ಬೆಳ್ತಂಗಡಿ,ಎ.23 : ಅಕ್ರಮ ಮರಳು ಸಾಗಾಟ ಲಾರಿ ಯೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಕೆಲಸಕ್ಕೆ ತೆರಳುತ್ತಿದ್ದ ತಂದೆ-ಮಗ ಭೀಕರವಾಗಿ ಮೃತಪಟ್ಟ ಘಟನೆ ಉಜಿರೆ ಸಮೀಪ ನಡೆದಿದೆ. ಲಾೈಲ ಗ್ರಾಮದ ಗಾಂಧಿನಗರ ನಿವಾಸಿ ದಿನೇಶ್(49) ಮತ್ತು ಅವರ ಮಗ ಅಭಿಷೇಕ್ (22) ಮೃತಪಟ್ಟ ದುರ್ದೈವಿಗಳು.
ಘಟನೆಯ ವಿವರ: ತಂದೆ ಮತ್ತು ಮಗ ಮಧ್ಯಾಹ್ನ ಮನೆಯಲ್ಲಿ ಊಟ ಮುಗಿಸಿ ತಾವು ನಿರ್ವಹಿಸುತ್ತಿದ್ದ ಉಜಿರೆಯ ಸಾಯಿ ಇಂಡಸ್ಟ್ರೀಸ್‍ಗೆ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಅಕ್ರಮ ಮರಳು ಸಾಗಾಟದ ಲಾರಿಯು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಉಜಿರೆ ಸಮೀಪದ ಬೆನಕ ಆಸ್ಪತ್ರೆಯ ಮುಂಭಾಗದ ವಠಾರಕ್ಕೆ ಚಿಮ್ಮಿದೆ. ಬೈಕ್‍ನಿಂದ ಬಿದ್ದ ತಂದೆ ಮಗನನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರಾದರೂ ದಾರಿ ಮಧ್ಯೆ ಇಬ್ಬರೂ ಮೃತಪಟ್ಟಿದ್ದಾರೆ.
ಶಿರಾಡಿ ಘಾಟಿ ದುರಸ್ತಿ ಹಿನ್ನೆಲೆಯಲ್ಲಿ ಅಕ್ರಮ ಮರಳು ಸಾಗಾಟದ ಲಾರಿಗಳು ನಿಮಿಷಕ್ಕೊಂದರಂತೆ ಸಾಗುತ್ತಿದೆ. ಈ ವಾಹನಗಳು ಇನ್ನಿತರ ವಾಹನ ಸವಾರರು ಹಾಗೂ ಪಾದಾಚಾರಿಗಳಿಗೆ ಯಮರೂಪಿಗಳಾಗುತ್ತಿದ್ದಾರೆ. ಇತ್ತೀಚೆಗೆ ಉಜಿರೆ ಸಮೀಪ ಅಕ್ರಮ ಮರಳು ಲಾರಿಗೆ ಸಿಕ್ಕಿ ಡಿಎಸ್‍ಎಸ್ ಕಾರ್ಯಕರ್ತರಿಬ್ಬರು ಸಾವನ್ನಪ್ಪಿದ್ದರು. ಏಪ್ರಿಲ್ 15ರಂದು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಪ.ಜಾತಿ, ಪಂಗಡದ ಕುಂದುಕೊರತೆ ಸಭೆಯಲ್ಲಿ ಮರಳು ಸಾಗಾಣಿಕೆ ಲಾರಿಗಳ ಮೇಲೆ ಕಡಿವಾಣ ಹಾಕಲು ಆಗ್ರಹಿಸಲಾಗಿತ್ತು. ಇದು ಆಗಿ ಕೇವಲ 6 ದಿನದಲ್ಲಿ ತಂದೆ ಮಗನ ಸಾವಿಗೆ ಈ ಅಕ್ರಮ ಮರಳು ಸಾಗಾಟದ ಲಾರಿ ಕಾರಣವಾಗಿದೆ.
ನಿತ್ಯ ಟ್ರಾಫಿಕ್ ಜಾಮ್ :
ಚಾರ್ಮಾಡಿ ಘಾಟಿಯಲ್ಲಿ ಇತ್ತೀಚೆಗೆ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದಂತೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಉಜಿರೆಯಿಂದ ಗುರುವಾಯನಕೆರೆ ತನಕ ದಿನಪೂರ್ತಿ ಟ್ರಾಫಿಕ್ ಜಾಮ್ ಆಗುತ್ತಿದೆ. ಸುಗಮ ಸಂಚಾರಕ್ಕೆ ಪ್ರಯತ್ನಿಸುವುದೇ ಬೆಳ್ತಂಗಡಿ ಪೊಲೀಸರಿಗೆ ದೊಡ್ಡ ಸಾಹಸವಾಗಿದೆ. ಮೊದಲೇ ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಬೆಳ್ತಂಗಡಿ ಪೊಲೀಸರು ತನ್ನ ಇತಿ ಮಿತಿಯೊಳಗೆ ಸುಗಮ ಸಂಚಾರಕ್ಕೆ ದುಡಿಯುತ್ತಿದ್ದರೂ ದಿನ್ನಕೆರಡು ಅಪಘಾತ ನಡೆಯುತ್ತಲೇ ಇದೆ.