ಜಗತ್ತಿನ ಎಲ್ಲ ದೇಶಗಳಲ್ಲೂ ಬಹಳ ಜನಪ್ರಿಯವಾಗಿರುವ ಒಂದು ಆಯುರ್ವೇದದ ಚಿಕಿತ್ಸೆಯೆಂದರೆ ಅಭ್ಯಂಗ (ಮಸಾಜ್). ಇತ್ತೀಚಿಗೆ ಈ ಚಿಕಿತ್ಸಾ ಪದ್ಧತಿ ಹೆಚ್ಚು ಗಮನ ಸೆಳೆಯುತ್ತಿದೆ. ಗಲ್ಲಿಗಲ್ಲಿಗೊಂದು ಮಸಾಜ್ ಸೆಂಟರ್ ಹುಟ್ಟುತ್ತಿದೆ. ಹೀಗಾಗಿ, ಈ ಚಿಕಿತ್ಸೆ ಬಗ್ಗೆ ಚೆನ್ನಾಗಿ ಮಾಹಿತಿಯಿದ್ದಲ್ಲಿ ಒಳಿತು.
ದೇಹದ ಮೇಲೆ ಕೈಗಳಿಂದ (ಕಾಲು, ಬೆರಳುಗಳು, ಮುಂಗೈ, ಮೊಣಕಾಲು ಅಥವಾ ಮಸಾಜರ್ ಯಂತ್ರಗಳಿಂದಲೂ ಮಸಾಜ್ ಮಾಡಬಹುದು) ನಿಯಮಿತ ಹಾಗೂ ನಿರ್ದಿಷ್ಟ ಒತ್ತಡವನ್ನು ಬಳಸಿ ಮಾಂಸಪೇಶಿಗಳನ್ನು ಹದವಾಗಿ ಉಜ್ಜುವುದೇ ಮಸಾಜ್. ಇದಕ್ಕೆ ಮೂಲತ: ಎಣ್ಣೆಯನ್ನು ಬಳಸುತ್ತಾರೆ. ಈಗೀಗ ಕ್ರೀಮ್‌ಗಳನ್ನೂ ಉಪಯೋಗಿಸುತ್ತಾರೆ. ಇನ್ನು ಶುಷ್ಕವಾಗಿ ಅಥವಾ ಕೆಲವು ಚಿಕಿತ್ಸೆಯಲ್ಲಿ ಚೂರ್ಣರೂಪದ ಔಷಧಿಗಳನ್ನು ಬಳಸುತ್ತಾರೆ. ಅದಕ್ಕೆ ಆಯುರ್ವೇದದಲ್ಲಿ ‘ಉದ್ವರ್ತನ’ ಎನ್ನುತ್ತಾರೆ.
ಮಸಾಜ್‌ನಲ್ಲಿ ತಟ್ಟುವುದು (ಟ್ಯಾಪಿಂಗ್), ಹಿಸುಕುವುದು (ನೀಡಿಂಗ್), ಉಜ್ಜುವುದು (ರಬ್ಬಿಂಗ್), ಹಿಂಡುವುದು (ಸ್ಕ್ವೀಜಿಂಗ್), ಕಂಪಿಸುವುದು (ವೈಬ್ರೇಶನ್) ಮುಂತಾಗಿ ಅನೇಕ ವಿಧಗಳಿವೆ. ಅಲ್ಲದೇ ಆಯುರ್ವೇದೀಯ, ಕೈರಳೀ, ಸ್ವೀಡಿಶ್, ಥಾಯ್ ಇತ್ಯಾದಿ ಬಗೆಗಳು. ಆದರೂ ಇವುಗಳ ಮೂಲ ಉದ್ದೇಶ ಒಂದೇ. ವಿಧವಿಧ ಸ್ಪರ್ಶ ಸಂವಹನದಿಂದ ದೇಹದ ಸ್ನಾಯುಗಳೂ, ಮಾಂಸಖಂಡಗಳ ನೋವು ನಿವಾರಣೆ, ಚೈತ್ಯನ್ಯ ಹಾಗೂ ಉಲ್ಲಾಸವನ್ನು ನೀಡುವುದು. ಆಯುರ್ವೇದದಲ್ಲಿ ದಿನಚರ್ಯೆ ಮತ್ತು ಋತುಚರ್ಯೆಯನ್ನು ವಿವರಿಸುವಾಗ ದಿನವೂ ಎಣ್ಣೆಸ್ನಾನ ಒಳ್ಳೆಯದೆನ್ನಲಾಗಿದೆ.
