ಕನ್ನಡ ವಾರ್ತೆಗಳು

ಹೊನ್ನಕಟ್ಟೆಯಲ್ಲಿ ಸಂಚಾರ ಸುಗಮಗೊಳಿಸಲು ಹೋಗಿ ಅಂಗಡಿಗೆ ನುಗ್ಗಿದ ಬಸ್.

Pinterest LinkedIn Tumblr

surtkal_bus_acdent_1

ಸುರತ್ಕಲ್.ಎ.09:  ಸುರತ್ಕಲ್ ಹೊನ್ನಕಟ್ಟೆ ಜಂಕ್ಷನ್ ಬಳಿ ಗುರುವಾರ ಮಧ್ಯಾಹ್ನ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಅಂಗಡಿಗೆ ನುಗ್ಗಿರುವ ಘಟನೆ ವರದಿಯಾಗಿದೆ.

ಘಟನೆಯ ವಿವರ :
ಕಾಟಿಪಳ್ಳದಲ್ಲಿ ನಡೆಯಲಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸಚಿವರ ವಾಹನವು ಬೆಂಗಾವಲು ವಾಹನ ಸಹಿತ ಕುಳಾಯಿ ಸಮೀಪ ಹೆದ್ದಾರಿಯಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಟ್ರಾಫಿಕ್‌ ಕ್ಲಿಯರೆನ್ಸ್‌ ಗಾಗಿ ಸ್ಥಳದಲ್ಲಿ ಕರ್ತವ್ಯ ನಿರತರಾಗಿದ್ದ ಪೊಲೀಸ್‌ ಒಬ್ಬರು ಉಡುಪಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಎಕ್ಸ್‌ಪ್ರೆಸ್‌ ಬಸ್ಸಿಗೆ ಹಠಾತ್‌ ನಿಲುಗಡೆ ಸೂಚನೆ ನೀಡಿದರು. ಇದರಿಂದ ತಬ್ಬಿಬ್ಟಾದ ಚಾಲಕ ತಕ್ಷಣವೇ ಬಸ್ಸನ್ನು ನಿಯಂತ್ರಣಕ್ಕೆ ತರುವ ಪ್ರಯತ್ನದಲ್ಲಿದ್ದಾಗ ಚಾಲಕನ ನಿಯಂತ್ರಣಕ್ಕೆ ಸಿಗದೇ ಬಸ್ಸು ಮೊದಲಿಗೆ ಕಾರಿಗೆ ಢಿಕ್ಕಿ ಹೊಡೆದು ಬಳಿಕ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟರ್‌ ಗೆ ಢಿಕ್ಕಿ ಹೊಡೆಯಿತು. ನಂತರದಲ್ಲಿ ಅಲ್ಲೇ ಪಕ್ಕದಲ್ಲಿದ್ದ ಅಂಗಡಿ ಆವರಣದೊಳಗೆ ನುಗ್ಗಿತು.

surtkal_bus_acdent_2surtkal_bus_acdent_3

ವೇಗವಾಗಿ ಸಾಗಿಬರುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ಕಳೆದುಕೊಂಡರೂ ಸಕಾಲದಲ್ಲಿ ಸಮಯಪ್ರಜ್ಞೆ ಮೆರೆದ ಬಸ್ಸಿನ ಚಾಲಕ ಸಂಭಾವ್ಯ ಭಾರೀ ಅನಾಹುತವೊಂದನ್ನು ತಪ್ಪಿಸಿದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯ ಕಾರಣದಿಂದ ಬಸ್ಸಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬಸ್ಸನ್ನು ಬಳಿಕ ಕ್ರೇನ್‌ ಮೂಲಕ ಪಕ್ಕಕ್ಕೆ ಸರಿಸಿ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಅನೇಕ ಸಂದರ್ಭಗಳಲ್ಲಿ ಸಚಿವರ ಕಾರುಗಳು ಸಾಗಿ ಬರುವ ದಾರಿಯನ್ನು ಬಹಳಷ್ಟು ಮೊದಲೇ ತೆರವುಗೊಳಿಸುವ ಪೊಲೀಸರು ಇಲ್ಲಿ ಮಾತ್ರ ಸಚಿವರ ಕಾರು ಸಾಗಿ ಬರುತ್ತಿರುವುದನ್ನು ಕಂಡ ಬಳಿಕ ವಾಹನ ನಿಲುಗಡೆಗೆ ಯತ್ನಿಸುವ ಮೂಲಕ ಹೆದ್ದಾರಿಯಲ್ಲಿ ಕೆಲ ಕಾಲ ಗೊಂದಲ ಉಂಟಾಗುವಂತೆ ಮಾಡಿದರು.

Write A Comment