಗೆ ಮನೆ ಮಂದಿ ಮುಂದಿನ ಮೂರು ತಿಂಗಳಲ್ಲಿ ವಿವಾಹಕ್ಕಾಗಿ ತಯಾರಿ ನಡೆಸಿದ್ದರು. ತಂಶೀರ್ ದೇಹವನ್ನು ಸೌದಿಯಲ್ಲಿಯೇ ದಫನ ನಡೆಸಲು ಸೌದಿಯಲ್ಲೇ ಇರುವ ಅವರ ಇಬ್ಬರು ಸಹೋದರರು ಮತ್ತು ಕುಟುಂಬ ತೀರ್ಮಾನಿಸಿದೆ. ಮೃತ ದೇಹವನ್ನು ಭಾರತಕ್ಕೆ ತರಲು ಹಲವು ದಿನಗಳು ತಗುಲಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಸೌದಿಯಲ್ಲೇ ತಂಶೀರ್ ದೇಹಕ್ಕೆ ಅಂತಿಮ ವಿದಾಯ ಹೇಳುವ ಸಾಧ್ಯತೆಗಳು ಹೆಚ್ಚಾಗಿವೆ.
ಕುದ್ರೋಳಿಯ ದಿ. ಹಸನಬ್ಬ ಮತ್ತ ಮರಿಯಮ್ಮ ದಂಪತಿಯ ಒಂಬತ್ತು ಮಕ್ಕಳಲ್ಲಿ ಏಳನೆಯವರಾದ ತಂಶೀರ್ ಸೌಮ್ಯ ನಡವಳಿಕೆಯ ಸಜ್ಜನ ಎಂದು ಸ್ನೇಹಿತರ ಬಳಗದಲ್ಲಿ ಪ್ರೀತಿ- ವಿಶ್ವಾಸ ಗಳಿಸಿದ್ದರು. ದಾರುನ್ನೂರ್ ದಮ್ಮಾಮ್ ಸಮಿತಿ ಸದಸ್ಯರಾಗಿ ಸಾಮಾಜಿಕ ಸೇವೆಯಲ್ಲೂ ಮುಂಚೂಣಿಯಲ್ಲಿದ್ದರು. ತನ್ಸೀರ್ ಅಮ್ಮ ಮರಿಯಮ್ಮ ಹಿರಿ ಮಗಳೊಂದಿಗೆ ಉಳ್ಳಾಲದಲ್ಲಿದ್ದು, ತನ್ನ ಇನ್ನೋರ್ವ ಮಗನಿಗೆ ಕಿಡ್ನಿ ದಾನ ಮಾಡಿದ್ದಾರೆ. ಅವರ ಆರೋಗ್ಯವೂ ಸುಸ್ಥಿತಿಯಲ್ಲಿ ಇಲ್ಲ. ಇಳಿ ವಯಸ್ಸಿನಲ್ಲಿ ಮಗ ತಂಶೀರ್(30) ಸಾವು ಅವರನ್ನು ಕಂಗೆಡಿಸಿದೆ.