ಮಸಾಜ್‌ನಿಂದ ಹಲವು ಉಪಯೋಗಗಳಿವೆ. ಆದರೆ ಎಲ್ಲ ರೋಗಗಳಿಗೆ ರಾಮ ಬಾಣವಲ್ಲ. ಮುಖ್ಯವಾಗಿ ನೋವುನಿವಾರಣೆಗಾಗಿ, ಚೇತೋಹಾರಿಯಾಗಿ, ಮಾಂಸಪೇಶಿಗಳ ಬಲವರ್ಧನೆಗಾಗಿ, ಮನೋಲ್ಲಾಸಕ್ಕಾಗಿ ಉಪಯುಕ್ತ. ಇದನ್ನು ವೈದ್ಯಕೀಯ ಚಿಕಿತ್ಸೆಗೆ ಪೂರಕವಾಗಿ ಬಳಸಬಹುದು. ಉತ್ತಮವಾಗಿ ಅಭ್ಯಂಗ ಮಾಡಿಸಿಕೊಂಡಲ್ಲಿ ದೇಹ ಹಗುರಾಗಿ ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ. ಲವಲವಿಕೆ ಹೆಚ್ಚುತ್ತದೆ.
ಆಯುರ್ವೇದದ ಪ್ರಕಾರ ದೇಹದಲ್ಲಿರುವ 107 ಮರ್ಮಗಳನ್ನು ಉತ್ತೇಜಿಸಿ ಆರೋಗ್ಯವನ್ನು ಕಾಪಾಡುವುದರಲ್ಲಿ ಈ ಅಭ್ಯಂಗ ಸಹಕಾರಿ. ಇದನ್ನು ನಿಯಮಿತವಾಗಿ ಮಾಡಿಸಿಕೊಂಡಲ್ಲಿ ಇದು ಪ್ರಯೋಜನಕಾರಿ. ಚರ್ಮದ ಶುಷ್ಕತೆಯನ್ನು ಹೋಗಲಾಡಿಸಿ ಮೃದುತ್ವವನ್ನು ತಂದುಕೊಡುತ್ತದೆ. ರಕ್ತಸಂಚಲನೆ ಚುರುಕುಗೊಳ್ಳುತ್ತದೆ. ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಸಾಧ್ಯ.
ಇದರಿಂದ ಸುಕ್ಕುಗಟ್ಟುವುದು, ಮುದಿತನವನ್ನು ಸ್ವಲ್ಪ ಮುಂದೂಡಬಹುದು. ಇದಕ್ಕೆ ವಿಶೇಷ ತೈಲಗಳನ್ನೂ ಹೇಳಲಾಗಿದೆ. ಚರ್ಮದ ರಚನೆ, ಋತುಮಾನ, ಮಾಂಸಪೇಶಿಯ ಬಲ ಮುಂತಾದುವುಗಳಿಗೆ ತಕ್ಕಂತೆ ತೈಲಗಳನ್ನು ಬಳಸಬಹುದು. ಉದಾ: ಏಲಾದಿ, ಬಲಾಶ್ವಗಂಧಾದಿ, ನಾರಾಯಣ ತೈಲ ಇತ್ಯಾದಿ. ಅಲ್ಲದೇ ಬಾದಾಮಿ ಎಣ್ಣೆ, ಆಲಿವ್ ಎಣ್ಣೆ ಕೂಡ ಉತ್ತಮ. ವಾತಜನ್ಯ ನರಸಂಬಂಧಿ ತೊಂದರೆಗಳಿಗೂ ಅಭ್ಯಂಗ ಉತ್ತಮ.
