ಮಂಗಳೂರು, ಏ.22: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಕಾಣಿಸಿಕೊಂಡ ಮಳೆಯ ಆರ್ಭಟಕ್ಕೆ ಜನತೆ ಬೆಚ್ಚಿಬಿದ್ದಿದ್ದಾರೆ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರಾತ್ರಿ ಹೊತ್ತು ಭಾರೀ ಗುಡುಗು, ಸಿಡಿಲು, ಮಿಂಚು ಸಹಿತ ಭರ್ಜರಿ ಮಳೆಯಾಗಿದ್ದು, ಪತ್ತೂರಿನಲ್ಲಿ ಸಿಡಿಲಿನ ಆಘಾತಕ್ಕೆ ಓರ್ವ ಮಹಿಳೆ ಬಲಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಕಂಚಿಮಾರು ಎಂಬಲ್ಲಿ ದನದ ಕೊಟ್ಟಿಗೆಗೆ ಬಡಿದ ಸಿಡಿಲಿಗೆ ದನವೊಂದು ಅಸುನೀಗಿದೆ.
ಮಂಗಳವಾರ ಸಂಜೆಯ ಬಳಿಕ ಮಂಗಳೂರು ನಗರ ಸೇರಿದಂತೆ ಬಂಟ್ವಾಳ. ಬೆಳ್ತಂಗಡಿ, ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ ಮೊದಲಾದೆಡೆ ವರುಣ ಆರ್ಭಟಿಸಿದ್ದು, ದೂರವಾಣಿ, ವಿದ್ಯುತ್ ಉಪಕರಣಗಳು, ಮನೆ, ಕೃಷಿ ಬೆಳೆಗಳಿಗೆ ಅಪಾರ ಹಾನಿ ಉಂಟಾಗಿದೆ.
ಸಿಡಿಲಿಗೆ ದನ ಸಾವು:
ಬೆಳ್ತಂಗಡಿ ತಾಲೂಕಿನಾದ್ಯಂತ ಮಂಗಳವಾರ ಕಾಣಿಸದಿಕೊಂಡ ಗುಡುಗು ಸಿಡಿಲಿನಿಂದ ಕೂಡಿದ ಮಳೆಗೆ ಧರ್ಮಸ್ಥಳ ಗ್ರಾಮದ ಕಂಚಿಮಾರು ಎಂಬಲ್ಲಿ ಸಿಡಿಲಿನ ಆಘಾತಕ್ಕೆ ತುತ್ತಾಗಿ ದನವೊಂದು ಬಲಿಯಾಗಿದೆ. ದನವಿದ್ದ ಕೊಟ್ಟಿಗೆ ಪಕ್ಕದಲ್ಲಿದ್ದ ಮನೆಯೂ ಸಿಡಿಲಿನ ಹೊಡೆತಕ್ಕೆ ಹಾನಿಗೀಡಾಗಿದ್ದು, ಮನೆಯಲ್ಲಿದ್ದ ಪ್ರಭಾಕರ ಎಂಬರಿಗೆ ಗಾಯಗಳಾಗಿದೆ. ಸಂಜೆ 5ರ ಸುಮಾರಿಗೆ ಈ ಘಟನೆ ನಡೆದಿದ್ದು, ಕೊಟ್ಟಿಗೆಯಲ್ಲಿದ್ದ ದನಗಳ ಪೈಕಿ ಒಂದು ದನ ಮೃತಪಟ್ಟರೆ, ಉಳಿದ ದನ, ಕರುಗಳು ಅಪಾಯದಿಂದ ಪಾರಾಗಿವೆ.