ಕುಂದಾಪುರ: ಆ ಮನೆಯ ಎದುರು ಹಾಕಿದ್ದ ಚಪ್ಪರ ನೆಲಕಚ್ಚಿತ್ತು, ತೋರಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು, ಶುಭಕಾರ್ಯಕ್ಕೆ ನೆಟ್ಟಿದ್ದ ಬಾಳೆ ದಿಂಡುಗಳು ಅನಾಥವಾಗಿ ನೆಲಕ್ಕುರುಳಿದ್ದವುಸಿನು ಮನೆಯೊಳಗಿನ ವಸ್ತುಗಳು ಪುಡಿಯಾಗಿದ್ದವು. ಇದೆಲ್ಲವೂ ನೋಡಿದ್ರೇ ಇಲ್ಲೇನೋ ಅನಾಹುತವಾಗಿದೆಯೆಂಬುದು ತಿಳಿಯುತ್ತೆ. ಅಷ್ಟಕ್ಕೂ ಇಲ್ಲಿ ಆಗಿದ್ದಾದ್ರೂ ಏನು? ಮದುವೆ ಮನೆಯಲ್ಲಿ ಆದ ಅವಾಂತರವಾದ್ರೂ ಏನು ಎಂಬ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ, ನೋಡಿ..
ಹೌದು..ಇದು ಬೈಂದೂರು ತೆಗ್ಗರ್ಸೆ ಸಮೀಪದ ನೆಲ್ಯಾಡಿ ಅರಳೀಕಟ್ಟೆ ಮದುವೆ ಮನೆ. ಬುಧವಾರ ಈ ಮನೆ ಮಗನಿಗೆ ಮದುವೆ. ಅದಕ್ಕಾಗಿಯೇ ಮನೆಯ ಮುಂದೆ ತಳಿರು ತೋರಣಗಳು ಸ್ವಾಗತ ಕೋರುತ್ತಿದ್ದವು. ಆದ್ರೇ ಮದುವೆಗೆ ಮನೆಯವರೆಲ್ಲಾ ಹೋದ ಬಳಿಕ ಅಂದ್ರೆ ಬುಧವಾರ ಮಧ್ಯಾಹ್ನದ ಬಳಿಕ ಎಲ್ಲವೂ ದ್ವಂಸವಾಗಿತ್ತು.
ಹಳೆಯ ದ್ವೇಷದ ನೆಪದಲ್ಲಿ ಸಹೋದರರಿಬ್ಬರು ಮದುವೆಯ ಮನೆಯಾದ ಸ್ವಂತ ಚಿಕ್ಕಮ್ಮನ ಮನೆಗೇ ಬೆಂಕಿಯಿಟ್ಟ ಘಟನೆಯೊಂದು ಇಲ್ಲಿ ನಡೆದೇ ಬಿಟ್ಟಿತ್ತು.
ಸದ್ಯ ಮೂವರು ಪೊಲೀಸರ ಅತಿಥಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನೆಲ್ಯಾಡಿ ಅರಳೀಕಟ್ಟೆ ನಿವಾಸಿಗಳಾದ ರಾಜೇಶ್ ಶೆಟ್ಟಿ ಯಾನೇ ರಾಜೇಂದ್ರ (32), ರಾಘವೇಂದ್ರ ಶೆಟ್ಟಿ(30) ಹಾಗೂ ಆತನ ಮಾವ ರಂಗಯ್ಯ(75) ಎನ್ನಲಾಗಿದೆ. ಚಿಕ್ಕಮ್ಮನ ಮನೆಗೆ ಬೆಂಕಿಯಿಟ್ಟ ಬಳಿಕ ಬಿಜೂರಿನ ಬಾರೊಂದರಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಇಬ್ಬರು ಆರೋಪಿಗಳು ಸೇರಿದಂತೆ ಅವರಿಗೆ ಕುಮ್ಮಕ್ಕು ನೀಡಿದ ಅವರ ಸೋದರ ಮಾವನನ್ನು ಬೈಂದೂರು ಪೋಲೀಸರು ಬಂಧಿಸಿದ್ದಾರೆ.
ಅಷ್ಟಕ್ಕೂ ಘಟನೆಗೆ ಕಾರಣವಿಷ್ಟೇ. ಅರಳೀಕಟ್ಟೆಯಲ್ಲಿ ಮೂರ್‍ನಾಲ್ಕು ದಾಯಾದಿಗಳ ಮನೆಯಿದೆ. ಅದರಲ್ಲಿ ನಾಗಮ್ಮ ಶೆಡ್ತಿ ಹಾಗೂ ಸುಶೀಲ ಶೆಡ್ತಿ ಎಂಬುವರು ಒಂದೇ ಮನೆಯಲ್ಲಿ ವಾಸಿಸುತ್ತಿದ್ರು. ಅವರ ಮನೆ ಪಕ್ಕದಲ್ಲಿ ಆರೋಪಿಗಳಾದ ರಾಜೇಂದ್ರ ಶೆಟ್ಟಿ ಹಾಗೂ ಆತನ ಸಹೋದರ ರಾಘವೇಂದ್ರ ಶೆಟ್ಟಿ ವಾಸಿಸುತ್ತಿದ್ದಾರೆ. ಸುಮಾರು ವರ್ಷಗಳಿಂದ ಈ ಎರಡೂ ಮನೆಯವರ ನಡುವೆ ರಸ್ತೆಗೆ ಸಂಬಂಧಿಸಿ ಆಗಾಗ ರಂಪಾಟವಾಗುತ್ತಿತ್ತಂತೆ.