ಅಲ್ಲದೇ ಸ್ಪರ್ಶವು ಕೂಡಾ ಗಮನೀಯ ಪರಿಣಾಮವನ್ನು ಹೊಂದಿದೆ. ಹಿಂದೆ ಮನೆಮನೆಗಳಲ್ಲಿ ಎಣ್ಣೆಸ್ನಾನ ಪ್ರಚಲಿತವಾಗಿತ್ತು. ಈಗ ಪೂರ್ಣವಾಗಿ ಕಣ್ಮರೆಯಾಗಿರುತ್ತಿರುವುದೂ ನಿಜ. ಒಂದು ಸಂಶೋಧನೆಯ ಪ್ರಕಾರ ನಿಯಮಿತವಾಗಿ ಅಭ್ಯಂಜನ ಮಾಡಿಸಿಕೊಂಡ ಮಕ್ಕಳಲ್ಲಿ ಹೆಚ್ಚಿನ ವ್ಯಾಧಿಕ್ಷಮತ್ವ ಕಂಡಿದೆ. ಅಲ್ಲದೇ ಅವರು ಚೆನ್ನಾಗಿ ನಿದ್ರಿಸಿ, ಉಲ್ಲಸಿತರಾಗಿರುವುದು ಕಂಡು ಬಂದಿದೆ.
ಕೆಲವು ಸಂಶೋಧನಗಳ ಪ್ರಕಾರ ನಿಯಮಿತವಾಗಿ (ವಾರಕ್ಕೆರಡು ಬಾರಿ) ಮಸಾಜ್ ಮಾಡಿಸಿಕೊಂಡವರಲ್ಲಿ ಐದು ವಾರದ ನಂತರ ಮಾನಸಿಕ ಒತ್ತಡಕ್ಕೆ ಕಾರಣವಾದ ಕಾರ್ಟಿಸಾಲ್ ಮತ್ತು ನಾರೆಪಿನೆಫ್ರೈನ್ ಹಾರ್ಮೋನುಗಳು ಕಡಿಮೆಯಾಗಿದ್ದು, ಮನಸ್ಸಿನ ಉಲ್ಲಾಸಕ್ಕೆ ಹಾಗೂ ಶಾಂತತೆಗೆ ಕಾರಣವಾಗುವ ಡೋಪಮಿನ್ ಮತ್ತು ಸೆರೊಟೊನಿನ್ ಅಂಶಗಳು ಹೆಚ್ಚಾಗಿರುವುದು ಕಂಡುಬಂದಿದೆ. ತಜ್ಞರ ಸಲಹೆಯಡಿ ಗರ್ಭಿಣಿಯರೂ ಮಸಾಜ್ ಮಾಡಿಸಿಕೊಳ್ಳಬಹುದು. ಇದರಿಂದ ಬೆನ್ನು ನೋವು, ಕಾಲು ನೋವು, ಊತ, ಖಿನ್ನತೆಗಳನ್ನು ನಿಯಂತ್ರಿಸಬಹುದು.
ಬರೀ ತಲೆಯ, ಪಾದದ ಮಸಾಜ್ ಕೂಡ ಚೇತೋಹಾರಿ ಅನುಭವ ನೀಡುತ್ತದೆ. ಮಸಾಜ್ ನಂತರ ಸ್ವೇದನ ಉತ್ತಮ. ಇದರಿಂದ ಬೆವರಿನ ಮೂಲಕ ದೇಹದ ಕಲ್ಮಷಗಳು ಹೊರಹಾಕಲ್ಪಡುತ್ತವೆ. ಆದರೆ ಸ್ವೇದನವನ್ನು (ಹಬೆಸ್ನಾನ/ಸ್ಟೀಮ್) ಋತುಮಾನ ಹಾಗೂ ತಮ್ಮ ಬಲಕ್ಕೆ ಅನುಗುಣವಾಗಿ ತೆಗೆದುಕೊಳ್ಳಬೇಕು.
ಬೆನ್ನು, ಮಂಡಿ ಇತ್ಯಾದಿ ನೋವುಗಳಿಗೆ ಅಭ್ಯಂಗ ಮಾಡುವವರು ಕೆಲವು ದಿವಸ ಸತತವಾಗಿ ಮಾಡಿಸಿಕೊಳ್ಳುವುದು ಉತ್ತಮ. ಇದಕ್ಕೆ ನೋವುಶಾಮಕ ಎಣ್ಣೆಗಳಾದ ಕರ್ಪೂರಾದಿ, ನಾರಾಯಣ ತೈಲ, ಧನ್ವಂತರಿ ತೈಲ ಇತ್ಯಾದಿಗಳ ಬಳಕೆ ಉತ್ತಮ.
ಯಾರು ಮಸಾಜ್ ಮಾಡಿಸಿಕೊಳ್ಳಬಾರದು?
