ಮಂಗಳೂರು, ಎ.19: ನಗರ ಹೊರವಲಯದ ಶಕ್ತಿನಗರದಲ್ಲಿರುವ ಸಾನ್ನಿಧ್ಯ ವಸತಿ ಶಾಲೆಯ ಭಿನ್ನ ಸಾಮರ್ಥ್ಯದ ಮಕ್ಕಳು ತಯಾರಿಸಿದ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಕದ್ರಿ ಪಾರ್ಕ್ ಶನಿವಾರ ಸಂಜೆ ಸಾಕ್ಷಿಯಾಯಿತು. ಸ್ವತಃ ಪ್ರಸಿದ್ಧ ಕಲಾವಿದರನ್ನು ನಾಚಿಸುವಂತಹ ವಿಭಿನ್ನ ಶೈಲಿಯ ಕಲಾಕೃತಿ, ಕರಕುಶಲ ವಸ್ತುಗಳು ‘ವಿಷನ್-2015’ ಹೆಸರಿನಲ್ಲಿ ಅನಾವರಣಗೊಂಡಿತು.
ಮಂಗಳೂರು ನಗರ ಪೊಲೀಸ್ ಆಯುಕ್ತ ಎಸ್.ಮುರುಗನ್ ವಸ್ತುಪ್ರದರ್ಶನವನ್ನು ಉದ್ಘಾಟಿಸಿ, ಜಗತ್ತಿನಲ್ಲಿ ಯಾರೂ ಅಸಮರ್ಥರಲ್ಲ. ಪ್ರತಿಯೊಬ್ಬನಲ್ಲೂ ಸಾಮರ್ಥ್ಯ ಅಡಗಿದೆ. ಅವು ಗಳನ್ನು ಗುರುತಿಸುವಲ್ಲಿ ವ್ಯವಸ್ಥೆ ಸೋತಿದೆ. ಹಾಗಾಗಿ ಇಂತಹ ಪ್ರತಿಭೆಗಳನ್ನು ಹುಡುಕಿ ತೆಗೆಯುವ ಪ್ರಯತ್ನ ಆಗಬೇಕಾಗಿದೆ ಎಂದರು.
ಪೆರ್ಮುದೆ ಶ್ರೀ ಸೋಮನಾಥೇಶ್ವರ ದೇವಳದ ಮ್ಯಾನೇಜಿಂಗ್ ಟ್ರಸ್ಟಿ ಪಿ.ಭುಜಂಗ ಶೆಟ್ಟಿ ಅತಿಥಿ ಭಾಷಣ ಮಾಡಿದರು. ಸಾನಿಧ್ಯ ಸಂಸ್ಥೆಯ ಆಡಳಿತಾ ಧಿಕಾರಿ ವಸಂತ್‌ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮಾಜಿ ಮೇಯರ್ ಮಹಾಬಲ ಮಾರ್ಲ ವಂದಿಸಿದರು. ಶಾರದಾ ಕೆ.ಬಿ. ಕಾರ್ಯಕ್ರಮ ನಿರೂಪಿಸಿದರು.
‘ವಿಷನ್-2015’ರ – ವಸ್ತು ವಿಶೇಷತೆ..
ದಿನಪತ್ರಿಕೆಗಳನ್ನು ಬಳಸಿಕೊಂಡು ತಯಾರಿಸಿದ ವಿವಿಧ ಮಾಧರಿಯ ಬ್ಯಾಗ್, ಕ್ಯಾನ್ವಾಸ್‌ನಲ್ಲಿ ಮೂಡಿಬಂದ ಸುಂದರ ವರ್ಣ ಚಿತ್ತಾರ, ಮನಸ್ಸನ್ನು ಮುದಗೊಳಿಸುವ ಪ್ಲವರ್ ವಾಜ್, ಯಕ್ಷ ಮುಖವಾಡ… ಹೀಗೆ ಒಬ್ಬೊಬ್ಬರದ್ದು ಒಂದೊಂದು ಶೈಲಿಯಲ್ಲಿ ಮೂಡಿ ಬಂತು.
ಶಿಕ್ಷಕರಿಂದ ತರಬೇತಿ ಪಡೆದ ಭಿನ್ನ ಸಾಮರ್ಥ್ಯದ ಮಕ್ಕಳು ಸ್ವತಃ ತಾವೇ ತಯಾರಿಸಿದ ಹಲವು ಮಾದರಿಯ ಕಲಾಕೃತಿಗಳು, ಕರಕುಶಲ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಮಾರಾಟಕ್ಕೂ ಅನುವು ಮಾಡಿಕೊಟ್ಟಿದ್ದರು. ವಿವಿಧ ವಿನ್ಯಾಸ ಕ್ಯಾಂಡಲ್, ತಲೆದಿಂಬು ಮತ್ತದರ ಕವರ್, ಪ್ಲವರ್ ಪಾಟ್, ಯಕ್ಷಗಾನದ ಮುಖವಾಡಗಳು ಗಮನಸೆಳೆದವು. ದಿನಪತ್ರಿಕೆ ಯನ್ನು ಬಳಸಿ ತಯಾರಿಸಿದ ಬ್ಯಾಗ್‌ಗಳಿಗೆ ಬಣ್ಣ ಹಚ್ಚಿ ಆಕರ್ಷಕಗೊಳಿಸಲಾಗಿತ್ತು. ಜತೆಗೆ ಬಳೆ, ಸರಗಳು ಕೂಡಾ ಮನಸೆಳೆದವು. ಕ್ಯಾನ್ವಾಸ್‌ನಲ್ಲಿ ಮೂಡಿಬಂದ ಚಿತ್ರಗಳು ವಿಶೇಷ ಮಕ್ಕಳ ಕಲಾ ಶ್ರೀಮಂತಿಕೆಗೆ ಸಾಕ್ಷಿಯಾಗಿತ್ತು.