ಏಪ್ರಿಲ್ 22 ರಂದು (ಬುಧವಾರ) ಸುಶೀಲ ಶೆಡ್ತಿಯವರ ಮಗ ಸುಭಾಶ್ಚಂದ್ರ ಶೆಟ್ಟಿ ಎಂಬುವರಿಗೆ ಉಪ್ಪುಂದದ ಯುವತಿಯೊಂದಿಗೆ ಹೆಮ್ಮಾಡಿ ಸಮೀಪದ ಸಭಾಗೃಹದಲ್ಲಿ ಮದುವೆ ಕಾರ್ಯಕ್ರಮವಿತ್ತು. ಈ ಸಂದರ್ಭ ಸ್ಥಳೀಯ ಮಹಿಳೆಯೋರ್ವರನ್ನು ಮನೆಯಲ್ಲಿ ನಿಲ್ಲಿಸಿ ಎಲ್ಲರೂ ಮದುವೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ್ದ ಆರೋಪಿಗಳಾದ ರಾಜೇಶ್ ಹಾಗೂ ರಾಘವೇಂದ್ರ ಇಬ್ಬರು ಮನೆಯಂಗಳಕ್ಕೆ ಬಂದು ಮನೆಯಲ್ಲಿದ್ದ ಕಾವೇರಿ ಮೊಗವೀರರನ್ನು ಗದರಿಸಿ ಕೊಲೆ ಬೆದರಿಕೆ ಹಾಕಿ ಮನೆಯ ಬಾಗಿಲು ಒಡೆದು ಒಳನುಗ್ಗಿ ಮನೆಯಲ್ಲಿದ್ದ ಸೊತ್ತುಗಳನ್ನು ಹಾನಿ ಮಾಡಿ ನಂತರ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಮನೆ ಹೊರಗಿನ ಚಪ್ಪರ, ತಳಿರು ತೋರಣಗಳನ್ನು ಧ್ವಂಸ ಮಾಡಿದ್ದಾರೆ.
ಈ ಸಂದರ್ಭ ಗಡಿಬಿಡಿಗೊಂಡ ಮಹಿಳೆ ಬೊಬ್ಬೆ ಹೊಡೆದಿದ್ದಾರೆ. ತಕ್ಷಣ ಸ್ಥಳೀಯರು ಓಡಿ ಬಂದು ಬೆಂಕಿ ನಂದಿಸಿದ್ದಾರಾದರೂ ಮನೆಯೊಳಗಿದ್ದ ಟಿವಿ, ಮಂಚ, ಪೀಟೋಪಕರಣಗಳು, ದೇವರ ಫೋಟೋಗಳು, ಸಂಪೂರ್ಣ ಸುಟ್ಟು ಹೋಗಿದ್ದು ಸುಮಾರು ಎರಡು ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದಾ ಒಂದಿಲ್ಲೊಂದು ಕ್ರೈಮ್ ಮಾಡಿಕೊಂಡಿದ್ದ ಈ ಇಬ್ಬರೂ ಸೋದರರು ಯಾವುದೇ ಕೆಲಸ ಮಾಡದೇ ಪೋಲಿ ಅಲೆಯುತ್ತಿದ್ದರು. ಯಾರಾದರೂ ಇವರ ಬಗ್ಗೆ ಮಾತನಾಡಿದರೇ ಅವರಿಗೆ ಬೆದರಿಕೆ ಒಡ್ಡುವ ರೌಡಿಸಂ ಪ್ರವೃತ್ತಿ ಹೊಂದಿದ್ದ ಇಬ್ಬರು ಈ ಹಿಂದೆಯೂ ಕೆಲವು ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾಗಿದೆ. ಒಂದೂವರೆ ತಿಂಗಳ ಹಿಂದೆ ಸಾರ್ವಜನಿಕರಿಗೆ ಕತ್ತಿ ತೋರಿಸಿ ಬೆದರಿಕೆ ಹಾಕಿ ದಾಂಧಲೆ ನಡೆಸಿದ್ದ ಆರೋಪದಲ್ಲಿ ಇವರಲ್ಲಿ ಓರ್ವನ ಮೇಲೆ ಪ್ರಕರಣ ದಾಖಲಾಗಿದ್ದು, ಹತ್ತು ದಿನಗಳ ಕಾಲ ಜೈಲುವಾಸ ಅನುಭವಿಸಿದ್ದ ಎನ್ನಲಾಗಿದೆ.
ಒಟ್ಟಿನಲ್ಲಿ ಮದುವೆ ಸಂಭ್ರಮದಲ್ಲಿ ಚಿಕ್ಕಮ್ಮನ ಮನೆಗೆ ಬೆಂಕಿ ಹಚ್ಚಿದ ಘಟನೆ ಎಷ್ಟು ಸರಿ ಎಂಬ ಬಗ್ಗೆ ಇಡೀ ಊರಿಗೆ ಊರೇ ಮಾತನಾಡಿಕೊಳ್ಳುತ್ತಿದೆ. ಮದುವೆ ಸಂಭ್ರಮದಲ್ಲಿದ್ದ ಮನೆಗೆ ತೀರಾ ಹಿತ್ತಿರದ ಸಂಬಂಧಿಕರೇ ಶತ್ರುಗಳಾಗಿದ್ದು ಮಾತ್ರ ವಿಪರ್ಯಾಸವೇ ಸರಿ.
ಚಿತ್ರ, ವರದಿ- ಯೋಗೀಶ್ ಕುಂಭಾಸಿ