ಕುಂದಾಪುರ: ಗೋಪಾಡಿಯಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದು ಬರ್ಭರವಾಗಿ ಹತ್ಯೆಗೀಡಾಗಿದ್ದ ಇಂದಿರಾ ಮೊಗವೀರ ಅವರ ಮನೆಗೆ ಶನಿವಾರ ಸಂಜೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಈ ಸಂದರ್ಭ ಇಂದಿರಾ ಅವರ ಪತಿ ಆನಂದ ಅವರ ಜೊತೆ ಮಾತನಾಡಿದ ಅವರು ಸ್ಥಳೀಯರೊಂದಿಗೆ ಚರ್ಚೆ ನಡೆಸಿ ಘಟನೆಯ ವಿವರ ಪಡೆದುಕೊಂಡರು.
ನಂತರ ಮಾತನಾಡಿದ ಶೋಭಾ, ಕುಂದಾಪುರ ತಾಲೂಕಿನಲ್ಲಿ ಹಲವು ಪ್ರಕರಣಗಳು, ಮಹಿಳೆಯರ ಕೊಲೆ ಪ್ರಕರಣಗಳು ನಡೆದಿದ್ದು, ಯಾವುದೇ ಪರಿಣಾಮಕಾರಿ ತನಿಖೆ ನಡೆದಿಲ್ಲ ಎನ್ನುವುದನ್ನು ಸ್ಥಳೀಯರು ಗಮನಕ್ಕೆ ತಂದಿದ್ದಾರೆ. ಅಲ್ಲದೇ ಇಂದಿರಾ ಕೊಲೆ ಅತ್ಯಂತ ಕ್ರೂರತೆಯಿಂದ ಕೂಡಿದ್ದು, ಕೊಲೆ ಆರೋಪಿಗಳನ್ನು ತಕ್ಷಣವೇ ಬಂಧಿಸಿ ತನಿಖೆ ನಡೆಸುವಂತೆ ಎಸ್ಪಿಯವರಿಗೆ ಸೂಚಿಸಲಾಗುತ್ತದೆ ಎಂದವರು ಹೇಳಿದರು.
ಕರಾವಳೀ ತೀರದಲ್ಲಿ ಇರುವ ರಸ್ತೆಗಳಿಗೆ ದಾರಿ ದೀಪ ಹಾಗೂ ಕೆಲವು ಮನೆಗಳಿಗೆ ಸಿಆರ್‌ಝೆಡ್ ನೆಪವೊಡ್ಡಿ ವಿದ್ಯುತ್ ಸಂಪರ್ಕ ಕಲ್ಪಿಸದಿರುವುದು ಪ್ರತೀ ಕುಟುಂಬದ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತೆ ಎಂದ ಅವರು ಇಂತಹಾ ಕ್ರಮ ಸರಿಯಲ್ಲ. ಬೀದಿ ದೀಪ ಅಳವಡಿಸಲು ಮನೆ ಬಾಗಿಲಿಗೆ ಕಂಬ ಬಂದಿದ್ದರೂ ವಿದ್ಯುತ್ ಸಂಪರ್ಕಕ್ಕೆ ಮೀನಮೇಷ ಎಣಿಸುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಗ್ರಾಮ ಪಂಚಾಯಿತಿ ಸದಸ್ಯ ರವೀಂದ್ರ ದೊಡ್ಮನೆ, ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲೀ ಸುವರ್ಣ, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ್ ಕಾವೇರಿ, ಕುಂದಾಪುರ ವೃತ್ತ ನಿರೀಕ್ಷಕ ಪಿ.ಎಂ ದಿವಾಕರ ಹಾಗೂ ಉಪನಿರೀಕ್ಷಕ ನಾಸೀರ್ ಹುಸೇನ್, ಮಹಿಳಾ ಒಕ್ಕೂಟದ ಅಧ್ಯಕ್ಷೆ ರಾಧಾದಾಸ್, ಸಾಮಾಜಿಕ ಕಾರ್ಯಕರ್ತ ಗಣೇಶ್ ಪುತ್ರನ್, ಗಣೇಶ್ ಭಟ್ ಮೊದಲಾದವರು ಹಾಜರಿದ್ದರು.