ಕುಂದಾಪುರ: ಥಾಣೆಯಿಂದ ಕುಂದಾಪುರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಬ್ಯಾಗ್‌ನ್ನು ಹರಿದು ಲಕ್ಷಾಂತರ ರೂ. ಚಿನ್ನಾಭರಣ ಹಾಗೂ ನಗದನ್ನು ಅಪಹರಿಸಲಾಗಿದೆ ಎಂದು ಆಜ್ರಿ ಗ್ರಾಮದ ಹೊಸಬಾಳು ನಿವಾಸಿ ಶೈಲಜಾ ಅವರು ಶಂಕರನಾರಾಯಣ ಠಾಣೆಗೆ ದೂರು ನೀಡಿದ್ದಾರೆ.
ಎ. 9ರಂದು ಮಧ್ಯಾಹ್ನ ಥಾಣೆದಿಂದ ಮತ್ಸಗಂಧ ರೈಲಿನಲ್ಲಿ ಮಕ್ಕಳೊಂದಿಗೆ ಕುಂದಾಪುರಕ್ಕೆ ಪ್ರಯಾಣ ಮಾಡಿದ್ದು, ಎ. 10ರಂದು ಬೆಳಗ್ಗೆ 6.30ಕ್ಕೆ ಕುಂದಾಪುರ ಮೂಡ್ಲಕಟ್ಟೆ ರೈಲ್ವೆ ಸ್ಟೇಶನ್‌ಗೆ ಬಂದು ಇಳಿದು, ಅನಂತರ ಅಲ್ಲಿಂದ ಮನೆಗೆ ಹೋಗಿ ರಾತ್ರಿ ಮನೆಯಲ್ಲಿ ಬ್ಯಾಗ್‌ನಿಂದ ಬಟ್ಟೆ ಹಾಗೂ ಚಿನ್ನದ ಆಭರಣ ತೆಗೆಯಲು ನೋಡಿದಾಗ, ಬ್ಯಾಗಿನ ಜೀಪ್‌ನಿಂದ ಸ್ವಲ್ಪ ಮೇಲ್ಗಡೆ ಯಾವುದೋ ಹರಿತವಾದ ವಸ್ತುವಿನಿಂದ ಬ್ಯಾಗ್ ಕತ್ತರಿಸಿ, ಬ್ಯಾಗಿನ ಒಳಗಡೆ ನಗದು ಹಣ ಚಿನ್ನಾಭರಣಗಳನ್ನು ಕಳವು ಮಾಡಿದ ಬಗ್ಗೆ ತಿಳಿದು ಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎರಡು ಪರ್ಸ್‌ನಲ್ಲಿರುವ ಚಿನ್ನದ ಆಭರಣಗಳಿರುವ ಬಾಕ್ಸ್‌ನಲ್ಲಿ ಇದ್ದ ಕರಿಮಣಿ ಸರ, ನಾಲ್ಕು ಬಳೆ, ನೆಕ್ಲೇಸ್, ಹವಳ ಸರ, ಮಕ್ಕಳ ಚಿನ್ನದ ಚೈನ್, ಮೂರು ಜತೆ ಕಿವಿಯ ಓಲೆ, ಮೂರು ಉಂಗುರ, ಮೂಗಿನ ನತ್ತು, ಎರಡು ಸಣ್ಣ ಚಿನ್ನದ ನಳಿನ ಪಕ್ಕ ಒಟ್ಟು ಅಂದಾಜು ಸುಮಾರು 22 ಪವನ್ ತೂಕದ, ಒಟ್ಟು ಸುಮಾರು 3 ಲಕ್ಷ ರೂ. ಚಿನ್ನಾಭರಣ ಹಾಗೂ 7 ಸಾವಿರ ನಗದನ್ನು ಯಾರೋ ಕಳವು ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ.