ಮಂಗಳೂರು ಎಪ್ರಿಲ್.17 : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಲಾಲ್‌ಬಾಗ್, ಮಂಗಳೂರು ಇಲ್ಲಿನ ಚಾವಡಿಯಲ್ಲಿ ಶುಕ್ರವಾರ ಅಕಾಡೆಮಿ ಪ್ರಕಟಿತ ಪುಸ್ತಕಗಳ ಬಿಡುಗಡೆ ಸಮಾರಂಭ ಕಾರ್ಯಕ್ರಮವು ನಡೆಯಿತು.
ಈ ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಡಾ.ಎಂ.ಎಸ್. ದುರ್ಗಾ ಪ್ರವೀಣ್ ಮತ್ತು ಬೆನೆಟ್ ಜಿ.ಅಮ್ಮನ್ನ ಇವರ ಸಂಪಾದಕತ್ವದಲ್ಲಿ ಬಾಸೆಲ್ ಮಿಶನರಿಗಳ ತುಳು ಟಿಪ್ಪಣಿಗಳು ಪುಸ್ತಕವನ್ನು ರೈಟ್. ರೆವೆ. ಡಾ.ಸಿ.ಎಲ್ ಫುರ್ಟಾಡೋ ಬಿಡುಗಡೆಗೊಳಿಸಿದರು, ಉಪನ್ಯಾಸಕರಾದ ಡಾ.ಮಹಾಲಿಂಗ ಭಟ್ ಪುಸ್ತಕ ಪರಿಚಯ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಮ್. ಜಾನಕಿ ಬ್ರಹ್ಮಾವರ ವಹಿಸಿದ್ದರು. ಮಂಗಳೂರು ಕರ್ನಾಟಕ ತಿಯೊಲಾಜಿಕಲ್ ಕಾಲೇಜಿನ ಪ್ರಾಂಶುಪಾಲರಾದ ರೆವೆ. ಡಾ. ಹನಿ ಕೆಬ್ರಾಲ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಎ ಸುಬ್ಬಣ್ಣ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಎನ್.ಪಿ ಶೆಟ್ಟಿ ಮುಲ್ಕಿ ಇವರಿಂದ ಬರೆಯಲ್ಪಟ್ಟ ತುಳು ಪ್ರವಚನೆಕಾರೆ-ಯಕ್ಷರಂಗ ಸಾಧಕೆ ಕುಬೇರ್ ಮುಡಲ್ಲ್ ಪುಟ್ಟಣ್ಣ ಶೆಟ್ರ್ ಪುಸ್ತಕವನ್ನು ಡಾ. ನಾರಾಯಣ ಶೆಟ್ಟಿ ಇವರು ಬಿಡುಗಡೆಗೊಳಿಸಿದರು. ಶ್ರೀ ತಾರಾನಾಥ ವರ್ಕಾಡಿ ಪುಸ್ತಕ ಪರಿಚಯ ಮಾಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ಉಪಸ್ಥಿತರಿದ್ದರು.