ನೋವು ಅತಿಯಾಗಿದ್ದಾಗ, ಉರಿಯೂತವಿದ್ದಲ್ಲಿ (ಇನ್ಫ್ಲಮೇಶನ್) ಒತ್ತಿ ಮಸಾಜ್ ಮಾಡಬಾರದು. ಅಲ್ಲದೇ ತೀವ್ರವಾದ ಸ್ಲಿಪ್ ಡಿಸ್ಕ್, ಹೃದ್ರೋಗಿ, ತೀವ್ರ ರಕ್ತದೊತ್ತಡದ ರೋಗಿಗಳು, ಕ್ಯಾನ್ಸರ್, ಅಪಸ್ಮಾರ, ರಕ್ತಹೆಪ್ಪುಗಟ್ಟುವ ತೊಂದರೆ (ಥ್ರೋಂಬೋಸಿಸ್), ಗೌಟ್ ಮುಂತಾದ ಮಂಡಿ ನೋವುಗಳು, ಗಾಯಗಳು, ಇತ್ಯಾದಿ ತೊಂದರೆಗಳಿದ್ದಲ್ಲಿ ಅಭ್ಯಂಗ ಮಾಡಿಸಬಾರದು. ಸಾಧಾರಣವಾಗಿಯೂ ಮೀನ ಖಂಡಗಳು ಮತ್ತು ಕುತ್ತಿಗೆ ಭಾಗದಲ್ಲಿ ಅಭ್ಯಂಗದ ಒತ್ತಡ ಬಹಳ ಮೆತ್ತಗಿರುವಂತೆ ನೋಡಿಕೊಳ್ಳಬೇಕು.
ಕುತ್ತಿಗೆಯಲ್ಲಿ ಮೆದುಳಿಗೆ ಹೋಗುವ ಮುಖ್ಯ ರಕ್ತನಾಳಗಳಿವೆ (ಕೆರೋಟಿಡ್ಸ್). ಇದನ್ನು ಹೆಚ್ಚು ಒತ್ತುವುದರಿಂದ ಕಣ್ಣುಕತ್ತಲೆ, ಮೂರ್ಛೆ ಹೊಂದುವ ಸಾಧ್ಯತೆ ಇದೆ. ಅದೇ ರೀತಿ ಕಾಲಿನ ಮೀನಖಂಡ ಗಳನ್ನು ಜೋರಾಗಿ ಉಜ್ಜಿದಲ್ಲಿ ಮುಂಚೆ ರಕ್ತ ಹೆಪ್ಪುಗಟ್ಟಿದ ಗರಣೆ (ಕ್ಲಾಟ್) ಇದ್ದಲ್ಲಿ ಅದು ಅಲ್ಲಿಂದ ಜಾರಿ ರಕ್ತಸಂಚಾರದಲ್ಲಿ ಸೇರಿ ಶ್ವಾಸಕೋಶ ಸೇರಿ ಮಾರಣಾಂತಿಕವಾಗುವ ಭಯವಿದೆ. ಹಾಗೆಯೇ ಹೆಚ್ಚು ಹಿಸುಕಿಸಿಕೊಂಡು ಸ್ನಾಯು ಊತ, ಮಾಂಸದಲ್ಲಿ ಉರಿಯೂತವೂ ಆಗಬಹುದು. ಮಸಾಜ್ ಮಾಡಿಸಿಕೊಳ್ಳುವಾಗ ಇವೆಲ್ಲದರ ಕಾಳಜಿಯಿರಲಿ.
ಬೇಸಿಗೆಯಲ್ಲಿ ಮಸಾಜ್: ಸುಡು ಬಿಸಿಲ ಕಾಲದಲ್ಲಿ ತಂಪುನೀಡುವ ತ್ರಿಫಲಾದಿ, ಚಂದನಾದಿ ಮುಂತಾದ ತೈಲದಲ್ಲಿ ಅಭ್ಯಂಜನ ಮಾಡಿಸಿಕೊಂಡು ಗುಲಾಬಿ ಅರ್ಕ ಲಾವಂಚ, ಚಂದನ ಮುಂತಾದುವುಗಳನ್ನು ಸೇರಿಸಿರುವ ಸುಖೋಷ್ಣ ನೀರಿನ ಸ್ನಾನ ಬಹಳ ಆಹ್ಲಾದಕರ. ಇದು ಬೆವರಿನಿಂದಾಗುವ ತೊಂದರೆ ಕಡಿಮೆಮಾಡಿ, ಚರ್ಮದ ಸೌಂದರ್ಯವನ್ನೂ ಕಾಪಾಡುತ್ತದೆ. ಬಿಸಿಲುಗಾಲದಲ್ಲಿ ಸ್ಟೀಮ್ ತೆಗೆದುಕೊಳ್ಳದಿರುವುದು ಒಳಿತು.
ಪೌಡರ್ ಮಸಾಜ್: ತ್ರಿಫಲಾ, ಪಂಚವಲ್ಕಲ ಮುಂತಾದ ರೂಕ್ಷಚೂರ್ಣ (ಒಣಪುಡಿ)ಗಳನ್ನು ಬಳಸಿ ಒಂದು ಪ್ರಕಾರದ ಅಭ್ಯಂಗವಿದೆ. ಇದಕ್ಕೆ ಉದ್ವರ್ತನ ಎಂದು ಹೆಸರು. ಇದು ಮೇದಸ್ಸು ಕರಗಿಸಲು ಜೋತು ಬಿದ್ದ ಚರ್ಮ, ಮಾಂಸಗಳನ್ನು ಗಟ್ಟಿಗೊಳಿಸಲು ಸ್ವಲ್ಪ ಮಟ್ಟಿಗೆ ಸಹಾಯ ಮಾಡುತ್ತದೆ. ಕೆಲಥರದ ಮಸಾಜ್ ವಿಧಾನಗಳನ್ನು ಕ್ರೀಡಾ ಚಿಕಿತ್ಸೆಯಲ್ಲೂ (ಸ್ಪೋರ್ಟ್ಸ್ ಮೆಡಿಸಿನ್) ಅಳವಡಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಮಸಾಜ್ ಎಂದರೆ ಎಲ್ಲ ನೋವುಗಳಿಗೆ ರಾಮಬಾಣ ಅಲ್ಲ. ಇದೊಂದು ಪೂರಕ ಚಿಕಿತ್ಸೆ. ಇದನ್ನು ನಿಯಮಿತವಾಗಿ ಮಾಡಿಸಿಕೊಳ್ಳುವುದು ಸೂಕ್ತ. ಆರೋಗ್ಯವನ್ನು ಕಾಪಾಡುವಲ್ಲಿ, ದೇಹಕ್ಕೆ ಆಹ್ಲಾದವನ್ನೊದಗಿಸಲು, ಚೈತನ್ಯ ಹೆಚ್ಚಿಸಲು ಇದೊಂದು ಅತ್ಯುತ್ತಮ ಸಾಧನ.
ಗಮನದಲ್ಲಿಡಬೇಕಾದ ಅಂಶಗಳು
* ಊಟವಾದ ಕೂಡಲೇ ಮಸಾಜ್ ಬೇಡ
* ಜ್ವರ ಅಥವಾ ಇನ್ನಾವುದಾದರೂ ಸೋಂಕು, ಗಾಯ, ಊತ, ಉರಿಯೂತ, ಹೃದ್ರೋಗ, ಅತಿಯಾದ ರಕ್ತದೊತ್ತಡ, ಮೂಳೆ ಮುರಿತ, ತೀವ್ರಸ್ಲಿಪ್ಡಿಸ್ಕ್, ಅಪಸ್ಮಾರ ಮುಂತಾದ ಮಾನಸಿಕ ರೋಗಗಳಿದ್ದಲ್ಲಿ ಮಸಾಜ್ ಮಾಡಿಸಬೇಡಿ.
* ಶುಚಿತ್ವದ ಬಗ್ಗೆ ಆದ್ಯತೆ ನೀಡಿ. ಮಸಾಜ್ ಮೇಜನ್ನು ಚೆನ್ನಾಗಿ ಶುದ್ಧೀಕರಿಸಿರಬೇಕು. ಇಲ್ಲವಾದಲ್ಲಿ ಚರ್ಮದ ಸೋಂಕು ತಗಲುವ ಅಪಾಯವಿದೆ.
* ಮಸಾಜ್ ನಂತರ ಹಬೆಸ್ನಾನವಾದೊಡನೆ ಕಾದಾರಿದ ನೀರನ್ನು (ಅಥವಾ ಎಳನೀರು) ಸೇವಿಸಿ.